ಮಸ್ಕಿ: ನಾರಾಯಣಪುರ ಬಲದಂಡೆ 5ಎ ಶಾಖಾ ಕಾಲುವೆ ಅನುಷ್ಠಾನಕ್ಕೆ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಆದರೆ ತಾಂತ್ರಿಕ ಸಮಸ್ಯೆ ಕಾರಣಕ್ಕೆ ಸರ್ಕಾರ ಇದನ್ನು ಒಪ್ಪುತ್ತಿಲ್ಲ. ಆಗದ್ದನ್ನು ಕೇಳಿದರೆ ಮಾಡಲು ಯಾರಿಂದ ಸಾಧ್ಯ?. ಒಂದು ವೇಳೆ ಇದರ ಜಾರಿಗೆ ತಾಂತ್ರಿಕ ಸಾಧ್ಯತೆ ಇದೆ ಎನ್ನುವವರು ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು. ಪಟ್ಟಣದ ಬಸವೇಶ್ವರ ಕಾಲೋನಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ರೈತರ ವಿಷಯದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ನಾನು ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳಲು ಸಿದ್ಧನಿಲ್ಲ. 5ಎ ಆಗುತ್ತದೆ ಎಂದು ರೈತರಿಗೆ ಸುಳ್ಳು ಭರವಸೆ ನೀಡಿ ಚುನಾವಣೆ ಎದುರಿಸಲಾರೆ. ಜನರ ಬೆಂಬಲ ಇದ್ದರೆ ನಾನು ಗೆಲ್ಲುವುದು ಖಾತ್ರಿ. ಆದರೆ ಕಾಂಗ್ರೆಸ್‌ನವರು ಸೇರಿ ಕೆಲವು ರಾಜಕೀಯ ಮುಖಂಡರು ರೈತರ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. 67 ದಿನಗಳಿಂದ ನಡೆದ ಧರಣಿ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿ ಎಲ್ಲ ಹಂತದ ಅಧಿ
ಕಾರಿಗಳು ಭೇಟಿ ನೀಡಿ ರೈತರಿಗೆ ಮನವೊಲಿಸುವ ಕೆಲಸ ಮಾಡಿದ್ದಾಗಿದೆ ಎಂದರು.
5ಎ ಕಾಲುವೆ ಜಾರಿಗೆ ಇರುವ ತಾಂತ್ರಿಕ ಸಮಸ್ಯೆ ಕುರಿತು ಮನವರಿಕೆ ಮಾಡಿದಾಗಲೂ ರೈತರು ಒಪ್ಪಿಕೊಳ್ಳುತ್ತಿಲ್ಲ. ಆದರೆ ಕೆಲವು ರೈತರು ಇದನ್ನು ಮನಗಂಡು ಸದ್ಯಕ್ಕೆ ಸಿಗುವ ನಂದವಾಡಗಿ ಏತ ನೀರಾವರಿ ಯೋಜನೆ ಒಪ್ಪಿಕೊಂಡಿದ್ದಾರೆ. ಅಂತಹ ರೈತರ ನಿಯೋಗ ಬೆಂಗಳೂರಿಗೆ ಕರೆದೊಯ್ದು ಮಂತ್ರಿಗಳನ್ನು ಭೇಟಿ ಮಾಡಿಸಿದ್ದಾಗಿದೆ. ಇನ್ನೇನು ನಂದವಾಡಗಿ ಏತ ನೀರಾವರಿ ಮೂಲಕ 2.25 ಟಿಎಂಸಿ ನೀರು ಬಳಕೆಗೆ ಕಾರ್ಯಾದೇಶವಾಗಿದೆ. ಹನಿ ನೀರಾವರಿ ಬದಲು ಹರಿ ನೀರಾವರಿಗೂ ಸರ್ಕಾರ ಒಪ್ಪಿಗೆ ನೀಡಿದೆ. ರೈತರು ಸದ್ಯಕ್ಕೆ ಸಿಗುವ ಈ ನೀರಾವರಿ ಸೌಲಭ್ಯ ಬಳಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ 5ಎ ಕಾಲುವೆ ಜಾರಿ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತದೆ ಎಂದು ಮನವಿ ಮಾಡಿದರು.
ಪಿತೂರಿ ನಡೆಯುತ್ತಿದೆ: ಸದ್ಯ ಎದುರಾಗುವ ಮಸ್ಕಿ ಉಪ ಚುನಾವಣೆ ಕಾರಣಕ್ಕಾಗಿಯೇ ಇದನ್ನು ಇಶ್ಯೂ ಮಾಡಲಾಗಿದೆ. ಉಪ ಚುನಾವಣೆಯಲ್ಲಿ ನನ್ನ ವಿರುದ್ಧ ಪಿತೂರಿ ನಡೆಸುವುದೇ ಕೆಲವು ಹೋರಾಟಗಾರರ ಇಚ್ಛೆ. ರೈತರಿಗೆ ಎಲ್ಲ ರೀತಿಯಿಂದ ತಿಳಿ ಹೇಳಿದಾಗಲೂ ಹೋರಾಟ ಮುಂದುವರಿಸುವುದರ
ಹಿಂದಿನ ಉದ್ದೇಶ ಇದಲ್ಲದೇ ಮತ್ತೇನಿರಲು ಸಾಧ್ಯ?. ನನಗಂತೂ ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದು ಇಷ್ಟವಿಲ್ಲ. ಹೋರಾಟದ ವೇದಿಕೆಗೆ ತೆರಳಿದ್ದ
ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ, ಎಚ್.ಬಿ. ಮುರಾರಿ ಅಂತವರಿಗೆ ನೇರವಾಗಿ ನಾನೇ ಖುದ್ದು ಮಾತನಾಡಿದ್ದೇನೆ.
ತಾಂತ್ರಿಕವಾಗಿ ಈ ಯೋಜನೆ ಜಾರಿ ಮಾಡಲು ಸಾಧ್ಯವಿದ್ದರೆ ನಮ್ಮ ಜತೆ ಬನ್ನಿ. ನಿಮ್ಮನ್ನೂ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗುತ್ತದೆ. ಸಚಿವರು, ಅ ಧಿಕಾರಿಗಳ ಜತೆ ಸಭೆ ಮಾಡಿ ನಿಮ್ಮ ವಿಚಾರ ಅವರ ಮುಂದಿಟ್ಟು ಯೋಜನೆ ಜಾರಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವೆ ಎಂದಿರುವೆ. ಆದರೆ ಅವರು ಬರಲಾರರು, ರೈತರು ಒಪ್ಪಲಾರರು. ಹೀಗಿದ್ದಾಗ ಈ ಪರಿಸ್ಥಿತಿ ತಿಳಿಗೊಳಿಸುವುದೇಗೆ? ಎಂದು ಪ್ರಶ್ನಿಸಿದರು. ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಇದ್ದರು.