Advertisement

ಕುಟುಂಬ ಕಾರಣದಿಂದ ರಾಜ್ಯಾಧ್ಯಕ್ಷನಾಗಿಲ್ಲ: ಬಿ.ವೈ. ವಿಜಯೇಂದ್ರ

12:03 AM Mar 24, 2024 | Team Udayavani |

ಬೆಂಗಳೂರು: ತಮ್ಮ ವಿರುದ್ಧ ಸ್ವಪಕ್ಷೀಯರು ಮಾಡುತ್ತಿರುವ “ಕುಟುಂಬ ರಾಜಕಾರಣ’ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದು, ಈ ಹುದ್ದೆಗೆ ನನ್ನನ್ನೇ ಯಾಕೆ ಆಯ್ಕೆ ಮಾಡಿದರು ಎಂದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ.

Advertisement

ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರಗಿದ ಬಿಜೆಪಿ ಚುನಾವಣ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ತಮ್ಮ ವಿರುದ್ಧ ನಿರಂತರ ಆರೋಪ ಮಾಡುತ್ತಿರುವ ಕೆ.ಎಸ್‌.ಈಶ್ವರಪ್ಪ ಸಹಿತ ಅನೇಕ ಹಿರಿಯರಿಗೆ ತಿರುಗೇಟು ನೀಡಿದ್ದಾರೆ.

ಕುಟುಂಬ ರಾಜಕಾರಣದ ಹಿನ್ನೆಲೆಯಲ್ಲಿ ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿಲ್ಲ. ಈ ರೀತಿ ಧೈರ್ಯದಿಂದ ಹೇಳುವುದಕ್ಕೆ ನನಗೆ ಯಾವುದೇ ಸಂಕೋಚವೂ ಇಲ್ಲ. ಪಕ್ಷದ ತೀರ್ಮಾನವನ್ನು ಒಪ್ಪಿಕೊಂಡು ನಾನು ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ.

ಯಡಿಯೂರಪ್ಪನವರ ಮಗನಾದರೂ ನನಗೆ ಈ ಹಿಂದೆ ಅವಕಾಶಗಳು ತಪ್ಪಿದ ಉದಾಹರಣೆ ಇದೆ. ಹಿಂದೆ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಮುಂದಾದಾಗ ವರಿಷ್ಠರು ಒಪ್ಪಿರಲಿಲ್ಲ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ನನ್ನನ್ನು ವಿಧಾನಪರಿಷತ್‌ ಸದಸ್ಯನನ್ನಾಗಿ ಮಾಡಲು ರಾಜ್ಯ ಕೋರ್‌ ಕಮಿಟಿ ತೀರ್ಮಾನ ಮಾಡಿತ್ತು. ಆಗಲೂ ವರಿಷ್ಠರು ಸಮ್ಮತಿ ನೀಡಿರಲಿಲ್ಲ. ಪಕ್ಷದ ಎಲ್ಲ ತೀರ್ಮಾನಗಳನ್ನು ನಾನು ಒಪ್ಪಿಕೊಂಡಿದ್ದೇನೆ ಎನ್ನುವ ಮೂಲಕ ನಾನು “ವರಿಷ್ಠರ ಆಯ್ಕೆ’ ಎಂದು ಪರೋಕ್ಷವಾಗಿ ಪ್ರತಿಪಾದಿಸಿದ್ದಾರೆ.

ಹತ್ತು ವರ್ಷಗಳ ಬಳಿಕವೂ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಜನಪ್ರಿಯತೆಯಲ್ಲಿ ಮತ್ತಷ್ಟು ಎತ್ತರಕ್ಕೆ ಹೋಗಿದೆ. ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದೇ ಬರುತ್ತಾರೆ. ರಾಜ್ಯದ ಯಾವ ಕ್ಷೇತ್ರದಲ್ಲೂ ಕಾಂಗ್ರೆಸ್‌ ಗೆಲ್ಲಲು ಸಾಧ್ಯವಿಲ್ಲ. ಕರ್ನಾಟಕ ಬಿಜೆಪಿಯ ದಕ್ಷಿಣ ಭಾರತದ ಹೆಬ್ಟಾಗಿಲು ಎಂದು ಆರೋಪಿಸಿದರು.

Advertisement

ಕೇಂದ್ರದಲ್ಲಿ ಯಾವುದೇ ಸರಕಾರ ಅಡಳಿತ ನಡೆಸಿದರೂ 10 ವರ್ಷಗಳ ಬಳಿಕ ಆಡಳಿತ ವಿರೋಧಿ ಅಲೆ ಇರುತ್ತದೆ. ಆದರೆ ಮೋದಿಯವರ ವರ್ಚಸ್ಸು ಕಿಂಚಿತ್ತೂ ಕಡಿಮೆಯಾಗಿಲ್ಲ. ಇಲ್ಲಿನ ಚುನಾವಣೆ ಫ‌ಲಿತಾಂಶ ಏನೆಂಬುದನ್ನು ವಿದೇಶಗಳೂ ಕಾತರದಿಂದ ನೋಡುತ್ತಿವೆ. ನರೇಂದ್ರ ಮೋದಿ ನಾಯಕತ್ವಕ್ಕೆ ಸರಿ ಸಮಾನ ನಾಯಕರು ವಿಪಕ್ಷದಲ್ಲಿ ಯಾರೂ ಇಲ್ಲ. ಇಡೀ ದೇಶದಲ್ಲಿ ನರೇಂದ್ರ ಮೋದಿ ವಾತಾವರಣ ಇದೆ. ಮುಂದಿನ 60 ದಿನಗಳ ಕಾಲ ಎಲ್ಲವನ್ನೂ ಬದಿಗಿಟ್ಟು, ಮೋದಿ ಕೈ ಬಲಪಡಿಸುವ ಕೆಲಸ ನಡೆಯಬೇಕು ಎಂದು ಕರೆ ನೀಡಿದರು.

ರಾಜ್ಯ ಚುನಾವಣ ಉಸ್ತುವಾರಿ ರಾಧಾ ಮೋಹನ್‌ ಅಗರ್ವಾಲ್‌, ವಿಪಕ್ಷ ನಾಯಕ ಆರ್‌.ಅಶೋಕ್‌, ಚುನಾವಣ ನಿರ್ವಹಣೆ ಸಮಿತಿ ರಾಜ್ಯ ಸಂಚಾಲಕರಾದ ವಿ.ಸುನಿಲ್‌ಕುಮಾರ್‌, ಮಾಜಿ ಶಾಸಕ ಪ್ರೀತಂ ಗೌಡ, ಪರಿಷತ್‌ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next