Advertisement

ಆರಂಭವಾಗಿಲ್ಲ ಬರ ನಿರ್ವಹಣಾ ಕೆಲಸ 

03:42 PM Nov 28, 2018 | Team Udayavani |

ಕೊಪ್ಪಳ: ಜಿಲ್ಲೆಯಲ್ಲಿ ಬರದ ಭೀಕರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರ ಜಿಲ್ಲೆಯ ಏಳು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿ ತಿಂಗಳೇ ಕಳೆದಿವೆ. ಆದರೆ ಇನ್ನೂ ಬರ ನಿರ್ವಹಣಾ ಕಾಮಗಾರಿ ಆರಂಭಿಸಿಲ್ಲ. ಈಗಷ್ಟೇ ಗೋಶಾಲೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೆ, ತುರ್ತು ಕುಡಿಯುವ ನೀರಿಗೆ ಪ್ರತಿ ತಾಲೂಕಿಗೆ 25 ಲಕ್ಷ ಬಂದಿದ್ದು, ಬಿಟ್ಟರೆ ಮತ್ತೆ ಯಾವ ಅನುದಾನವೂ ಇಲ್ಲ.

Advertisement

ಹೌದು. ಕೊಪ್ಪಳ ಜಿಲ್ಲೆ ಪದೇ ಪದೆ ಬರಕ್ಕೆ ತುತ್ತಾಗಿ ಜನರು ಬೆಂದು ನೊಂದು ಹೋಗಿದ್ದಾರೆ. ಮುಂಗಾರಿನ ಮಳೆ ಕೈ ಕೊಟ್ಟಿದ್ದರಿಂದ ಅನ್ನದಾತನಿಗೆ ದಿಕ್ಕೇ ತೋಚದಂತಾಗಿ ಕಣ್ಣೀರಿಡುತ್ತಿದ್ದಾನೆ. ರಾಜ್ಯ ಸರ್ಕಾರವೂ ಸಹಿತ ಜಿಲ್ಲೆಯ ಏಳು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರೂ ಭೇಟಿ ನೀಡಿ ಇಲ್ಲಿನ ಬರದಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಸಹಿತ ಜಿಲ್ಲೆಯಲ್ಲಿ ಇನ್ನೂ ಬರ ನಿರ್ವಹಣೆಗೆ ಯಾವುದೇ ಕಾಮಗಾರಿ ಆರಂಭಿಸಿಲ್ಲ.

ಉದ್ಯೋಗ ಖಾತ್ರಿ ಕಾಮಗಾರಿ ಆರಂಭಿಸಿದ್ದೇವೆ ಎನ್ನುವ ಮಾತೊಂದು ಬಿಟ್ಟರೆ ಜಿಲ್ಲಾ ಹಂತದಲ್ಲಿ ಯಾವುದೇ ಕಾಮಗಾರಿ ನಡೆಯುತ್ತಲೇ ಇಲ್ಲ. ಕುಡಿಯುವ ನೀರಿನ ಯೋಜನೆಗೂ ಸಮರ್ಪಕ ಅನುದಾನ ಬಂದಿಲ್ಲ. ಜಿಲ್ಲಾಡಳಿತ ಕೇವಲ ಗುಳೆ ತಡೆ ಅಭಿಯಾನ ನಡೆಸಿ ಲೆಕ್ಕ ದಾಖಲೆಯಲ್ಲಿ ಬರೆಯುತ್ತಿದೆಯೇ ವಿನಃ ನಿಜಕ್ಕೂ ಗುಳೆ ತಡೆಯುವ ಕೆಲಸ ಮಾಡುತ್ತಿಲ್ಲ. ಅಲ್ಲದೇ, ನರೇಗಾ ಅನುದಾನ ಸಕಾಲಕ್ಕೆ ಬಾರದ ಹಿನ್ನೆಲೆಯಲ್ಲಿ ಈ ಭಾಗದ ನೂರಾರು ಕುಟುಂಬಗಳು ಕೆಲಸ ಅರಸಿ ಗುಳೆ ಹೊರಟಿವೆ.

