Advertisement

ಇನ್ನೂ ಆಗಿಲ್ಲ ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ವಿಸ್ತರಣೆ!

02:07 PM Sep 27, 2017 | Team Udayavani |

ಮಂಗಳೂರು: ಯಶವಂತಪುರ-ಮಂಗಳೂರು ಮಧ್ಯೆ ಸಂಚರಿಸುವ ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಬೇಕು ಎನ್ನುವುದು ಆರಂಭದಿಂದಲೂ ಕೇಳಿಬರುತ್ತಿದ್ದರೂ ಇನ್ನೂ ವಿಸ್ತರಣೆ ನಿರ್ಧಾರವೇ ಆಗಿಲ್ಲ. 

Advertisement

ವಲಯ ಮಟ್ಟದ ರೈಲ್ವೇ ಬಳಕೆದಾರರ ಸಲಹಾ ಸಮಿತಿ (ಝಡ್‌ಆರ್‌ಯುಸಿಸಿ) ಸಭೆ ನಡೆಯದೇ ಇರುವುದರಿಂದ ರೈಲು ನಂ. 16575/576 ವಿಸ್ತರಣೆ ಪ್ರಸ್ತಾಪ ಇನ್ನು ನನೆಗುದಿಗೆ ಬಿದ್ದಿದೆ. ಹೀಗಾಗಿ ಸಭೆಗೆ ಕಾಯುವ ಬದಲು ಸಮಿತಿಯ ಎಲ್ಲ ಸದಸ್ಯರಿಗೆ ಪ್ರತ್ಯೇಕ ಪತ್ರ ಬರೆದು ಮಂಗಳೂರು ಸೆಂಟ್ರಲ್‌ಗೆ ಆದಷ್ಟು ಬೇಗ ವಿಸ್ತರಿಸಬೇಕು ಎನ್ನುವ ಒತ್ತಾಯಗಳು ಕೇಳಿಬಂದಿವೆ. 

ರೈಲು ವಿಸ್ತರಣೆಗೆ ಮಂಗಳೂರು ಸೆಂಟ್ರಲ್‌ನಲ್ಲಿ ಫ್ಲಾಟ್‌ಫಾರಂ ಕೊರತೆಯನ್ನು ದ. ರೈಲ್ವೇ ವಲಯ ನೀಡಿತ್ತು. ಆದ್ದರಿಂದ ಫ್ಲಾಟ್‌ಫಾರಂ ಹೊಂದಿಸಿಕೊಳ್ಳಲು ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಕಾಚಿಗುಡ ಎಕ್ಸ್‌ಪ್ರೆಸ್‌, ಮಂಗಳೂರು ಸೆಂಟ್ರಲ್‌-ಪುದುಚೇರಿ ಎಕ್ಸ್‌ಪ್ರೆಸ್‌ ಹಾಗೂ ಮಂಗಳೂರು ಸೆಂಟ್ರಲ್‌-ಚೆನ್ನೈ ಎಗ್ಮೋರ್‌ ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆಯನ್ನು ಕಂಕನಾಡಿ ಜಂಕ್ಷನ್‌ಗೆ ಸ್ಥಳಾಂತರಿಸುವ ಬಗ್ಗೆ ಪಾಲ್ಘಾಟ್‌ ವಿಭಾಗ ದಕ್ಷಿಣ ರೈಲ್ವೇ ವಲಯಕ್ಕೆ ಕಳಿಸಿತ್ತು. ಪಾಲ್ಘಾಟ್‌ ವಿಭಾಗ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿಯೂ ಈ ವಿಚಾರ ಪ್ರಸ್ತಾವವಾಗಿತ್ತು. ವಿಸ್ತರಣೆ ಸಂಬಂಧ ಪ್ರಯಾಣಿಕರ ಸಂಖ್ಯೆ ಬಗ್ಗೆ ದ.ರೈಲ್ವೇ ವಲಯ ಕೇಳಿದ್ದು 2016 ನವೆಂಬರ್‌ನಿಂಧ 2017ರ ಎಪ್ರಿಲ್‌ವರೆಗೆ ಮಾಹಿತಿಯನ್ನು ನೀಡಲಾಗಿತ್ತು. 

