Advertisement

ಇನ್ನೂ ಅಭಿವೃದ್ಧಿ ಕಂಡಿಲ್ಲ ಕನಕಮಜಲು-ಮಳಿ ಕಾಲನಿ ರಸ್ತೆ

05:43 AM Feb 09, 2019 | Team Udayavani |

ಕನಕಮಜಲು: ಕನಕಮಜಲು ಗ್ರಾಮದ ಮಳಿ ಕಾಲನಿ ರಸ್ತೆ ತೀರ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ದಿನ ನಿತ್ಯ ಓಡಾಡುವ ಈ ಮಣ್ಣಿನ ರಸ್ತೆಯ ಹೊಂಡ, ಧೂಳುಗಳಿಂದ ನಿವಾಸಿಗಳು ಕಂಗೆಟ್ಟಿದ್ದಾರೆ. ದುರಸ್ತಿ ಕಾರ್ಯ ಹೆಸರಿಗಷ್ಟೆ ಸಿಮೀತವಾಗಿದೆ.

Advertisement

ಕನಕಮಜಲಿನಿಂದ ದೇರ್ಕಜೆ ಕಡೆಗೆ ಸಾಗುವ ರಸ್ತೆಯಲ್ಲಿ ಮಳಿ ಕಾಲನಿಗೆ ಹೋಗುವ ದಾರಿ ಕಾಣಬಹುದು. ಈ ಭಾಗದಲ್ಲಿ ಸುಮಾರು 12 ಪರಿಶಿಷ್ಟ ಜಾತಿ ಮನೆಗಳಿವೆ. ಕುಟುಂಬದ ನಿರ್ವಹಣೆಗೆ ಪ್ರತಿನಿತ್ಯ ಸಂಚರಿಸುವ ಜನರು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೆ ಕಷ್ಟಪಡುತ್ತಿದ್ದಾರೆ. 300 ಮೀಟರ್‌ ಇರುವ ರಸ್ತೆಯಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ಪಂಚಾಯತ್‌ ವತಿಯಿಂದ 50 ಮೀ. ಡಾಂಬರು ಹಾಕಿಸಲಾಗಿತ್ತು. ಆದರೆ ಸರಿಯಾದ ದುರಸ್ತಿ ಕಾಣದೆ ಸಂಪೂರ್ಣ ಶಿಥಿಲಗೊಂಡಿತ್ತು.

ಸ್ಥಳೀಯರು ಸುಳ್ಯ ಶಾಸಕರ ಮೂಲಕ 2018ರ ಅ. 5ರಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವರಿಗೆ ಮನವಿ ಸಲ್ಲಿಸಿದ್ದರು. ಸುಮಾರು 300 ಮೀ. ಉದ್ದದ ಈ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ 15 ಲಕ್ಷ ರೂ. ಅನುದಾನ ಅಗತ್ಯವಿದೆ ಎಂದು ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದರು.

ಸಚಿವರ ಅಧಿಕಾರಿಯಿಂದ ಉತ್ತರ
ಮಾಹಿತಿ ಹಕ್ಕು ನಿಯಮದ ಪ್ರಕಾರ ಶಾಸಕರ ಪತ್ರಕ್ಕೆ ಸಚಿವರಿಂದ ಆಗಿರುವ ಟಿಪ್ಪಣಿ ಆದೇಶವನ್ನು ಒದಗಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಗೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖಾ ಸಚಿವರ ಸಾರ್ವಜನಿಕ ಮಾಹಿತಿ ಅಧಿಕಾರಿ, ನ. 23ರಂದು ಸರಕಾರಿ ಆದೇಶ ಹೊರಡಿಸಲಾಗಿದೆ. ಜಿಲ್ಲಾಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖಾಧಿಕಾರಿಗಳಿಗೆ ಪ್ರತಿ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೊಸ ಪ್ರಸ್ತಾವನೆ: 20 ಕಾಲನಿ ಅಭಿವೃದ್ಧಿ
ಮಂಗಳೂರು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು 2019 ಜ. 18ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಪ.ಜಾತಿಯವರ ಕಾಲನಿಗಳಿಗೆ ಮೂಲ ಸೌಲಭ್ಯ ಒದಗಿಸಲು 1 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಬಿಡುಗಡೆ ಯಾದ ಅನುದಾನದಲ್ಲಿ 20 ಕಾಲನಿಗಳ ಅಭಿವೃದ್ಧಿ ಯೋಜನೆಗೆ ಹೊಸ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕಾಮಗಾರಿಗಳನ್ನು ಜಿಲ್ಲಾ ಪಂಚಾಯತ್‌ ಎಂಜಿನಿಯರಿಂಗ್‌ ವಿಭಾಗ ಮಂಗಳೂರು ಇವರು ಕೈಗೆತ್ತಿಕೊಳ್ಳಬೇಕಾಗಿ ಕೋರಿಕೆ ಸಲ್ಲಿಸಲಾಗಿದೆ ಎನ್ನುವ ಮಾಹಿತಿ ಲಭಿಸಿದೆ.