ಗೋಶಾಲೆಗೆ ಈಗಷ್ಟೇ ಪ್ರಸ್ತಾವನೆ: ಜಿಲ್ಲೆಯಲ್ಲಿ ಬರದ ಸ್ಥಿತಿಯಿಂದ ಪಶುಪಾಲನಾ ಇಲಾಖೆಯು ಈಗಷ್ಟೇ ಗೋಶಾಲೆ ಎಲ್ಲೆಲ್ಲಿ ಅವಶ್ಯ ಎನ್ನುವ ಕುರಿತು ಪ್ರಸ್ತಾವನೆ ಸಲ್ಲಿಸಿದೆ. ಆದರೆ ಜಿಲ್ಲಾ ಹಂತದಲ್ಲಿ ಇನ್ನೂ ಪ್ರಸ್ತಾವನೆಗೆ ಅನುಮತಿ ಸಿಕ್ಕಿಲ್ಲ. ಈ ಹಿಂದೆ ಬರದ ಸ್ಥಿತಿ ಆವರಿಸಿದ್ದ ವೇಳೆ 20 ಹೋಬಳಿ ಪೈಕಿ 11 ಗೋಶಾಲೆ ಆರಂಭ ಮಾಡಲಾಗಿತ್ತು. 8 ಕಡೆ ಮೇವು ಬ್ಯಾಂಕ್‌ ಆರಂಭಿಸಿತ್ತು. ಈ ಬಾರಿ ಗೋಶಾಲೆಗೆ ಜಿಲ್ಲಾಡಳಿತವು ಇನ್ನೂ ಅನುಮತಿಯನ್ನೇ ಕೊಟ್ಟಿಲ್ಲ.

ಜಿಲ್ಲೆಯಲ್ಲಿನ 737 ಹಳ್ಳಿಗಳಲ್ಲಿ 301 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಕುರಿತು
ನೀರು ಮತ್ತು ನೈರ್ಮಲ್ಯ ವಿಭಾಗದ ಅಭಿಯಂತರೇ ವರದಿ ಸಿದ್ಧಪಡಿಸಿದ್ದಾರೆ. ಆದರೆ ಪೂರ್ವ ತಯಾರಿಗೆ
ಈಗಲೇ ಯೋಜನೆ ರೂಪಿಸಿಕೊಂಡಿಲ್ಲ. ಸದ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ ಎನ್ನುವ ಮಾತನ್ನಾಡುತ್ತಿದ್ದಾರೆ. ಕನಿಷ್ಟ ಪಕ್ಷ ಗ್ರಾಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಮೂಲ ಪತ್ತೆ ಮಾಡಿ ಪೈಪ್‌ಲೈನ್‌ ದುರಸ್ಥಿ ಸೇರಿದಂತೆ ಇತರೆ ಕಾಮಗಾರಿ ನಿರ್ವಹಣೆ ಇನ್ನೂ ನಡೆದೇ ಇಲ್ಲ.

Advertisement

ಬರದ ಪರಿಸ್ಥಿತಿಯಲ್ಲಿ ತುರ್ತು ಕುಡಿಯುವ ನೀರು ಪೂರೈಕೆಗಾಗಿ ಜಿಲ್ಲಾ ಪಂಚಾಯಿತಿಯಿಂದ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗಕ್ಕೆ ಪ್ರತಿ ತಾಲೂಕಿಗೂ 50 ಲಕ್ಷ ರೂ. ಕ್ರಿಯಾಯೋಜನೆಗೆ ಅನುಮತಿ ದೊರೆತಿದ್ದರೂ ಆರಂಭದಲ್ಲಿ ಕೇವಲ 25 ಲಕ್ಷ ರೂ. ಬಿಡುಗಡೆ ಮಾಡಿದೆ. ಇನ್ನೂ ಜಿಲ್ಲಾ ಧಿಕಾರಿಗಳ ಬರ ಪರಿಹಾರ ಯೋಜನೆಯಲ್ಲಿ ಜಿಲ್ಲೆಯಲ್ಲಿನ 174 ಕಾಮಗಾರಿ ಕೈಗೆತ್ತಿಕೊಳ್ಳಲು ಪ್ರತಿ ತಾಲೂಕಿಗೆ ಕೇವಲ 29 ಲಕ್ಷ ರೂ. ಬಿಡುಗಡೆ ಮಾಡಿದೆ.

ಇನ್ನು ಅನುದಾನ ಬಿಟ್ಟರೆ ಜಿಲ್ಲೆಯಲ್ಲಿನ ಬರ ನಿರ್ವಹಣೆಗೆ ನರೇಗಾದಿಂದ 150 ಮಾನವ ದಿನ ಸೃಜನೆಗೆ ಕೇಂದ್ರ ಮಟ್ಟದಿಂದ ಅನುಮತಿಯೂ ದೊರೆತಿಲ್ಲ. ಇಷ್ಟೆಲ್ಲ ಇದ್ದರೂ ಜಿಲ್ಲೆಯಲ್ಲಿನ ಬರದ ಪರಿಸ್ಥಿತಿ ಗಂಭೀರವಾಗಿದೆ. ಪ್ರಸಕ್ತ ಹಿಂಗಾರು ಮಳೆಗಳೂ ಬಹುತೇಕ ಕೈ ಕೊಟ್ಟಿವೆ. ಮಳೆಯ ಸ್ಥಿತಿ ನೋಡಿಯೇ ಜನರು ಹಿಂಗಾರಿ ಬಿತ್ತನೆಗೆ ಹಿಂದೇಟಾಕಿ ಗುಳೆ ಹೊರಟಿದ್ದಾರೆ.

