“ನಿನ್ನೆ ಕೊಟ್ಟ ಹೋಂ ವರ್ಕ್ ಎಲ್ಲಿ? ಎಲ್ರೂ ಬರೆದಿದ್ದೀರಾ? ಒಬ್ಬೊಬ್ಬರಾಗಿ ನೋಟ್‌ಬುಕ್ ತೋರಿಸಿ’ ಎಂದು ಬಾಲ್ಯದಲ್ಲಿ ಸ್ವಲ್ಪವೂ ಫ್ರೀ ಬಿಡದೇ ಕೆಲಸ ನೀಡುತ್ತಿದ್ದ ನನ್ನ ಗುರುಗಳ ಕಥೆ ಇದು. ಅವರು ಕ್ಲಾಸ್ ರೂಮ್‌ಗೆ ಎಂಟ್ರಿ ಆದ ನಂತರ ಕೇಳುವ ಮೊದಲ ಪ್ರಶ್ನೆಯೇ ಇದಾಗಿರುತ್ತಿತ್ತು. ವಿದ್ಯಾರ್ಥಿಗಳೆಲ್ಲರೂ ಎಸ್ ಸರ್.. ಎಂದರೆ, ನಾನು ಮಾತ್ರ “ನೋಟ್ಸ್ ಮರೆತುಬಂದೆ’ ಅಂತಲೋ “ಹುಷಾರು ಇರಲಿಲ್ಲ ಸರ್’ ಎಂದೋ ಹೇಳುತ್ತಿದ್ದೆ. ಆಗೆಲ್ಲಾ ಮೇಷ್ಟ್ರು ಜೊತೆಗಿದ್ದ ದಪ್ಪನೆಯ ಬೆತ್ತದ ಕೋಲು ನನಗೆ ಕಜಾjಯ ಕೊಡಲು ಕಾಯುತ್ತಿತ್ತು.
ಪ್ರತಿಬಾರಿಯೂ ಲೆಕ್ಕದ ಹೋಂವರ್ಕ್ ವಿಷಯದಲ್ಲಿ ದಿನಾಲೂ ಕೈ ಚಾಚುವುದೇ ಆಯಿತು. ಅವತ್ತೂಂದಿನ ಅಭ್ಯಾಸಬಲದಂತೆ, “ಹುಷಾರಿರಲಿಲ್ಲ ಸರ್, ಅದಕ್ಕೆ ಹೋಂ ವರ್ಕ್ ಮಾಡಿಲ್ಲ’ ಅಂದೆ. ಬಹುಶಃ ಅವತ್ತಿಗೆ ಮೇಷ್ಟ್ರ ತಾಳ್ಮೆಯೂ ಮುಗಿದಿತ್ತು ಅನಿಸುತ್ತದೆ. ಅವರು ನೇರವಾಗಿ ನಮ್ಮ ತಂದೆಗೇ ಹೇಳಿ ಕಳಿಸಿದರು.
ಮರುದಿನ ಶಾಲೆಗೆ ಬಂದ ನಮ್ಮ ತಂದೆ, ಮೇಷ್ಟ್ರ ಬಳಿಯಿದ್ದ ಬೆತ್ತ ತಗೊಂಡರು ನೋಡಿ: ಅವರು ಹೊಡೆದ ಛಡಿ ಏಟಿಗೆ ಚಡ್ಡಿ ಹರಿದಿತ್ತು. ಅವತ್ತೇ ಒಂದು ನಿರ್ಧಾರಕ್ಕೆ ಬಂದೆ, ಇನ್ನು ಮುಂದೆ ಏಟು ತಿನ್ನುವುದನ್ನ ಬಿಟ್ಟು ನಿಯತ್ತಾಗಿ ಓದಬೇಕು ಅಂತ.
ಅಂತೂ ಇಂತೂ ಎಕ್ಸಾಮ್ ಮುಗಿಸಿ ಪಿಯುಸಿಯಲ್ಲಿ ಕಾಮರ್ಸ್ ಸೇರಿದೆ. ಆನಂತರದಲ್ಲಿ ಲೆಕ್ಕ ಎಂದರೆ ಮನಸ್ಸು ಹಗುರವಾಯಿತು. ಹೋಂವರ್ಕ್, ಅಸೈನ್ಮೆಂಟ್‌ಗಳ ಬಗ್ಗೆ ಹೆಚ್ಚು ಜವಾಬ್ದಾರಿಯೂ ಬಂತು. ನಂತರ ಬಿಕಾಂ ಪದವಿ ಮುಗಿಸಿ ಈಗ ಪಿಜಿ ಮಾಡುತ್ತಿದ್ದೇನೆ.
ಶಿಕ್ಷಕರು ಶಿಕ್ಷೆ ಕೊಟ್ಟು ಕಲಿಸುವ ಸಂದರ್ಭಗಳು ಮೊದಲು ಕಹಿಯಾಗಿದ್ದರೂ ಮುಂದೆ ಉನ್ನತ ಮಟ್ಟ ತಲುಪಿದಾಗ ಜೇನಿನಷ್ಟೇ ಸವಿಯಾಗಿರುತ್ತದೆ. ಈಗ ಊರಿಗೆ ಹೋಗಿ ಮೇಷ್ಟ್ರನ್ನು ಮಾತಾಡಿಸಿದರೆ, ಮೊದಲು ಯಾವ ಬ್ಯಾಚು ಎಂದು ಕೇಳುತ್ತಾರೆ. ಅಗ ನಾನು “ಸರ್ ಹುಷಾರ್ ಇಲ್ಲಾ’ ಎಂದು ಹೇಳಿದರೆ ನಗುತ್ತಾ “ಗೊತ್ತಾಯ್ತು, ಗೊತ್ತಾಯ್ತು… ಪ್ರಶಾಂತ್ ಹೇಗಿದಿಯಾ.. ಗುರುತೇ ಸಿಗೊದಿಲ್ಲವಲ್ಲಯ್ನಾ’ ಎಂದು ಬೆನ್ನು ತಟ್ಟುತ್ತಾರೆ.
ಇ. ಪ್ರಶಾಂತ್‌ಕುಮಾರ್