Advertisement
ಇನ್ನೇನು ಈ ದಿನ ಮುಗಿಯಲು ಎರಡೇ ಎರಡು ನಿಮಿಷ ಬಾಕಿ. ಮೊಬೈಲ್ ಮೇಲೇಕೋ ಕೋಪ ಬಂದಿತ್ತು. ನಾಳೆ ಇಡೀ ದಿನ ನಾನು ಮೊಬೈಲ್ ಬಳಸುವುದಿಲ್ಲ ಎಂದು ತೀರ್ಮಾನಿಸಿಬಿಟ್ಟೆ. ಹಾಗೆ ಶಪಥ ತೊಟ್ಟೇ ಹಾಸಿಗೆ ಮೇಲೆ ಮಲಗಿದ್ದೆ. ಕಣ್ತುಂಬಾ ನಿದ್ದೆ ಆವರಿಸಿಕೊಂಡಿತು. ಬೆಳಗ್ಗೆ ಸಾಮಾನ್ಯವಾಗಿ ನಾನು ಏಳುವುದು 9 ಗಂಟೆಗೆ. ಆದರೆ, ಅಲಾರಂ ಇಟ್ಟುಕೊಳ್ಳದ ಕಾರಣ ಏಳುವಾಗ 9.40 ಆಗಿತ್ತು! ಅಯ್ಯೋ, 10 ಗಂಟೆಗೆ ಬಾಯ್‌ಫ್ರೆಂಡ್‌ಗೆ ಸಿಗುತ್ತೇನೆ ಎಂದಿದ್ದು ನೆನಪಾಗಿ, ಥಟ್ಟನೆ ಬೆಡ್ಡಿನ ಪಕ್ಕದಲ್ಲಿ ಸ್ವಿಚ್ಡ್ ಆಫ್ ಆಗಿದ್ದ ಮೊಬೈಲ್ ಅನ್ನು ನೋಡಿದೆ. ಅದು ನಗುತ್ತಾ, “ನನ್ನನ್ನು ನಂಬಿದ್ರೆ ಹೀಗೆಲ್ಲ ಆಗ್ತಿತ್ತಾ?’ ಅಂತ ಅಣಕಿಸಿದಾಗ, ಅದರ ಮೇಲೆ ಕೋಪ, ನನ್ನ ವ್ರತದ ಮೇಲಿನ ನಂಬಿಕೆ ಇನ್ನೂ ಹೆಚ್ಚಾಯಿತು.
Related Articles
Advertisement
ನನ್ನ ಹುಡುಗನಿಗೆ ಬಿಳಿ ಗುಲಾಬಿ ಬಹಳ ಇಷ್ಟ. ಇಲ್ಲೆಲ್ಲಿ ಹತ್ತಿರ ಮಾರ್ಕೆಟ್ ಇದೆ? ನನಗೆ ಅದು ಗೊತ್ತಿಲ್ಲ. ಗೂಗಲ್ ಅಸಿಸ್ಟಂಟ್‌ನಲ್ಲಿ ಹುಡುಕಿದ್ದಿದ್ದರೆ, ಮೂರೇ ಸೆಕೆಂಡಿನಲ್ಲಿ ನನ್ನ ಹುಡುಕಾಟಕ್ಕೆ ಪರಿಹಾರ ಸಿಕ್ಕಿರೋದು. ಮೊದಲೇ ತಡವಾಗಿದೆ ಎಂದು ವಾಚ್ ನೋಡಿದೆ. ನನ್ನ ಹುಡುಗ ಇದೇ ಮಾಲ್‌ನ ಎದುರೇ ಇರಬೇಕಿತ್ತು. “ಇಲ್ಲಿಯೇ ಭೇಟಿ ಆಗೋಣ’ ಅಂತ ನಿನ್ನೆ ಹೇಳಿದ್ದೆ. ಕಾದೂ ಕಾದು, ಹೋಗಿದ್ದಾನಾ ಗೂಬೆ!? ಯಾರನ್ನು ಕೇಳ್ಳೋದು! ಅದೂ ಒಬ್ಬ ಹುಡುಗನ ಕುರಿತು. ನನ್ನಂಥ ಹುಡುಗಿಗೆ ಅದು ಕಸಿವಿಸಿಯ ಸಂಗತಿ. ನಾನು ಇಷ್ಟೆಲ್ಲ ಒದ್ದಾಡುತ್ತಿರುವಾಗ, ನನ್ನ 4000 ಎಂಎಎಚ್ ಬ್ಯಾಟರಿ ಸಾಮರ್ಥಯದ ಮೊಬೈಲ್ ಮಾತ್ರ ಮನೆಯಲ್ಲಿ ಆರಾಮಾಗಿ ನಿದ್ರಿಸುತ್ತಿತ್ತು.
