ಗದಗ: ರೈತರ ಅನುಕೂಲಕ್ಕಾಗಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಹೆಸರು ಬೇಳೆ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಸರ್ಕಾರ ಆದೇಶಿಸಿ ವಾರ ಕಳೆಯುತ್ತಿದ್ದರೂ, ನೋಂದಣಿ ಕಾರ್ಯವೇ ಆರಂಭವಾಗಿಲ್ಲ. ಆದೇಶದ ಪ್ರಕಾರ ಇನ್ನೆರಡು ದಿನಗಳಲ್ಲಿ(ಸೆ.9) ಹೆಸರು ಬೇಳೆ ಬೆಳೆಗಾರರ ನೋಂದಣಿ ಅವಧಿ ಮುಕ್ತಾಯಗೊಳ್ಳಲಿದ್ದು, ರೈತರಲ್ಲಿ ಆತಂಕ ಎದುರಾಗಿದೆ.
ರಾಜ್ಯದಲ್ಲಿ ಹೆಸರು ಬೇಳೆ ಬೆಲೆ ಗಣನೀಯವಾಗಿ ಕುಸಿದಿದ್ದರಿಂದ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಆರಂಭಿಸುವಂತೆ ರೈತರು ಹೋರಾಟ ನಡೆಸಿದ್ದರು. ಅನ್ನದಾತರ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸರ್ಕಾರ ಆ.29ರಂದು ಹಾಗೂ ರಾಜ್ಯ ಸರ್ಕಾರ ಆ.30ರಂದು ಅಧಿಕೃತವಾಗಿ ಆದೇಶ ಹೊರಡಿಸಿತ್ತು. ಪ್ರಸಕ್ತ ಮುಂಗಾರು ಹಂಗಾಮಿಗಾಗಿ ಗದಗ, ಧಾರವಾಡ, ಕಲಬುರಗಿ, ಬೆಳಗಾವಿ, ಬಾಗಲಕೋಟೆ, ಯಾದಗಿರಿ ಮತ್ತು ಬೀದರ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಆ.30ರಿಂದ 30 ದಿನಗಳ ಅವಧಿಯವರೆಗೆ ಖರೀದಿಸಲು ಸೂಚಿಸಿತ್ತು. ಪ್ರತಿ ಕ್ವಿಂಟಲ್‌ಗೆ 6.975 ರೂ. ದರದಲ್ಲಿ ಎಫ್‌ಎಕ್ಯೂ ಮಾರ್ಗಸೂಚಿಗಳನ್ವಯ ಖರೀದಿಸಲು ರಾಜ್ಯ ಮಟ್ಟದ ಏಜೆನ್ಸಿಯಾದ ಕರ್ನಾಟಕ ರಾಜ್ಯ ಸಹಕಾರ ಮಹಾಂಡಳಿಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಗದಗ ಜಿಲ್ಲೆಯಲ್ಲಿ ಒಟ್ಟು 37 ಮತ್ತು ರಾಜ್ಯದ ಏಳು ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಸುಮಾರು 257 ಖರೀದಿ ಕೇಂದ್ರಗಳನ್ನು ಈಗಾಗಲೇ ತೆರೆಯಲಾಗಿದ್ದು ಅಲ್ಲಿ ರೈತರಿಂದ ಖರೀದಿಸಿದ ಉತ್ಪನ್ನ, ಪ್ರಮಾಣ ಹಾಗೂ ರೈತರ ಬ್ಯಾಂಕ್ ವಿವರಗಳನ್ನು ನೆಫೆಡ್‌ನಿಂದ ಎನ್‌ಇಎಂ-ಎಲ್ ತಂತ್ರಾಂಶದಲ್ಲಿ ದಾಖಲಿಸಬೇಕು. ಆದರೆ, ನೆಫೆಡ್‌ನಿಂದ ಎನ್‌ಇಎಂಎಲ್ ತಂತ್ರಾಂಶದಲ್ಲಿ ಖಾತೆ ತೆರೆಯುವುದು ಹಾಗೂ ನೆಫೆಡ್ ಮೊಬೈಲ್ ಆ್ಯಪ್ ಡೌನ್‌ಲೋಡ್ ವಿಳಂಬದಿಂದಾಗಿ ಹೆಸರು ಬೇಳೆ ಬೆಳೆಗಾರರ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಆರಂಭಗೊಂಡಿಲ್ಲ ಎನ್ನಲಾಗಿದೆ.
ಬೆಳೆಗಾರರಲ್ಲಿ ಹೆಚ್ಚಿದ ಆತಂಕ: ಹೆಸರು ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ರಾಜ್ಯ ಸರ್ಕಾರ ಆ.31ರಂದು ಆದೇಶ ಹೊರಡಿಸಿದ್ದು, ಸೆ.9ರವರೆಗೆ ರೈತರ ನೋಂದಣಿ ಹಾಗೂ ಆ.30 ರಿಂದ 30 ದಿನಗಳವರೆಗೆ ಹೆಸರು ಖರೀದಿಗೆ ಕಾಲಮಿತಿ ನಿಗದಿಗೊಳಿಸಿದೆ. ಆದರೆ, ಈವರೆಗೂ ನೋಂದಣಿ ಪ್ರಕ್ರಿಯೆಯೆ ಆರಂಭಗೊಂಡಿಲ್ಲ. ಹೀಗಾಗಿ ಹೆಸರು ನೋಂದಾಯಿಸಿಕೊಳ್ಳಲು ಪ್ರತಿನಿತ್ಯ ನೂರಾರು ರೈತರು ಖರೀದಿ ಕೇಂದ್ರಗಳಿಗೆ ಅಲೆಯುವಂತಾಗಿದೆ. ಮತ್ತೂಂದೆಡೆ ಸೆ.9ರಂದು ನೋಂದಣಿ ಅವಧಿ ಮುಗಿಯಲಿದ್ದು, ರೈತರು ಆತಂಕಕ್ಕೆ ಒಳಗಾಗುವಂತಾಗಿದೆ.
ಎನ್‌ಇಎಂಎಲ್ ತಂತ್ರಾಂಶ ಅಭಿವೃದ್ಧಿಯಾಗದ ಕಾರಣ ಗದಗ ಸೇರಿದಂತೆ ರಾಜ್ಯದ ಯಾವ ಜಿಲ್ಲೆಯಲ್ಲೂ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಆರಂಭಗೊಂಡಿಲ್ಲ. ಖರೀದಿ ಕೇಂದ್ರಗಳ ಹೆಸರಲ್ಲಿ ಪ್ರತ್ಯೇಕ ಖಾತೆ ತೆರೆಯಲು ನೆಫೆಡ್ ಸಂಸ್ಥೆಗೆ ಕಳೆದ ವಾರವೇ ದಾಖಲೆ ಸಲ್ಲಿಸಲಾಗಿದೆ. ಶೀಘ್ರವೇ ನೋಂದಣಿ ಪ್ರಕ್ರಿಯೆ ಆರಂಭವಾಗಬಹುದು. ಅದರೊಂದಿಗೆ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಕೊನೆ ದಿನವನ್ನು ವಿಸ್ತರಿಸುವಂತೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
– ಶ್ರೀಕಾಂತ, ಗದಗ ಜಿಲ್ಲಾ ವ್ಯವಸ್ಥಾಪಕ, ರಾಜ್ಯ ಸಹಕಾರ ಮಾರಾಟ ಮಹಾಮಂಡಳ
– ವೀರೇಂದ್ರ ನಾಗಲದಿನ್ನಿ