ಇನ್ನಾದರೂ ಜಿಲ್ಲಾಡಳಿತ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಕಾಮಗಾರಿ ಆರಂಭಿಸುವ ಮೊದಲು ಪೂರ್ವ ಯೋಜಿತವಾಗಿ ಕಾಮಗಾರಿ ನಡೆಸಿ ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ. ಜನ ಗುಳೆ ಹೋಗುವುದನ್ನು ತಪ್ಪಿಸಬೇಕಿದೆ. ಸರ್ಕಾರ ಬರದ ಜಿಲ್ಲೆಗಳಿಗೆ ಪುಡಿಗಾಸು ಕೊಟ್ಟು ಬೀಗುವ ಬದಲು ಸಮರ್ಪಕ ಅನುದಾನ ಕೊಡುವ ಅವಶ್ಯಕತೆಯಿದೆ. ಜಿಲ್ಲಾಡಳಿತ ಬರದಲ್ಲಿನ ಪ್ರಸ್ತಾವನೆಗಳಿಗೆ ಶೀಘ್ರ ಅನುಮತಿ ಕೊಡುವ ಅವಶ್ಯಕತೆಯಿದೆ.

ಬರ ನಿರ್ವಹಣೆಗೆ ಸಿಎಂ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದಿದ್ದಾರೆ. ನಾವು ಈಗಾಗಲೇ ಜಿಲ್ಲೆಗೆ ಅವಶ್ಯ ಇರುವ ಪ್ರಸ್ತಾವನೆಗಳನ್ನು ಸಿಎಂ ಹಾಗೂ ಕಂದಾಯ ಸಚಿವರ ಗಮನಕ್ಕೆ ತಂದಿದ್ದೇವೆ. ಕುಡಿಯುವ ನೀರು ಪೂರೈಕೆಗೆ ಜಿಪಂ ಟಾಸ್ಕ್ಫೋರ್ಸ್‌, ಜಿಲ್ಲಾಧಿಕಾರಿ ಖಾತೆಯಿಂದ ಈಗಾಗಲೇ ಅನುದಾನ ಕೊಟ್ಟಿದ್ದೇವೆ. ಕೆಲವೊಂದು ಕ್ರಿಯಾಯೋಜನೆಗಳಿಗೆ ಅನುಮತಿ ನೀಡಿದ್ದೇವೆ. ಪ್ರತಿ ಕ್ಷೇತ್ರಕ್ಕೂ 25 ಲಕ್ಷ ಸಾಕಾಗಲ್ಲ. ಆದರೆ ನಮ್ಮಿಂದ ಅಷ್ಟು ಕೊಡಲು ಸಾಧ್ಯವಾಗಿದೆ. ಉಳಿದಂತೆ ಸರ್ಕಾರ ಅನುದಾನ ಕೊಡಬೇಕಿದೆ. ರಾಜ್ಯದಲ್ಲಿಯೇ ಬರ ನಿರ್ವಹಣೆಗೆ ನಾವು ಪೂರ್ವ ತಯಾರಿ ನಡೆಸಿ ಮುಂದಿದ್ದೇವೆ. ಮೇವು ಬ್ಯಾಂಕ್‌, ಗೋಶಾಲೆ ಆರಂಭಕ್ಕೆ 80 ಲಕ್ಷ ರೂ.ಗೆ ಅನುಮತಿ ನೀಡಿದ್ದೇವೆ. ಜಿಲ್ಲೆಯಲ್ಲಿ ಎಲ್ಲಿಯೇ ಸಮಸ್ಯೆಯಾದರೂ ನಾವು ನಿಗಾ ವಹಿಸುತ್ತಿದ್ದೇವೆ. ಬರದ ಸ್ಥಿತಿ ವೇಳೆ ಪ್ರತಿ ಗ್ರಾಪಂ ಹಂತದಲ್ಲಿ 6-7 ಲಕ್ಷ ರೂ. ಕ್ರಿಯಾಯೋಜನೆಗೂ ಯೋಜನೆ ರೂಪಿಸಿದ್ದೇವೆ.
 ಪಿ. ಸುನೀಲಕುಮಾರ, ಜಿಲ್ಲಾಧಿಕಾರಿ

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next