Advertisement

Donald Trump; 3ನೇ ವಿಶ್ವಯುದ್ಧದ ಭವಿಷ್ಯ ನುಡಿದ ಡೊನಾಲ್ಡ್‌ ಟ್ರಂಪ್‌!

08:19 PM Apr 05, 2023 | Team Udayavani |

ನ್ಯೂಯಾರ್ಕ್‌: ಹಲವು ಹೈಡ್ರಾಮಾಗಳ ನಡುವೆ ಮಂಗಳವಾರ ತಡರಾತ್ರಿ(ಭಾರತೀಯ ಕಾಲಮಾನ) ಮ್ಯಾನ್‌ಹ್ಯಾಟನ್‌ ಕೋರ್ಟ್‌ಗೆ ಶರಣಾದ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ತಮ್ಮ ವಿರುದ್ಧ ಹೊರಿಸಲಾದ ಎಲ್ಲ 34 ಗಂಭೀರ ಆರೋಪಗಳನ್ನೂ ತಿರಸ್ಕರಿಸಿದ್ದಾರೆ.

Advertisement

ಅಲ್ಲದೇ, ಬೆಂಬಲಿಗರನ್ನು ಉದ್ದೇಶಿಸಿ ಸಾರ್ವಜನಿಕ ಭಾಷಣವನ್ನೂ ಮಾಡಿದ ಟ್ರಂಪ್‌, “ಅಮೆರಿಕದ ಪ್ರಸ್ತುತ ಸರ್ಕಾರವು ಇಡೀ ದೇಶವನ್ನೇ ನಾಶ ಮಾಡುತ್ತಿದೆ. ಬೈಡೆನ್‌ ಆಡಳಿತದಡಿಯಲ್ಲಿ ಜಗತ್ತು 3ನೇ ವಿಶ್ವಯುದ್ಧವನ್ನು ಎದುರಿಸಲಿದೆ’ ಎಂದಿದ್ದಾರೆ.

ಮಂಗಳವಾರ ನಡೆದ ವಿಚಾರಣೆ ವೇಳೆ, “ಅಕ್ರಮ ಸಂಬಂಧ ಮುಚ್ಚಿಡಲು ನೀಲಿ ಚಿತ್ರ ತಾರೆಗೆ ಹಣ ನೀಡಿರುವ ಪ್ರಕರಣ’ ಕುರಿತು ಮುಂದಿನ 65 ದಿನಗಳಲ್ಲಿ ಟ್ರಂಪ್‌ ವಿರುದ್ಧದ ಸಾಕ್ಷ್ಯಗಳನ್ನು ಸಲ್ಲಿಸುವುದಾಗಿ ಪ್ರಾಸಿಕ್ಯೂಟರ್‌ಗಳು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಟ್ರಂಪ್‌ ಪರ ವಕೀಲರಿಗೆ ಅಫಿಡವಿಟ್‌ ಸಲ್ಲಿಸಲು ಆ.8ರವರೆಗೆ ಕಾಲಾವಕಾಶ ನೀಡಿದ ಕೋರ್ಟ್‌, ವಿಚಾರಣೆಯನ್ನು ಡಿ.4ಕ್ಕೆ ಮುಂದೂಡಿದೆ.

ಅಂದರೆ, 2024ರ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗುವ 2 ತಿಂಗಳ ಮುಂಚೆ ಈ ವಿಚಾರಣೆ ನಿಗದಿಯಾಗಿದೆ. ಅಂದು ಟ್ರಂಪ್‌ ಅವರು ಕೋರ್ಟ್‌ನಲ್ಲಿ ಖುದ್ದು ಹಾಜರಿರಬೇಕಾಗುತ್ತದೆ.

ಇನ್ನೊಂದೆಡೆ, ತಮ್ಮ ವಿರುದ್ಧದ ಆರೋಪಗಳು, ಕೋರ್ಟ್‌ಗೆ ಶರಣಾಗತಿ ಮತ್ತಿತರ ಬೆಳವಣಿಗೆಗಳನ್ನೇ ಬಳಸಿಕೊಂಡು ರಾಜಕೀಯ ಲಾಭ ಪಡೆಯಲು ಟ್ರಂಪ್‌ ಕಾರ್ಯತಂತ್ರ ರೂಪಿಸಿದ್ದಾರೆ.