ಹುಡುಗನಿಗೆ ಟೈಮ್ ಕೊಟ್ಟು, ಕೈ ಕೊಟ್ನಾ ಅಂತ ಬೇಸರವಾಗಿ ಮಾಲ್‌ನಲ್ಲಿಯೇ ಅತ್ತಿತ್ತ ಹೆಜ್ಜೆ ಹಾಕಿದೆ. ಹಿತವಾದ ಸಂಗೀತ ಕೇಳಿಬರುತ್ತಿತ್ತು. ಅದರ ಮೋಡಿಗೆ ತಲೆದೂಗಿದೆ. ನನ್ನ ಮೊಬೈಲ್‌ನಲ್ಲೂ ಇಂಥದ್ದೇ ಅಥವಾ ಇದಕ್ಕಿಂತ ಚೆಂದದ ಹಾಡುಗಳಿದ್ದವಲ್ಲ ಎಂಬ ನೆನಪು ಮತ್ತೆ ನುಗ್ಗಿಬಂತು. ಕಾದೂ ಕಾದು ಸೋತೆ. “ನನ್ನ ಹುಡುಗ ನನ್ನನ್ನೂ ಇದೇ ರೀತಿ ಕಾದು, ಹೋದನೇನೋ. ಫೋನು ಕೂಡ ಮಾಡುವ ಹಾಗಿಲ್ಲವಲ್ಲ’ ಎಂದು ಬೇಸರದಲ್ಲಿ ಕಾಲೇಜಿಗೆ ಹೊರಟೆ.
ಅಲ್ಲಿ ನೋಡಿದರೆ, ನನ್ನನ್ನು ಎಲ್ಲರೂ ಹೊಗಳ್ಳೋರೆ! “ಎಷ್ಟ್ ಚೆಂದ ಡ್ರೆಸ್ ಹಾಕಿದ್ದೀಯ. ಒಂದು ಸೆಲ್ಫಿ ತಗೊಂಡ್ ಫೇಸ್‌ಬುಕ್‌ಗೆ ಹಾಕ್ಕೊಳೇ’ ಎಂಬ ಅವರ ಪುಕ್ಕಟೆ ಸಲಹೆ ಕೇಳಿ ಪುನಃ ಮೊಬೈಲನ್ನು ನೆನೆದೆ.
ಕ್ಲಾಸಿನಲ್ಲಿ ಹುಡುಗಿಯರು ಕದ್ದು ಕದ್ದು ಮೊಬೈಲ್ ಬಳಸುತ್ತಿದ್ದಾಗ, ಪೀರಿಯಡ್ ನಡುವೆ “ಸಾರಿ… ಒನ್ ಮಿನಿಟ್… ಹೆಲೋ…’ ಎನ್ನುತ್ತಾ ಪಾಠವನ್ನು ಅರ್ಧಕ್ಕೆ ನಿಲ್ಲಿಸಿ ಮೊಬೈಲ್ ಎತ್ತಿಕೊಂಡು ಹೋಗುವ ಲೆಕ್ಚರರ್‌ರನ್ನು ನೋಡಿದಾಗಲೆಲ್ಲ ನನ್ನ ಮೊಬೈಲ್ ಕಣ್ಮುಂದೆ ಬರುತ್ತಲೇ ಇತ್ತು. ಸೆಲ್ಫಿ ಕ್ಯಾಮೆರಾದಲ್ಲಿ ಮುಂಗುರಳನ್ನು ಸರಿಸಿಕೊಳ್ಳುವ ಹುಡುಗಿಯರನ್ನು ಕಂಡು, ಈ ವ್ರತ ನನ್ನನ್ನು ಚಕ್ರವ್ಯೂಹಕ್ಕೆ ತಳ್ಳಿದೆಯಲ್ಲ ಎಂದು ಒಂದು ಕ್ಷಣ ಟೆನÒನ್ ಆಯ್ತು.
