Advertisement

ಎತ್ತಿನಹೊಳೆ ಯೋಜನೆ ತಂದ ಜನಪ್ರತಿನಿಧಿಗಳಿಗೆ ಪಾಠ ಕಲಿಸಲು ನೋಟಾ ಅಭಿಯಾನ

01:00 PM Jan 24, 2018 | Team Udayavani |

ಮಂಗಳೂರು: ಎತ್ತಿನಹೊಳೆ ಯೋಜನೆಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಬರಿದುಗೊಳಿಸಲು ನಿರ್ಧರಿಸಿರುವ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಜನತೆ ನೋಟಾ ಮತ ಚಲಾಯಿಸುವಂತೆ ಸಹ್ಯಾದ್ರಿ ಸಂಚಯವು ಅಭಿಯಾನ ನಡೆಸಲಿದೆ. ಜತೆಗೆ ಸೂಕ್ತ ಅಭ್ಯರ್ಥಿಗಳಿದ್ದರೆ ಚುನಾವಣೆಗೂ ಸ್ಪರ್ಧಿಸಲಾಗುವುದು ಎಂದು ಸಂಚಯದ ಸಂಚಾಲಕ ದಿನೇಶ್‌ ಹೊಳ್ಳ ತಿಳಿಸಿದ್ದಾರೆ. 

Advertisement

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಿನೇಶ್‌ ಹೊಳ್ಳ ಅವರು, ಈ ರೀತಿಯ ನೋಟಾ ಅಭಿಯಾನದಲ್ಲಿ ಚುನಾವಣೆಯ ಫ‌ಲಿತಾಂಶಕ್ಕಿಂತಲೂ ಚಲಾವಣೆಗೊಂಡ ನೋಟಾ ಮತಗಳ ಸಂಖ್ಯೆ ಮುಖ್ಯವಾಗುತ್ತದೆ. ಜತೆಗೆ ಮುಂದೆ ಇಂತಹ ಮಾರಕ ಯೋಜನೆಗಳನ್ನು ಜಾರಿಗೆ ತರುವಾಗ ಜನಪ್ರತಿನಿಧಿಗಳು ಆಲೋಚನೆ ಮಾಡುತ್ತಾರೆ ಎಂದರು.

ನೋಟಾದಲ್ಲಿ ಎನ್‌ ಎಂದರೆ “ನೇತ್ರಾವತಿ’ಯನ್ನು, ಒ ಎಂದರೆ  “ಒಗ್ಗಟ್ಟಾಗಿ’, ಟಿ ಎಂದರೆ “ತಮ್ಮದು’ ಎಂದು, 
ಎ ಎಂದರೆ “ಅನುಮೋದಿಸೋಣ’ ಎಂದರ್ಥ ಎಂದು ಹೊಳ್ಳ ಅವರು ವಿಶಿಷ್ಟವಾಗಿ ವ್ಯಾಖ್ಯಾನಿಸಿದರು.

ಜತೆಗೆ, “ನೇತ್ರಾವತಿಯನ್ನು ರಕ್ಷಿಸಲಾಗದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷದ ಯಾವುದೇ ರಾಜಕಾರಣಿಗಳು ಮತ ಕೇಳಲು ಬರಬೇಡಿ. ನಿಮಗೆ ನಮ್ಮ ಮತ ಬಹಿಷ್ಕಾರ ಮತ್ತು ಧಿಕ್ಕಾರ’ ಎಂಬ ಬರಹದ ಫಲಕವನ್ನು ಸಿದ್ಧಪಡಿಸಿದ್ದು, ತಮ್ಮ ಗೇಟ್‌ಗಳಿಗೆ ಅಳವಡಿಸುವುದಾದರೆ ಅದನ್ನು ಉಚಿತವಾಗಿ ನೀಡಲಿದ್ದೇವೆ. ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಿದ ಕ್ಷೇತ್ರದಲ್ಲಿ ನೋಟಾ ಅಭಿಯಾನ ಇರುವುದಿಲ್ಲ. ಉಳಿದ ಕ್ಷೇತ್ರಗಳಲ್ಲಿ ಅಭಿಯಾನ ನಡೆಸುತ್ತೇವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 7,800 ನೊಟಾ ಮತಗಳು ಹಾಗೂ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆಯಲ್ಲಿ 28,000 ನೋಟಾ ಮತಗಳು ಚಲಾವಣೆಗೊಂಡಿದ್ದವು, ಈ ಬಾರಿ ಹೆಚ್ಚಿನ ಮತಗಳು ಚಲಾವಣೆಗೊಳ್ಳುವ ನಿರೀಕ್ಷೆ ಇದೆ ಎಂದರು. 