ವಿಳಂಬ ಯಾಕೆ ? 
ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಅನ್ನು ಮಂಗಳೂರು ಜಂಕ್ಷನ್‌ಗೆ ವಿಸ್ತರಿಸುವ ಪ್ರಸ್ತಾವಕ್ಕೆ ಗ್ರೀನ್‌ ಸಿಗ್ನಲ್‌ ನೀಡಲು ರೈಲ್ವೇ ಅಧಿಕಾರಿಗಳು ದಕ್ಷಿಣ ರೈಲ್ವೇ ವಲಯ ಝಡ್‌ಆರ್‌ಯುಸಿಸಿ ಸಭೆ ನಡೆಯುವುದನ್ನು ಕಾಯುತ್ತಿದ್ದಾರೆ. ಒಂದು ವೇಳೆ ಮುಂದಿನ ಸಭೆಯಲ್ಲಿ ಪ್ರಸ್ತಾವನೆ ಮಂಡನೆಯಾಗಿ ರೈಲಿನ ವಿಸ್ತರಣೆ ಹಾಗೂ ಸ್ಥಳಾಂತರದ ಬಗ್ಗೆ ಸದಸ್ಯರಿಂದ ಆಕ್ಷೇಪಣೆಗಳು ಬರದಿದ್ದರೆ ಪ್ರಕ್ರಿಯೆಗಳು ಮುಂದುವರಿಯಲಿವೆ. ಆದರೆ ಝಡ್‌ಆರ್‌ಯುಸಿಸಿ ಸಭೆ ಮುಂದೆ ಯಾವಾಗ ನಡೆಯಲಿದೆ ಎಂಬ ಮಾಹಿತಿ ಇಲ್ಲ. ಝಡ್‌ಆರ್‌ಯುಸಿಸಿ ಸದಸ್ಯರಿಗೆ ಪತ್ರ ಬರೆಯುವುದೇ ಸದ್ಯ ಇರುವ ದಾರಿಯಾಗಿದ್ದು ವಿಸ್ತರಣೆ ಕಾರ್ಯರೂಪಕ್ಕೆ ಬರಬಹುದು. ಹಿಂದೆ ಕಾರವಾರ-ಯಶವಂತ ಪುರ ಎಕ್ಸ್‌ ಪ್ರಸ್‌ ಹಗಲು ರೈಲಿನ (ನಂ. 16515/516) ಸಂಚಾರವನ್ನು ತುಮಕೂರು ಬದಲಿಗೆ ನೆಲಮಂಗಲ-ಶ್ರವಣಬೆಳಗೊಳ ಮೂಲಕ ವರ್ಗಾಯಿಸುವ ಸಂದರ್ಭದಲ್ಲೂ ಅಧಿಕಾರಿಗಳು ಇದೇ ಕ್ರಮ ಅನುಸರಿಸಿದ್ದರು. 

ಗೋಮಟೇಶ್ವರ ಎಕ್ಸ್‌ಪ್ರೆಸ್‌ರೈಲನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಬೇಕು ಎಂಬ ಪ್ರಸ್ತಾವನೆ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಝಡ್‌ಆರ್‌ಸಿಸಿ ಸಭೆಯಲ್ಲಿ ಮಂಡನೆಯಾಗಿ ಚರ್ಚೆಯಾಗ ಬೇಕಾಗಿದೆ. ಅಲ್ಲಿ ಯಾವುದೇ ಆಕ್ಷೇಪಗಳು ಬಾರದಿದ್ದರೆ ಅನುಮೋದನೆ ನಿಟ್ಟಿನಲ್ಲಿ ದಕ್ಷಿಣ ರೈಲ್ವೇ ಮುಂದಿನ ಕ್ರಮ ಕೈಗೊಳ್ಳಲಿದೆ.
ನರೇಶ್‌ ಲಾಲ್ವಾನಿ, ಡಿಆರ್‌ಎಂ, 
ಪಾಲ್ಗಾಟ್‌ ರೈಲ್ವೇ ವಿಭಾಗ

Advertisement

ಗೋಮಟೇಶ್ವರ ರೈಲು ವಿಸ್ತರಣೆಯ ಪೂರಕ ಪ್ರಸ್ತಾವನೆಗಳು ಈಗಾಗಲೇ ದಕ್ಷಿಣ ರೈಲ್ವೇಗೆ ಹೋಗಿವೆ. ಅದು ಶೀಘ್ರ ಕಾರ್ಯಗತಗೊಳ್ಳುವ ನಿಟ್ಟಿನಲ್ಲಿ ತ್ವರಿತ ಪ್ರಕ್ರಿಯೆಗಳು ನಡೆಯಬೇಕಾಗಿದೆ. ಇದಕ್ಕೆ ಝಡ್‌ಆರ್‌ಯುಸಿಸಿ ಸಭೆಗಾಗಿ ಕಾಯದೆ ಸದಸ್ಯರಿಗೆ ಪತ್ರ ಬರೆದು ಅಭಿಪ್ರಾಯ ಪಡೆದು ತತ್‌ಕ್ಷಣದಲ್ಲಿ ನಿರ್ಧಾರ ಕೈಗೊಳ್ಳಲು ಸಾಧ್ಯವಿದೆ.
ಅನಿಲ್‌ ಹೆಗ್ಡೆ, 
ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿಕರ ಅಭಿವೃದ್ಧಿ ಸಂಘದ  ಸಲಹೆಗಾರ 

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next