Advertisement

13 ವರ್ಷಗಳಿಂದ ಸವಲತ್ತಿಲ್ಲ ; ಸಂಕಷ್ಟ ಕಾಲದಲ್ಲೂ ನಿರ್ಲಕ್ಷ್ಯ

01:02 AM May 30, 2021 | Team Udayavani |

ಪುತ್ತೂರು : ಹಾಲಿ ಸಂಕಷ್ಟ ಕಾಲದಲ್ಲಿ ಸರಕಾರ ಹಳ್ಳಿ ಹಳ್ಳಿಗೆ ಉಚಿತ ಪಡಿತರ ವಿತರಿಸುವುದಾಗಿ ಹೇಳು ತ್ತಿದ್ದರೂ ಇಲ್ಲಿನ 15 ಬಡ, ದಲಿತ ಕುಟುಂಬಗಳಿಗೆ 13 ವರ್ಷಗಳಿಂದ ಪಡಿತರವೇ ಇಲ್ಲ!

Advertisement

ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರವಾಗಿರುವ ಸುಳ್ಯದ ಅಮರಪಟ್ನೂರು ಗ್ರಾಮದ ಅಕ್ಕೋಜಿಪಾಲ್‌ ಎಂಬಲ್ಲಿರುವ ಪರಿಶಿಷ್ಟ ಜಾತಿಯ ಮಾಯಿಲ ಸಮುದಾಯದ ಕುಟುಂಬಗಳ ವರುಷಾನು ಗಟ್ಟಲೆಯ ಗೋಳಿನ ಕಥೆ ಇದು.

19 ದಲಿತ ಕುಟುಂಬ
ಅಕ್ಕೋಜಿಲ್‌ಪಾಲ್‌ನಲ್ಲಿ ನೂರಕ್ಕೂ ಅಧಿಕ ವರ್ಷಗಳಿಂದ ಮಲೆಯಾಳ ಮಾತೃಭಾಷಿಕ ಮಾಯಿಲ ಕುಟುಂಬಗಳು ನೆಲೆಸಿವೆ. ನಾಲ್ಕೈದು ಮಂದಿಯ ಹೆಸರಿನಲ್ಲಿದ್ದ ಜಾಗವನ್ನು 18 ವರ್ಷಗಳ ಹಿಂದೆ ನವಗ್ರಾಮ ಯೋಜನೆಯಡಿ 21 ಕುಟುಂಬಗಳಿಗೆ ತಲಾ 3 ಸೆಂಟ್ಸ್‌ನಂತೆ ವಿಭಾಗಿಸಿ ನೀಡಿ ವಸತಿ ಯೋಜನೆಯಡಿ ಮನೆ ನಿರ್ಮಿಸಲಾಗಿತ್ತು. 19 ಮನೆಗಳಲ್ಲಿ 60ಕ್ಕೂ ಅಧಿಕ ಮಂದಿ ಇಲ್ಲಿದ್ದಾರೆ. ವಿಭಜನೆಯ ಬಳಿಕ 5 ಕುಟುಂಬಗಳನ್ನು ಬಿಟ್ಟು 15 ಕುಟುಂಬಗಳಿಗೆ ಪಡಿತರ ಕಾರ್ಡ್‌ ಮರುನೋಂದಣಿ ಮಾಡದ ಕಾರಣ ಪಡಿತರ ಲಭಿಸುತ್ತಿಲ್ಲ. ಯಾವ ಇಲಾಖೆಯೂ ಅವರ ಗೋಳು ಕೇಳುವ ಗೋಜಿಗೆ ಹೋಗಿಲ್ಲ.

ಆಧಾರ್‌ ಕಾರ್ಡ್‌ ಇಲ್ಲ
ಇಲ್ಲಿರುವ 60 ಮಂದಿಯ ಪೈಕಿ 45 ಮಂದಿಗೆ ಆಧಾರ್‌ ಕಾರ್ಡ್‌ ಇಲ್ಲ. “ಸರಕಾರ ಸಮುದಾಯದ ಏಳಿಗೆಗೋಸ್ಕರ ಘೋಷಿಸುವ ಯೋಜನೆಗಳ ಸೌಲಭ್ಯ ಪಡೆಯಲು ಯಾವುದೇ ದಾಖಲೆಗಳು ನಮ್ಮಲ್ಲಿಲ್ಲ. 3 ಸೆಂಟ್ಸ್‌ ಜಾಗ, ಅದರಲ್ಲಿ ಈಗಲೋ ಆಗಲೋ ಎನ್ನುವಂತಿರುವ ಮುರುಕು ಜೋಪಡಿ ವಿನಾ ಬೇರೇನೂ ಇಲ್ಲ. ಕೆಲವು ಮನೆಗಳಲ್ಲಿ ಶೌಚಾಲಯವೂ ಸರಿ ಇಲ್ಲ’ ಎನ್ನುತ್ತಾರೆ ಕಾಲನಿಯ ನಾರಾಯಣ, ಚೆನ್ನು ಮತ್ತು ಮಾದೆ.

ಕಾಡುತ್ತಿದೆ ಅನಾರೋಗ್ಯ
ಕಾಲನಿಯಲ್ಲಿ ಪುಟ್ಟ ಮಕ್ಕಳಿದ್ದಾರೆ. ಕೆಲವು ದಿನಗಳಿಂದ ಜ್ವರ ಸೇರಿದಂತೆ ಅನಾರೋಗ್ಯ ಅವರನ್ನು ಕಾಡುತ್ತಿದೆ. ಅಮರಪಟ್ನೂರು ಗ್ರಾಮಕ್ಕೆ ಪ್ರತ್ಯೇಕ ಆಶಾ ಕಾರ್ಯಕರ್ತೆಯರಿಲ್ಲ; ನೆರೆಯ ಗ್ರಾಮದ ಕಾರ್ಯಕರ್ತೆಗೆ ಇಲ್ಲಿನ ಜವಾಬ್ದಾರಿ. ಆರೋಗ್ಯ ಇಲಾ ಖೆಯ ಅಧಿಕಾರಿಗಳಾಗಲಿ ವೈದ್ಯರಾ ಗಲೀ ಇಲ್ಲಿ ಪರಿಶೀಲನೆಗೆ ಬಂದಿಲ್ಲ.

Advertisement

ಪಡಿತರ ಚೀಟಿ ಇಲ್ಲದಿರುವ ವಿಚಾರ ಗಮನಕ್ಕೆ ಬಂದಿದೆ. ಅವರ ಬಳಿ ಪೂರಕ ದಾಖಲೆಗಳಿಲ್ಲ. ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ ಪಡಿತರ ಚೀಟಿ ಇತ್ಯಾದಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.
– ಅನಿತಾಲಕ್ಷ್ಮೀ, ಸುಳ್ಯ ತಹಶೀಲ್ದಾರ್‌

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next