ಡಿಸೆಂಬರ್‌ನಲ್ಲೇ ಕಾಡ್ಗಿಚ್ಚು
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಾರ್ಚ್‌ ಬಳಿಕ ಉಂಟಾಗುತ್ತಿದ್ದ ಕಾಡ್ಗಿಚ್ಚು ಈ ಬಾರಿ ಡಿಸೆಂಬರ್‌ನಲ್ಲೇ ಕಾಣಿಸಿಕೊಂಡಿದೆ. ಗಾಂಜಾ, ಎಸ್ಟೇಟ್‌ ಮಾಫಿಯಾ ಇದರ ಹಿಂದೆ ಕೆಲಸ ಮಾಡುತ್ತಿದೆ.  ಅರಣ್ಯ ಇಲಾಖೆ ನಿಯಂತ್ರಿಸಲು ಸಾಧ್ಯವಿಲ್ಲದಷ್ಟು ದೊಡ್ಡ ಪ್ರಮಾಣದಲ್ಲಿ ಮಾಫಿಯಾ ಕೆಲಸ ಮಾಡುತ್ತಿದೆ. ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದಾರೆ. ಕಾಡುಪ್ರಾಣಿಗಳ ಬೇಟೆಯೂ ಎಗ್ಗಿಲ್ಲದೆ ನಡೆಯುತ್ತಿದ್ದು, ಒಂದು ಕಾಡುಕೋಣವನ್ನು ಬೇಟೆಯಾಡಿದರೆ 3 ಲಕ್ಷ ರೂ.ಗಳ ವರೆಗೆ ಗಳಿಸುತ್ತಾರೆ ಎಂದರು. 

Advertisement

ನಕ್ಸಲರಿರುವುದು ಸುಳ್ಳು!
ಶಿರಾಡಿ ಭಾಗದಲ್ಲಿ ರೆಸಾರ್ಟ್‌, ಗಾಂಜಾ ಮಾಫಿಯಾ ವ್ಯಾಪಕವಾಗಿದ್ದು, ನಕ್ಸಲರಿದ್ದಾರೆ ಎಂಬ ಸುಳ್ಳು ಸುದ್ದಿಯನ್ನೂ ಈ ಮಾಫಿಯಾಗಳೇ ಸೃಷ್ಟಿಸುತ್ತಿವೆ. ಇದಕ್ಕೆ ಹೆದರಿ ಜನರು ಅತ್ತ ಕಡೆ ಹೋಗುವುದಿಲ್ಲ. ಸುಳ್ಳು ಸುದ್ದಿಯನ್ನು ಹಬ್ಬಿಸಿ ಸರಕಾರವನ್ನೂ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು. 

ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟದ ಶಶಿಧರ್‌ ಶೆಟ್ಟಿ ಮಾತನಾಡಿ, ಅರಣ್ಯಕ್ಕೆ ಬೆಂಕಿ ಬಿದ್ದಾಗ ಶೀಘ್ರ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಹೆಲಿಕಾಪ್ಟರ್‌ಗೆ ಬೇಡಿಕೆ ಮಂಡಿಸಿದರೆ ನಮ್ಮ ದೇಶ ಅಷ್ಟು ಶ್ರೀಮಂತವಲ್ಲ ಎಂಬ ಹಾಸ್ಯಾಸ್ಪದ ಉತ್ತರವನ್ನು ಅರಣ್ಯ ಸಚಿವರು ನೀಡುತ್ತಾರೆ. ಆನೆಗಳನ್ನು ಸಾಕಲಾಗದೆ ಅರಣ್ಯ ಇಲಾಖೆ ದಿವಾಳಿಯಾಗಿ, ಆನೆಗಳನ್ನು ಬೇರೆಡೆಗೆ ಸಾಗಿಸಲಾಗುತ್ತಿದೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜೇಶ್‌ ದೇವಾಡಿಗ, ಪವನ್‌, ಹರೀಶ್‌ ಅಡ್ಯಾರ್‌, ಯತೀಶ್‌ ಸಾಲ್ಯಾನ್‌ ಉಪಸ್ಥಿತರಿದ್ದರು. 

ಜ. 26: ಕಾನನ ರೋದನ
ಪಶ್ಚಿಮ ಘಟ್ಟ ಹೊತ್ತಿ ಉರಿಯುತ್ತಿದ್ದು, ನದಿ ಮೂಲಗಳು ಬರಡಾಗುತ್ತಿವೆ. ನೇತ್ರಾವತಿ ನದಿಯೂ ಬರಿದಾಗುತ್ತಿದೆ. ಕಾಡನ್ನು ರಕ್ಷಿಸಬೇಕಾದ ಸರಕಾರ ಅಲ್ಪಸ್ವಲ್ಪ ಕಾಡನ್ನೂ ಅಳಿಸುತ್ತಿದೆ. ಇದನ್ನೆಲ್ಲ ವಿರೋಧಿಸಿ ಸರಕಾರದ ಗಮನ ಸೆಳೆಯಲು ಜ. 26ರಂದು ಬೆಳಗ್ಗೆ 10.15ಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಸಹ್ಯಾದ್ರಿ ಸಂಚಯದ ವತಿಯಿಂದ “ಕಾನನ ರೋದನ’ ಎಂಬ ವಿನೂತನ ಪ್ರತಿಭಟನೆ ನಡೆಯಲಿದೆ. ಈ ವೇಳೆ ಅರ್ಧ ಹಸಿರು, ಅರ್ಧ ಕಪ್ಪು ಬಣ್ಣದ ಮುಖವಾಡ ಧರಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ದಿನೇಶ್‌ ಹೊಳ್ಳ ಅವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next