Advertisement

ಕುಡಿಯಲು ಅಲ್ಲ; ಕಬ್ಬಿಗಾಗಿ ನೀರಿನ ಬೇಡಿಕೆ

07:27 AM Jan 17, 2018 | |

ಪಣಜಿ: ಮಹದಾಯಿ ವಿಚಾರದಲ್ಲಿ ಇನ್ನೂ ಮೊಂಡುವಾದ ಮಂಡಿಸುತ್ತಿರುವ ಗೋವಾ ಸರ್ಕಾರ, ಕರ್ನಾಟಕ ಕುಡಿಯುವ ಸಲುವಾಗಿ ನೀರನ್ನು ಕೇಳುತ್ತಿಲ್ಲ ಎಂದು ನ್ಯಾಯಾಧಿಕರಣದ ಮುಂದೆ ಅಫಿಡವಿಟ್‌ ಸಲ್ಲಿಸಿದೆ. ಕಬ್ಬು ಬೆಳೆಯುವ ಉದ್ದೇಶಕ್ಕಾಗಿಯೇ ಕರ್ನಾಟಕ ಸರ್ಕಾರ ಮಹದಾಯಿ ನೀರು ಕೇಳುತ್ತಿದೆ ಎಂದು ಗೋವಾ ಪರವಾಗಿ ವಾದ ಮಂಡಿಸುತ್ತಿರುವ ಹಿರಿಯ ನ್ಯಾಯವಾದಿ ಆತ್ಮಾರಾಮ ನಾಡಕರ್ಣಿ ಸೋಮವಾರ 531 ಪುಟಗಳ ವಾದ ಸಲ್ಲಿಸುವ ಸಂದರ್ಭದಲ್ಲಿ ಈ ಆರೋಪ ಮಾಡಿದ್ದಾರೆ. 

Advertisement

“ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿನ ಕುಡಿಯುವ ನೀರಿನ ಅಗತ್ಯಕ್ಕಾಗಿ ಮಹದಾಯಿ ನೀರು ಬೇಕು ಎಂದು ಕರ್ನಾಟಕ ಪ್ರತಿಪಾದಿಸುತ್ತಿದೆ. ಆದರೆ ಇದು ಶುದ್ಧ ಸುಳ್ಳು. ಮಲಪ್ರಭಾ ಅಣೆಕಟ್ಟಿನಿಂದಲೂ ಕೂಡ ಅವಳಿ ನಗರಕ್ಕೆ ನೀರು ಬೇಕು ಎಂಬ ವಾದವೂ ಸರಿಯಲ್ಲ’ ಎಂದು ಅವರು ಪ್ರತಿಪಾದಿಸಿದ್ದಾರೆ. ಕುಡಿವ ನೀರಿಗೆ ಮಹದಾಯಿ ಎಂದು ಕರ್ನಾಟಕ ಸುಳ್ಳು ಹೇಳುತ್ತಿದೆ ಎನ್ನುವುದನ್ನು ಪ್ರತಿಪಾದಿಸಲು ಹುಬ್ಬಳ್ಳಿ-ಧಾರವಾಡ ಮಹಾ ನಗರಕ್ಕೆ 7.56 ಟಿಎಂಸಿ ನೀರು ಎಂದು ಹೇಳುತ್ತಿದೆ. ಆದರೆ ಮೂಲ ಉದ್ದೇಶ ಕಬ್ಬಿನ ಬೆಳೆಗೆ ನೀರು ಹಾಯಿಸಲು ಬಳಕೆ ಮಾಡುವುದೇ ಆಗಿದೆ ಎಂದು ಗೋವಾ ಪರ ವಕೀಲರು ಆರೋಪಿಸಿದ್ದಾರೆ. 2051ರ ವೇಳೆ
ಹುಬ್ಬಳ್ಳಿ-ಧಾರವಾಡ ಸೇರಿದಂತೆ ಆಸುಪಾಸಿನ ಜನಸಂಖ್ಯೆ 28 ಲಕ್ಷ ಆಗಲಿದೆ. 