Advertisement

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸು ವಾಗ ಸುಳ್ಯ ಶಾಸಕರ ಮನವಿ ಮತ್ತು ಸಮಾಜ ಕಲ್ಯಾಣ ಇಲಾಖಾ ಸಚಿವರ ಆದೇಶವನ್ನು ಅವಗಣಿಸಲಾಗಿಯೇ ಎನ್ನುವ ಅನುಮಾನ ಕಾಡುತ್ತದೆ. ಗಡಿಭಾಗದ ಕನಕಮಜಲು ಗ್ರಾ.ಪಂ. ವ್ಯಾಪ್ತಿಯ ಮಳಿ ಪರಿಶಿಷ್ಟ ಜಾತಿ ಕಾಲನಿ ಸಂಪರ್ಕ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಕೋರಿಕೆ ಇಟ್ಟಿರುವ 15 ಲಕ್ಷ ರೂ. ಅನುದಾನ ಮಂಜೂರಾತಿ ಮನವಿಯನ್ನು ಪರಿಗಣಿಸದೆ ಅಲ್ಲಗಳೆಯಲಾಗಿದೆಯೇ? ಎಂಬೆಲ್ಲ ಪ್ರಶ್ನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರಿಸಬೇಕಿದೆ. ಶೀಘ್ರ ರಸ್ತೆ ದುರಸ್ತಿಗಾಗಿ ಇಲ್ಲಿನ ಜನರು ಆಗ್ರಹಿಸಿದ್ದಾರೆ.

ನಮಗೆ ಮಾಹಿತಿ ಇಲ್ಲಈ ಸಮಸ್ಯೆಯ ಕುರಿತು ಯಾವುದೇ ಮಾಹಿತಿ ಇಲ್ಲ. ಸಂಬಂಧಪಟ್ಟ ಇಲಾಖೆಯಿಂದ ನಮಗೆ ಉತ್ತರ ಬಂದಿಲ್ಲ.
– ಜನಾರ್ದನ, ಅಧಿಕಾರಿ,
ಎಂಜಿನಿಯರಿಂಗ್‌ ವಿಭಾಗ ಸುಳ್ಯ

ನ್ಯಾಯ ಒದಗಿಸಬೇಕುಬಹಳ ವರ್ಷಗಳಿಂದ ಕಾಡುತ್ತಿರುವ ಸಮಸ್ಯೆ ಇದಾಗಿದೆ. ಸರಕಾರಕ್ಕೆ ಸಲ್ಲಿಸಲಾದ ಪ್ರಸ್ತಾವನೆಗೆ ಧನಾತ್ಮಕ ಪ್ರತಿಕ್ರಿಯೆ ಬಂದರೂ, ಇನ್ನೂ ರಸ್ತೆ ದುರಸ್ತಿ ಮತ್ತು ಡಾಮರು ಭಾಗ್ಯ ಕಂಡಿಲ್ಲ. ಆದಷ್ಟು ಬೇಗ ಈ ಪ್ರದೇಶದ ಬಡ ನಿವಾಸಿಗಳಿಗೆ ನ್ಯಾಯ ಒದಗಿಸಿಕೊಡಬೇಕು.
 – ಕೆ. ಪದ್ಮನಾಭ ಭಟ್,
 ಸ್ಥಳೀಯರು

ಶಿವಪ್ರಸಾದ್‌ ಮಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next