ಹೊನ್ನಾಳಿ: ಬಿಜೆಪಿ ವರ್ಚಸ್ಸು ಹೆಚ್ಚಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರೇ ಬಿಜೆಪಿಗೆ ಬರಬಹುದು, ಕಾದು ನೋಡಿ ಎನ್ನುವ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುತ್ತದೆ ಎಂಬ ಭಯದಿಂದ ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ನಿಜಕ್ಕೂ ಬಿಜೆಪಿ ಶಾಸಕರು ನಿಮ್ಮ ಸಂಪರ್ಕದಲ್ಲಿದ್ದರೆ ಅವರ ಹೆಸರು ಹೇಳಲಿ ಎಂದರು.
ಬಿಜೆಪಿ ಶಾಸಕರೆಲ್ಲ ಒಟ್ಟಾಗಿಯೇ ಇದ್ದೇವೆ. ನಮ್ಮಲ್ಲಿ ಬಿನ್ನಾಭಿಪ್ರಾಯವಿಲ್ಲ. ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ವ್ಯವಸ್ಥೆ ನಮ್ಮಲ್ಲಿದೆ. ಒಬ್ಬನೇ ಒಬ್ಬ ಬಿಜೆಪಿ ಶಾಸಕ ಕಾಂಗ್ರೆಸ್‌ಗೆ ಹೋಗೋದಿಲ್ಲ. ರಾಜ್ಯದಲ್ಲಿ ಮತ್ತೂಮ್ಮೆ ಬಿಜೆಪಿ ಅ ಧಿಕಾರಕ್ಕೆ ಬರುತ್ತದೆ ಎಂಬುದನ್ನು ಅರಿತು ಹತಾಶ ಮನೋಭಾವದಿಂದ ಇಂಥ ಕೀಳು ಮಟ್ಟದ ಹೇಳಿಕೆಗಳನ್ನು ನೀಡುವುದನ್ನು ಕೈಬಿಡಬೇಕು ಎಂದರು.
ಬಿಜೆಪಿಯ ಎಲ್ಲಾ ಶಾಸಕರೂ ಸಿಂಹದ ಮರಿಗಳು. ಅವರು ಸಂಘದ ಸಂಸ್ಕಾರದಲ್ಲಿ ಬೆಳೆದು ಸಂಘಟನೆ ಮುಖಾಂತರ ಶಾಸಕರಾದವರು. ಗೆದ್ದಿರುವ ಎಲ್ಲರೂ ಬಿಜೆಪಿಯಲ್ಲೆ ಇರುತ್ತಾರೆ ಹಾಗೂ ಮತ್ತೆ ಗೆಲ್ಲುತ್ತಾರೆ. ಅವರ್ಯಾರೂ ಮುಳುಗುವ ಹಡಗಿನಂತಾಗಿರುವ ಕಾಂಗ್ರೆಸ್ ಕಡೆ ಮುಖ ಕೂಡ ಹಾಕಿ ಮಲಗುವುದಿಲ್ಲ. ಕಾಂಗ್ರೆಸ್ ಸಂಪರ್ಕದಲ್ಲಿ ಬಿಜೆಪಿ ಸಚಿವರು, ಶಾಸಕರಿದ್ದಾರೆ ಎಂದು ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರು ಮೊದಲು ನಿಮ್ಮ ಶಾಸಕರು, ಮಾಜಿ ಸಚಿವರು ಹಾಗೂ ಮುಖಂಡರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಮೊದಲು ಅವರು ಯಾರು ಎಂಬುದನ್ನು ನೋಡಿಕೊಳ್ಳಿ ಎಂದರು.
ನಾನು ಈಗಲೂ ಹೊಸ ಮುಖಗಳಿಗೆ ಅವಕಾಶ ನೀಡಿ ಎಂದಿದ್ದೇನೆಯೇ ವಿನಃ ನನಗೆ ಸಚಿವ ಸ್ಥಾನ ನೀಡಿ ಎಂದು ಎಲ್ಲೂ ಕೇಳಿಲ್ಲ. ದಾವಣಗೆರೆ ಮಧ್ಯ ಕರ್ನಾಟಕದಲ್ಲಿದ್ದು, ಜಿಲ್ಲೆಗೆ ಸಚಿವ ಸ್ಥಾನ ಸಿಗಬೇಕೆಂದು ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್ ಸೇರಿ ಎಲ್ಲರೂ ಸಹ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಸಂದರ್ಭದಲ್ಲೇ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ.
-ಎಂ.ಪಿ.ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