Advertisement

ಇನ್ನೂ ಮುಗಿದಿಲ್ಲ ವಸತಿ ನಿಲಯ ಗೊಂದಲ!

01:15 AM Aug 14, 2020 | mahesh |

ಬೆಂಗಳೂರು: ಎಸೆಸೆಲ್ಸಿ ಫ‌ಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಪ್ರಥಮ ಪಿಯುಸಿ ಪ್ರವೇಶ ಪ್ರಕ್ರಿಯೆ ಚುರುಕುಗೊಂಡಿದೆ. ಆದರೆ ಸರಕಾರಿ ಮತ್ತು ಖಾಸಗಿ ವಸತಿ ಶಾಲೆ ಹಾಗೂ ವಸತಿ ನಿಲಯಗಳ ಪ್ರವೇಶಕ್ಕೆ ಸಂಬಂಧಿಸಿ ಸರಕಾರದ ಮಾರ್ಗಸೂಚಿ ಇನ್ನೂ ಬಿಡುಗಡೆಯಾಗಿಲ್ಲ. ಇದರಿಂದ ಬಹುತೇಕ ಹೆತ್ತವರು- ಪೋಷಕರಲ್ಲಿ ಗೊಂದಲ ಉಂಟಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ದಾಖಲಾತಿ ಬಹುತೇಕ ಪೂರ್ಣಗೊಂಡಿದೆ. ಅನೇಕ ಖಾಸಗಿ ಪಿಯು ಕಾಲೇಜುಗಳು ಈಗಾಗಲೇ ಸೀಟು ಮುಂಗಡ ಭರ್ತಿ ಮಾಡಿವೆ. ಆದರೂ ವಸತಿ ಸಹಿತ ಕಾಲೇಜು ಹಾಗೂ ಹಾಸ್ಟೆಲ್‌ಗ‌ಳಿಗೆ ಇನ್ನೂ ವಿದ್ಯಾರ್ಥಿಗಳು ಸೇರಿಕೊಂಡಿಲ್ಲ. ದಾಖಲಾತಿ ಮಾಡಿದ್ದೇವೆ. ಆದರೆ ಹಾಸ್ಟೆಲ್‌ಗೆ ಸೇರಿಸಬೇಕೇ ಅಥವಾ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಬೇಕೇ ಎಂಬ ಕುರಿತು ಕಾಲೇಜು ಆರಂಭವಾದ ಬಳಿಕ ಯೋಚಿಸಬೇಕಾಗಿದೆ ಎಂದು ಪಾಲಕರು ಹೇಳುತ್ತಾರೆ.

Advertisement

ಕಟ್‌ಆಫ್ ‌ಗೆ ಕೊಕ್‌
ಕೊರೊನಾ ಪರಿಣಾಮವಾಗಿ ಕಾಲೇಜುಗಳು ಈ ವರ್ಷ ಕಟ್‌ ಆಫ್ ಮಾರ್ಕ್‌ಗೆ ಕೊಕ್‌ ನೀಡಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ಆಧಾರದಲ್ಲಿ ದಾಖಲಾತಿ ನಡೆಸುತ್ತಿವೆ.

ಹೊರಜಿಲ್ಲೆಯವರಿಗೆ ಸಮಸ್ಯೆ
ಮಾರ್ಗಸೂಚಿ ಪ್ರಕಟಿಸದೆ ಇರುವುದರಿಂದ ಶಿಕ್ಷಣಕ್ಕಾಗಿ ಬೇರೆ ಜಿಲ್ಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದೆ. ಸರಕಾರಿ ವಸತಿ ಶಾಲೆಗಳ ಜತೆಗೆ ಬಹುತೇಕ ಖಾಸಗಿ ವಸತಿ ಶಾಲಾ-ಕಾಲೇಜುಗಳಲ್ಲಿ, ಶಿಕ್ಷಣ ಟ್ರಸ್ಟ್‌ಗಳ ವಸತಿ ಶಾಲಾ- ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲು ರಾಜ್ಯದ ಬೇರೆ ಬೇರೆ ಭಾಗಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಆದರೆ 2020-21ನೇ ಸಾಲಿಗೆ ಮಕ್ಕಳನ್ನು ಹಾಸ್ಟೆಲ್‌ಗೆ ಅಥವಾ ವಸತಿ ಶಾಲೆಗೆ ಸೇರಿಸಲು ಹೆತ್ತವರು, ಪೋಷಕರು ಮನಸ್ಸು ಮಾಡುತ್ತಿಲ್ಲ. ಹಾಸ್ಟೆಲ್‌ಗ‌ಳ ಸುರಕ್ಷಾ ಕ್ರಮದ ಬಗ್ಗೆ ಸರಕಾರ ಈಗಲೇ ಮಾರ್ಗಸೂಚಿ ಪ್ರಕಟಿಸಬೇಕು. ಇಲ್ಲ ವಾದರೆ ಕಷ್ಟ ಎಂದು ಹೆತ್ತವರು ಹೇಳುತ್ತಾರೆ.

ಅಧಿಕೃತವಾಗಿ ದಾಖಲಾತಿ ಆರಂಭಿಸಲು ಬುಧವಾರ ಪದವಿಪೂರ್ವ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡಿದ್ದೇವೆ. ಇದರ ಅರ್ಥ ಕಾಲೇಜುಗಳಿಗೆ ವಿದ್ಯಾರ್ಥಿಗಳು ಹಾಜರಾಗಬೇಕೆಂದಲ್ಲ. ದಾಖಲಾತಿಯ ಆಧಾರದ ಮೇಲೆ ಲಭ್ಯ ಸಂಪನ್ಮೂಲಗಳನ್ನು ಬಳಸಿ ಪದವಿಪೂರ್ವ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಲಿವೆ.
– ಎಸ್‌. ಸುರೇಶ್‌ ಕುಮಾರ್‌, ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next