Advertisement

ಮಟ್ಕಾ ನಂಬರ್‌ ಹೇಳುವವರಿಂದ ಉದ್ಧಾರವಾಗಲ್ಲ

12:55 PM Dec 23, 2018 | |

ಸೇಡಂ: ವಚನ ಹೇಳುವ ಬಾಯಲ್ಲಿ ಮಟ್ಕಾ ನಂಬರ್‌, ಲಿಂಗ ಕೊಡೋ ಕೈಯಲ್ಲಿ ನಿಂಬೆಹಣ್ಣು, ರುದ್ರಾಕ್ಷಿ ಬದಲು ತಾಯಿತ, ಈ ರೀತಿಯ ಮಠಾಧೀಶರ ನಡೆಯಿಂದ ಎಂದಾದರೂ ದೇಶ ಉದ್ಧಾರವಾದೀತೆ ಎಂದು ಶ್ರೀಶೈಲ ಸಾರಂಗ ಮಠದ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

Advertisement

ತಾಲೂಕಿನ ಕೋಡ್ಲಾ ಗ್ರಾಮದ ಉರಿಲಿಂಗ ಪೆದ್ದೀಶ್ವರ ಸಂಸ್ಥಾನ ಮಠದಲ್ಲಿ ಪೀಠಾಧಿಪತಿ ಡಾ| ನಂಜುಂಡ ಸ್ವಾಮೀಜಿ ಅವರಿಗೆ ಪಾಂಡಿಚೇರಿಯ ಪೀಸ್‌ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ಡಾಕ್ಟರೆಟ್‌ ಪದವಿ ಪ್ರದಾನ ಮಾಡಿದ ಪ್ರಯುಕ್ತ ಬಹುಜನ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದಿನ ಮಠಾಧೀಶರ ನಡೆಯಿಂದ ಇಡೀ ಸಮಾಜವೇ ಹದಗೆಟ್ಟು ಹೋಗುತ್ತಿದೆ. ವಚನ ಸಾಹಿತ್ಯ ಪಸರಿಸುವ ಮೂಲಕ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಮಠಗಳು ರಾಜಕೀಯ ಮಾಡುತ್ತಿವೆ. ಮೌಡ್ಯ ಆಚರಣೆಗಳನ್ನು ಬಿತ್ತುತ್ತಿವೆ. 12ನೇ ಶತಮಾನಕ್ಕೂ ಮುನ್ನ ಇಂದಿನ ಎಲ್ಲ
ಲಿಂಗಾಯತರೂ ದಲಿತರೇ ಆಗಿದ್ದರು ಎನ್ನುವ ಸತ್ಯ ಅರಿಯಬೇಕಾಗಿದೆ. ದೇಶದಲ್ಲಿರುವ ಎಲ್ಲರೂ ಬುದ್ಧ, ಬಸವ, ಅಂಬೇಡ್ಕರ್‌ ಮಕ್ಕಳಿದ್ದಂತೆ. ಈ ನಿಟ್ಟಿನಲ್ಲಿ ಎಷ್ಟೇ ವಿರೋಧವಿದ್ದರೂ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪಿಸಿಯೇ ತೀರುವುದಾಗಿ ಘೋಷಿಸಿದರು. 

ಜನವಾದಿ ಮಹಿಳಾ ಸೇವಾ ಸಂಘದ ರಾಜ್ಯಾಧ್ಯಕ್ಷೆ ಕೆ. ನೀಲಾ ಮಾತನಾಡಿ, ಶತಮಾನದ ಶರಣ ಬಸವಣ್ಣ ತಾನು ಮಾದಾರ ಚನ್ನಯ್ಯನ ಮಗ ಎಂದು ನಂಬಿಕೊಂಡು ನಡೆದವರು. ಅವರು ದೇಶದ ಮೊಟ್ಟ ಮೊದಲ ಶರಣ ಸಂಗಾತಿಯಾಗಿದ್ದರು ಎಂದರು. ಮೈಸೂರು ಉರಿಲಿಂಗ ಪೆದ್ದಿ ಶಾಖಾ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಮಹಾಂತ ಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಡಾ| ಶಿವರಾಜ ಪಾಟೀಲ, ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಸದಾಶಿವ ಸ್ವಾಮೀಜಿ, ಗುರುಮಠಕಲ್‌ನ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಡಾ| ನಂಜುಂಡ ಸ್ವಾಮೀಜಿ ಮಾತನಾಡಿದರು. ಬಸವ ಮಹಾಂತಾಚಾರ್ಯ ಸ್ವಾಮೀಜಿ, ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ಸುಶೀಲಕುಮಾರ, ಮಾಜಿ ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಮತ್ತಿತರರು ಇದ್ದರು. ದೇವಿಂದ್ರಪ್ಪ ತೆಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಮಂತ್ರಿ ಸ್ವಾಗತಿಸಿದರು, ಎಸ್‌.ಪಿ.ಸುಳ್ಳದ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next