ತರಗತಿ ಮುಗೀತು. ಹೊರಗೆ ಬಂದಾಗ ಜೋರು ಮಳೆ. “ಈ ಮಳೆಯಲ್ಲಿ ಎಲ್ಲಾದರೂ, ಬಿಸಿ ಬಿಸಿ ಬಿರಿಯಾನಿ ಸಿಗುತ್ತಾ?’ ಅಂತ ಕೇಳಿತು ಮನಸ್ಸು. ಅಂಥ ಹೋಟೆಲ್ ಹುಡುಕಲೂ ಮೊಬೈಲ್ ಬೇಕಲ್ಲ! “ಎಷ್ಟು ಸ್ಟಾರ್ ಕೊಟ್ಟಿದ್ದಾರೆ? ರೇಟಿಂಗ್ಸ್ ಎಷ್ಟಿದೆ? ಅಲ್ಲೆಷ್ಟು ಬಿರಿಯಾನಿ ವೆರೈಟಿಗಳಿವೆ?’ - ಇಂಥ ಪ್ರಶ್ನೆಗಳನ್ನು ಬೀದಿಯಲ್ಲಿನ ಜನರ ಬಳಿ ಕೇಳಿ, ತಿಳಿಯಲಾಗುವುದಿಲ್ಲವಲ್ಲ! ಬದುಕು ಡಿಜಿಟಲ್ ಆಗಿಬಿಟ್ಟಿದೆ.
ಕೊನೆಗೆ ಏನೋ ಸಿಕ್ಕಿದ್ದನ್ನು ತಿಂದುಕೊಂಡು, ಬಸ್ಸನ್ನು ಹತ್ತಿ, ನನ್ನ ಪಿ.ಜಿ. ರೂಮಿಗೆ ಹೋದೆ. ಬಾಗಿಲು ತೆರೆದ ತಕ್ಷಣ, ಮೊಬೈಲ್ ನನ್ನನ್ನು ದುರುಗುಟ್ಟುತ್ತಾ, “ಎಷ್ಟು ಸೊಕ್ಕು ನಿಂಗೆ?’ ಎಂದು ಧಿಮಾಕಿನಲ್ಲಿ ಕೇಳಿದಹಾಗಿತ್ತು ಅದರ ನೋಟ. ಆದರೆ, ನನಗೆ ಅದರ ಮೇಲೇನೋ ಪ್ರೀತಿ ಉಕ್ಕಿತು. ಹೋಗಿ ತಬ್ಬಿಕೊಳ್ಳಲು ತಯಾರಾದೆ. ನನ್ನೊಳಗೆ ಯಾವುದೋ ಧ್ವನಿ ಎಚ್ಚರಿಸಿತು; “ಮೊಬೈಲ್ ಏಕಾದಶಿ’ ಮುಗಿಯಲು ಇನ್ನೂ 2 ತಾಸು ಇದೆಯಲ್ಲ, ಅದ್ಹೇಗೆ ಇಷ್ಟ್ ಬೇಗ ಮುಟ್ಟುತೀ?’ ಎಂಬ ಅಂತರಂಗದ ಪ್ರಶ್ನೆ.
ಮತ್ತೆ ರಾತ್ರಿ ನಾನು ಮೊಬೈಲ್‌ನಲ್ಲಿ ಅಲಾರಾಂ ಇಟ್ಟುಕೊಳ್ಳದೆ, ದಿಂಬಿಗೆ ತಲೆ ಆನಿಸಿದೆ. ಇಷ್ಟು ದಿನ ಮೊಬೈಲ್ ಪರದೆಯ ನೀಲಿ ಬೆಳಕು ನೋಡುತ್ತಲೇ, ನಿದ್ದೆಗೆ ಜಾರುತ್ತಿದ್ದ ಕಣೊYಂಬೆಗಳಲ್ಲೂ ಏನೋ ಸಂಕಟ. ಕೊನೆಗೂ ನಿದ್ದೆ ಬಂತು. ಆದರೆ, ಮರುದಿನ ಸೂರ್ಯನ ಬೆಳಕು ಮೊಗದ ಮೇಲೆ ಬೀಳುವ ಮೊದಲೇ ಮೊಬೈಲ್ ಬೆಳಕನ್ನು ನೋಡಿದ್ದೆ!
ಕೀರ್ತನಾ ತೀರ್ಥಹಳ್ಳಿ