ಕುಷ್ಟಗಿ: ಮುಂಗಾರು ಮಳೆಗಳು ಮುಗಿದು, ಹಿಂಗಾರು ಮಳೆ ಕೊನೆಯ ಹಂತದಲ್ಲಿ ಭರ್ತಿಯಾಗಬೇಕಿದ್ದ ನಿಡಶೇಸಿ ಕೆರೆಗೆ ಇನ್ನೂ ಭರ್ತಿಯಾಗದೇ ಇರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ.
ನೀರಿನ ಸಂಗ್ರಹ ಸಾಮಾರ್ಥ್ಯ ಕಡಿಮೆಯಾಗಿದ್ದ ನಿಡಶೇಸಿ ಕೆರೆ ಸಾರ್ವಜನಿಕರ ಸಹಭಾಗಿತ್ವದಲ್ಲಿ 2019ರ ಫೆ. 7ರಿಂದ ಏಪ್ರೀಲ್ 13ವರೆಗೆ ನಿರಂತರವಾಗಿ 77 ದಿನಗಳವರೆಗೂ ಅಭಿವೃದ್ಧಿ ಕಾರ್ಯ ನಡೆದಿತ್ತು. ಆದರೆ, ಪ್ರಸಕ್ತ ವರ್ಷ ಏಪ್ರಿಲ್ ತಿಂಗಳಿನ ಅಶ್ವಿನಿ ಮಳೆಯಿಂದ ಪೂರ್ವ ಮುಂಗಾರು ಶುರುವಾಗಿ, ಮುಂಗಾರು ಮುಗಿದು, ಹಿಂಗಾರು ಹಂಗಾಮಿನ ಸ್ವಾತಿ ನಕ್ಷತ್ರದ ಮಳೆ ಪ್ರವೇಶವಾಗಿದೆ. ಇನ್ನೂ ವಿಶಾಖ, ಅನುರಾಧ ನಕ್ಷತ್ರಗಳ ಮಳೆ ಮಾತ್ರ ಇದ್ದು, ಈ ಮಳೆಯಲ್ಲಿ ನಿಡಶೇಸಿ ಕೆರೆ ಭರ್ತಿಯಾದೀತೆ ಎಂಬ ಪ್ರಶ್ನೆ ಕಾಡುತ್ತಿದೆ.
ಮಳೆ ಕೊರತೆ
ಈ ವರ್ಷ ವಾಡಿಕೆ ಮಳೆಗಿಂತ ಸರಾಸರಿ ಮಳೆ ಕಡಿಮೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಆಗಿರುವಷ್ಟು ಮಳೆ, ಹಿಂಗಾರು ಹಂಗಾಮಿನಲ್ಲಿ ಆಗಿಲ್ಲ. ಮುಂಗಾರು ಹಂಗಾಮಿನ ಬೆಳೆಗೆ ಪೂರಕವಾಗಿದ್ದು, ಕೆರೆ ಕಟ್ಟೆಗಳಿಗೆ ನೀರಿಲ್ಲ. ತಾಲೂಕಿನಲ್ಲಿ ನೀರಾವರಿ, ಜಿನಗು ಕೆರೆ ಸೇರಿದಂತೆ 41 ಕೆರೆಗಳ ಪೈಕಿ ತಾವರಗೇರಾ ರಾಯನಕೆರೆ ಮಾತ್ರ ಭರ್ತಿಯಾಗಿದ್ದು, ಉಳಿದೆಲ್ಲ ಕೆರೆಗಳಿಗೆ ಮಳೆ ಕೊರತೆಯಿಂದ ಕೆರೆ ತುಂಬುವ ಭಾಗ್ಯ ಬಂದಿಲ್ಲ. 327 ಎಕರೆ ವಿಸ್ತಾರದ ಕೆರೆಯಲ್ಲಿ 288 ಎಕರೆ ಮುಳುಗಡೆ ಪ್ರದೇಶವಿದೆ. 