ಗಮನಾರ್ಹ ಅಂಶವೆಂದರೆ 2011ರ ಜನಗಣತಿಯಂತೆ ಇಲ್ಲಿನ ಜನಸಂಖ್ಯೆ 9,43,857. ಹೀಗಾಗಿ 2051ರ ವೇಳೆಗೆ ಜನಸಂಖ್ಯೆ ಮೂರು ಪಟ್ಟು ಹೆಚ್ಚಾಗಬಹುದು ಎಂಬ ವಾದವೇ ಸರಿಯಲ್ಲ ಎಂದು ಆತ್ಮಾರಾಮ ನಾಡಕರ್ಣಿ ತಾವು ಸಲ್ಲಿಸಿದ 531 ಪುಟಗಳ
ವಾದದಲ್ಲಿ ಪ್ರತಿಪಾದಿಸಿದ್ದಾರೆ. ಗೋವಾದ ಜನಸಂಖ್ಯೆ ಕಳೆದ 40 ವರ್ಷಗಳಲ್ಲಿ ಶೇ.10ರ ದರದಲ್ಲಿಯೇ ಬೆಳೆದಿದೆ ಎಂದು ನಾಡಕರ್ಣಿ ಹೇಳಿದ್ದಾರೆ. ಹುಬ್ಬಳ್ಳಿ-ಧಾರವಾಡದ ಜನಸಂಖ್ಯೆ 1981ರಲ್ಲಿ 5,27,108 ಆಗಿತ್ತು. 2011ರಲ್ಲಿ 9,43, 857ಕ್ಕೆ ತಲುಪಿತು. ಸಾಂಖೀಕವಾಗಿ ಹೇಳುವುದಿದ್ದರೆ ಕೇವಲ ಮೂರು ಲಕ್ಷ ಮಾತ್ರ ಜನಸಂಖ್ಯೆಯಲ್ಲಿ ಏರಿಕೆಯಾಗಿದೆ.  ಹೀಗಾಗಿ ಈ ಬಗ್ಗೆ ಕರ್ನಾಟಕ ನೀಡಿರುವ ಹೇಳಿಕೆ ಸರಿಯಲ್ಲ ಎಂದು  ಹೇಳಿದ್ದಾರೆ.

ಗೋವಾ ಸಲ್ಲಿಸಿದ ವಾದವನ್ನು ಲಘುವಾಗಿಯೇ ಪರಿಗಣಿಸಿ ಕರ್ನಾಟಕ ಸರ್ಕಾರ ವಾದ ಮಂಡಿಸಿದೆ. ನೆರೆಯ ರಾಜ್ಯ ತನ್ನ ಅಹವಾಲಿನಲ್ಲಿ ಮಂಡಿಸಿದ ಯಾವುದೇ ಅಂಶ ಸಮರ್ಥನೀಯವಲ್ಲ ಎಂದು ನಾಡಕರ್ಣಿ ಆರೋಪಿಸಿದ್ದಾರೆ. ಕರ್ನಾಟಕ ಸರ್ಕಾರ ಒಟ್ಟು 12 ಅಣೆಕಟ್ಟುಗಳ ನಿರ್ಮಾಣಕ್ಕೆ ಮುಂದಾಗಿದೆ. ಈ ಕ್ರಮದಿಂದಾಗಿ ಪರಿಸರಕ್ಕೆ ಮತ್ತು ಈ ಪ್ರದೇಶದ ಭೂಭಾಗಕ್ಕೆ ಹಾನಿಯಾಗಲಿದೆ. ಹೀಗಾಗಿಯೇ ನೆರೆಯ ರಾಜ್ಯದ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದಾಗಿ ಹೇಳಿದ್ದಾರೆ. ಮುಂದಿನ ತಿಂಗಳ ಮೊದಲ ವಾರದಿಂದ ಮಹದಾಯಿ ನ್ಯಾಯಾಧಿಕರಣ ನೀರು ಹಂಚಿಕೆ ವಿವಾದದ ಪ್ರಕರಣದ ಅಂತಿಮ ವಿಚಾರಣೆ ಆರಂಭಿಸಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next