Advertisement

ನಾನಿದ್ದರೆ ದೇಶ ಉಳಿಯುತ್ತಿತ್ತು:
ಫ್ಲೋರಿಡಾದ ರೆಸಾರ್ಟ್‌ವೊಂದರಲ್ಲಿ ಭಾಷಣ ಮಾಡಿದ ಟ್ರಂಪ್‌, ನನ್ನ ಆಡಳಿತಾವಧಿಯಲ್ಲಿ ಯಾವುದೇ ದೇಶವು ಅಣ್ವಸ್ತ್ರ ಯುದ್ಧದ ಬಗ್ಗೆ ಸೊಲ್ಲೆತ್ತಿರಲಿಲ್ಲ. ಆದರೆ, ಈಗ ಹಲವು ದೇಶಗಳು ಅಣ್ವಸ್ತ್ರಗಳ ಬಳಕೆ ಬಗ್ಗೆ ಮುಕ್ತವಾಗಿ ಬೆದರಿಕೆ ಹಾಕುವ ಮಟ್ಟಿಗೆ ಬಂದಿವೆ. ಬೈಡೆನ್‌ ಆಡಳಿತಾವಧಿಯಲ್ಲಿ ಅಣ್ವಸ್ತ್ರಗಳ ಬಳಕೆಯುಳ್ಳ 3ನೇ ವಿಶ್ವ ಯುದ್ಧ ನಡೆಯುವುದು ಖಚಿತ ಎಂಬುದಕ್ಕೆ ಈ ಬೆಳವಣಿಗೆಯೇ ಸಾಕ್ಷಿ. ಇದರಿಂದ ನಾವು ಬಹಳ ದೂರವೇನೂ ಇಲ್ಲ ಎಂದಿದ್ದಾರೆ.

ಬೈಡೆನ್‌ ಆಡಳಿತದಲ್ಲಿ ಅಮೆರಿಕವು ಹದಗೆಟ್ಟು ಹೋಗಿದೆ. ಆರ್ಥಿಕತೆಯು ಪತನದಂಚಿಗೆ ಬಂದಿದೆ, ಹಣದುಬ್ಬರ ನಿಯಂತ್ರಣ ಮೀರಿ ಹೆಚ್ಚಳವಾಗುತ್ತಿದೆ. ರಷ್ಯಾ ಮತ್ತು ಚೀನಾ ಕೈಜೋಡಿಸಿವೆ. ಸೌದಿ ಅರೇಬಿಯಾ ಕೂಡ ಇರಾನ್‌ನೊಂದಿಗೆ ಸೇರಿಕೊಂಡಿದೆ. ಚೀನಾ, ರಷ್ಯಾ, ಇರಾನ್‌ ಮತ್ತು ಉತ್ತರ ಕೊರಿಯಾ ಸೇರಿಕೊಂಡು ಅಪಾಯಕಾರಿ ಮೈತ್ರಿ ಮಾಡಿಕೊಂಡಿವೆ. ನಾನು ಅಧ್ಯಕ್ಷನಾಗಿ ಇದ್ದಿದ್ದರೆ ಇಂಥದ್ದು ಆಗುತ್ತಿರಲಿಲ್ಲ. ರಷ್ಯಾವು ಉಕ್ರೇನ್‌ ಮೇಲೆ ದಾಳಿಯನ್ನೂ ನಡೆಸುತ್ತಿರಲಿಲ್ಲ. ಎಲ್ಲ ಜೀವಗಳೂ ಉಳಿಯುತ್ತಿದ್ದವು ಎಂದೂ ಟ್ರಂಪ್‌ ಹೇಳಿದ್ದಾರೆ.

ಇದೇ ವೇಳೆ, ಅಮೆರಿಕವು “ವಿಫ‌ಲ ದೇಶ’ವಾಗಿ ಹೊರಹೊಮ್ಮುತ್ತಿದ್ದು, “ತೀವ್ರಗಾಮಿ ಎಡಪಂಥೀಯ ಹುಚ್ಚರು’ ಕಾನೂನು ಜಾರಿ ಸಂಸ್ಥೆಗಳನ್ನು ಬಳಸಿಕೊಂಡು ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಹೊರಟಿವೆ ಎಂದೂ ಆರೋಪಿಸಿದ್ದಾರೆ.

