Advertisement

ಇನ್ನೂ ನಿರ್ಧಾರವಾಗಿಲ್ಲ ಐಪಿಎಲ್‌ ವೇಳಾಪಟ್ಟಿ

12:30 AM Jan 04, 2019 | Team Udayavani |

ಹೊಸದಿಲ್ಲಿ: ಎಪ್ರಿಲ್‌, ಮೇ ತಿಂಗಳಿನಲ್ಲಿ ಸಾರ್ವತ್ರಿಕ ಚುನಾವಣೆಯಿಂದಾಗಿ ಐಪಿಎಲ್‌ ಪಂದ್ಯಾವಳಿಯ ಎಲ್ಲಿ ನಡೆಯಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಇದರ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿಲ್ಲ. ಅರ್ಧದಷ್ಟು ಪಂದ್ಯಗಳನ್ನಾದರೂ ಭಾರತದಲ್ಲಿ ನಡೆಸಲು ಯೋಚಿಸುತ್ತಿರುವ ಬಿಸಿಸಿಐ, ಚುನಾವಣಾ ದಿನಾಂಕ ಬಹಿರಂಗಗೊಳ್ಳಲು ಕಾಯುತ್ತಿದೆ.

Advertisement

2009ರಂತೆ ಈ ಬಾರಿಯ ಐಪಿಎಲ್‌ ಕೂಡ ಸಂಪೂರ್ಣವಾಗಿ ದೇಶದ ಹೊರಗಡೆ ನಡೆಯುವ ಸಾಧ್ಯತೆಯೊಂದು ದಟ್ಟವಾಗಿದೆ. 2014ರಲ್ಲಿ ಸುಮಾರು ಅರ್ಧದಷ್ಟು ಪಂದ್ಯಗಳನ್ನು ವಿದೇಶದಲ್ಲಿ ಆಡಲಾಗಿತ್ತು.

ಇತ್ತೀಚೆಗೆ ಬಿಸಿಸಿಐ ಹಾಗೂ ಕ್ರೀಡಾ ಸಚಿವಾಲಯ ಸಭೆ ನಡೆಸಿದ್ದು, ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು. ವಿದೇಶದಲ್ಲಿ ಐಪಿಎಲ್‌ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಸಚಿವಾಲಯಗಳ ಅನುಮತಿ ಅಗತ್ಯ
“ಗೃಹ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ಈ ವಿಚಾರದ ಕುರಿತು ಮಾಹಿತಿ ನೀಡಲಾಗಿದೆ. ಈ ಸಚಿವಾಲಯಗಳನ್ನು ಹೊರತುಪಡಿಸಿ ಭಾರತದಲ್ಲಿ ಐಪಿಎಲ್‌ ಪಂದ್ಯಾವಳಿ ನಡೆಸಲು ಕ್ರೀಡಾ ಸಚಿವಾಲಯದ ಅನುಮತಿಯೂ ಅಗತ್ಯವಿದೆ. ಬಿಸಿಸಿಐ ಕ್ರೀಡಾ ಸಚಿವಾಲಯದ ಅನುಮತಿಗೆ ಬೇಕಾದ ದಾಖಲೆಗಳನ್ನು ಸಿದ್ದಪಡಿಸುತ್ತಿದೆ’ ಎಂದು ಕ್ರಿಕೆಟ್‌ ಮಂಡಳಿಯ ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ, ಐಪಿಎಲ್‌ನ ಅಧಿಕೃತ ಪ್ರಸಾರಕರಾದ ಸ್ಟಾರ್ ನ್ಪೋರ್ಟ್ಸ್ ಹಾಗೂ ಫ್ರಾಂಚೈಸಿಗಳು ವಿದೇಶದಲ್ಲಿ ಐಪಿಎಲ್‌ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದವು ಎಂದು ಬಿಸಿಸಿಐ ಸಿಇಒ ರಾಹುಲ್‌ ಜೋಹ್ರಿ ತಿಳಿಸಿದ್ದರು.

Advertisement

ಈ ಬಾರಿಯ ಆವೃತ್ತಿಯೂ ಅದಷ್ಟು ಬೇಗ, ಅಂದರೆ ಮಾರ್ಚ್‌ ಅಂತ್ಯದ ವೇಳೆ ಆರಂಭವಾಗುವುದು ಎಂದು ನಿರೀಕ್ಷಿಸಲಾಗಿದೆ. ಐಪಿಎಲ್‌ ಮುಗಿದ ಕೂಡಲೇ ಏಕದಿನ ವಿಶ್ವಕಪ್‌ ಪಂದ್ಯಾವಳಿ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next