2007ರಲ್ಲಿ ಹಾಗೂ 2009ರಲ್ಲಿ ಕೆರೆ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿದಿದ್ದು, ಹೊರತು ಪಡಿಸಿದರೆ ಇಲ್ಲಿಯವರೆಗೂ ಕೋಡಿ ಮೀರಿ ಹರಿದಿಲ್ಲ. ಕೆರೆ ಅಭಿವೃದ್ಧಿ ಬಳಿಕ ಎರಡು ವರ್ಷದಲ್ಲಿ ಕೋಡಿ ಮಟ್ಟಕ್ಕೆ ಬಂದಿದ್ದು, ಅದರಾಚೆ ಹರಿದಿಲ್ಲ. ಸದರಿ ಕೆರೆಗೆ 2 ಕೋಟಿ ವೆಚ್ಚದಲ್ಲಿ ಕೆರೆ ಒಡ್ಡು ಬಲಪಡಿಸಲಾಗಿದೆ ಇನ್ನೂ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಆಕರ್ಷಕ ಉದ್ಯಾನವನ ನಿರ್ಮಾಣ ಹಂತದಲ್ಲಿದೆ. ಮಳೆ ಕೊರತೆಯಾದರೆ ಕೆರೆ ತುಂಬುವ ಯೋಜನೆಯಲ್ಲಿ ಕೃಷ್ಣ ನದಿ ನೀರು ಕೆರೆ ತುಂಬಿಸುವ ವಿಶ್ವಾಸವಿದ್ದು, ಈ ನಿಟ್ಟಿನಲ್ಲಿ ಕೆರೆ ತುಂಬುವ ಯೋಜನೆ ತಾಲೂಕಿನಲ್ಲಿ ಪ್ರಗತಿ ಹಂತದಲ್ಲಿ ಮುಂದುವರಿದಿದೆ.
ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ಭರ್ತಿಯಾಗಬೇಕಿದ್ದ ಕೆರೆ ಈವರೆಗೂ ಭರ್ತಿಯಾಗಿಲ್ಲ. ಇದೀಗ ಚಳಿಗಾಲ ಆರಂಭದ ಹಂತದಲ್ಲಿದ್ದು, ಕೆರೆಯ ಅಲ್ಲಲ್ಲಿ ಮಾತ್ರ ನೀರು ನಿಂತಿದ್ದು, ಸ್ಥಳೀಯ ವಲಸೆ ಹಕ್ಕಿಗಳ ಸಂಖ್ಯೆಯೂ ಕ್ಷೀಣವಾಗಿದೆ.
-ಪಾಂಡುರಂಗ ಆಶ್ರಿತ್, ಪಕ್ಷಿ ಛಾಯಾಗ್ರಾಹಕ ಮಾಜಿ ಅಧ್ಯಕ್ಷ ಪೀಕಾರ್ಡ್ ಬ್ಯಾಂಕ್, ಕುಷ್ಟಗಿ
ಈ ವರ್ಷದಲ್ಲಿ ಹೇಳಿಕೊಳ್ಳುವ ಮಳೆಯಾಗಿಲ್ಲ. ಕಳೆದ ಅ. 23ರಂದು ಸಂಜೆ ಸುರಿದ ಮಳೆಗೆ ಕೆರೆಗೆ ನೀರು ಬಂದಿಲ್ಲ. ಈ ಪ್ರದೇಶದಲ್ಲಿ ಮಳೆಯಾಗಿದ್ದರಿಂದ ಕೆರೆ ಅಂಗಳದ ತಗ್ಗು ಪ್ರದೇಶದಲ್ಲಿ ನೀರು ನಿಂತಿದ್ದು, ಅವು ಬಹು ದಿನಗಳವರೆಗೂ ಉಳಿಯುವುದಿಲ್ಲ. ಯಲಬುರ್ಗಾ ತಾಲೂಕಿನಲ್ಲಿ ಗರಿಷ್ಠ ಮಳೆಯಾದರೆ ನಿಡಶೇಸಿ ಕೆರೆಗೆ ನೀರು ಬರುವ ಸಾಧ್ಯತೆಗಳಿವೆ
. -ಭರಮಗೌಡ ಪಾಟೀಲ ಬ್ಯಾಲಿಹಾಳ
-ಮಂಜುನಾಥ ಮಹಾಲಿಂಗಪುರ