ಕೇವಲ 6 ಪದಗಳಲ್ಲಿ ಉತ್ತರ!
ಟ್ರಂಪ್‌ ಸಾಮಾನ್ಯವಾಗಿ “ಹರಟೆ’ಯಲ್ಲಿ ಎತ್ತಿದ ಕೈ. ಆದರೆ, ಮ್ಯಾನ್‌ಹ್ಯಾಟನ್‌ ಕೋರ್ಟ್‌ನಲ್ಲಿ ಅವರು ಮಾತನಾಡಿದ್ದು ಕೇವಲ 6 ಬಾರಿ! ಒಟ್ಟು 1 ಗಂಟೆ ಕಾಲ ವಿಚಾರಣೆ ನಡೆಯಿತು. ಜಡ್ಜ್ ಕೇಳಿದ ಪ್ರಶ್ನೆಗಳಿಗೆ ಟ್ರಂಪ್‌ 6 ಪದಗಳಲ್ಲಿ ಸಂಕ್ಷಿಪ್ತ ಉತ್ತರವನ್ನಷ್ಟೇ ಕೊಟ್ಟಿದ್ದು ಕಂಡುಬಂತು. “ಆರೋಪ ಒಪ್ಪಿಕೊಳ್ಳಲ್ಲ,’ “ಯೆಸ್‌’, “ಓಕೆ, ಥ್ಯಾಂಕ್ಯೂ’, “ಯೆಸ್‌’ ಎಂದಷ್ಟೇ ಹೇಳಿದರು.

ಮಾನಹಾನಿ ಪ್ರಕರಣದಲ್ಲಿ ಟ್ರಂಪ್‌ಗೆ ಗೆಲುವು
ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್‌ ದಾಖಲಿಸಿರುವ ಮಾನಹಾನಿ ಪ್ರಕರಣದಲ್ಲಿ ಟ್ರಂಪ್‌ ಅವರಿಗೆ ಗೆಲವು ಸಿಕ್ಕಿದೆ. ಪ್ರಕರಣದ ವಿಚಾರಣೆ ನಡೆಸಿದ 9ನೇ ಯುಎಸ್‌ ಸರ್ಕ್ನೂಟ್‌ ಕೋರ್ಟ್‌, ಟ್ರಂಪ್‌ ಅಟಾರ್ನಿಗಳಿಗೆ 1,21000 ಡಾಲರ್‌ ಪಾವತಿಸುವಂತೆ ಡೇನಿಯಲ್ಸ್‌ಗೆ ಆದೇಶಿಸಿದೆ. 2018ರಲ್ಲಿ ಟ್ರಂಪ್‌ ಮಾಡಿದ್ದ ಟ್ವೀಟ್‌ಗೆ ಸಂಬಂಧಿಸಿ ಡೇನಿಯಲ್ಸ್‌ ಕೋರ್ಟ್‌ ಮೊರೆ ಹೋಗಿದ್ದರು. ಅಲ್ಲಿ ಡೇನಿಯಲ್ಸ್‌ಗೆ ಹಿನ್ನಡೆಯಾಗಿದ್ದಲ್ಲದೇ, 2.93 ಲಕ್ಷ ಡಾಲರ್‌ ದಂಡ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದ್ದರು.

ಟ್ರಂಪ್‌ ಅವರಿಗೆ ಎದುರಾಗಿರುವ “ಕಾನೂನು ಹೋರಾಟ’ದ ಪರೀಕ್ಷೆ ಸದ್ಯಕ್ಕಂತೂ ಮುಗಿಯುವುದಿಲ್ಲ. ಅದು 2024ರ ಅಧ್ಯಕ್ಷೀಯ ಚುನಾವಣೆಯ ಬಳಿಕವೂ ಮುಂದುವರಿಯುವ ಸಾಧ್ಯತೆಯಿದೆ. ಈ ಪ್ರಕರಣದಲ್ಲಿ ಅಧ್ಯಕ್ಷೀಯ ಕ್ಷಮಾದಾನವನ್ನು ಕೂಡ ಅನ್ವಯಿಸಲು ಸಾಧ್ಯವಿಲ್ಲ.
-ರವಿ ಬಾತ್ರಾ, ಭಾರತೀಯ-ಅಮೆರಿಕನ್‌ ಅಟಾರ್ನಿ

Advertisement

Udayavani is now on Telegram. Click here to join our channel and stay updated with the latest news.

Next