ಇಸ್ಲಮಾಬಾದ್: ಭಾರತದೊಂದಿಗೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ವೇಳೆಯಲ್ಲಿ,ಯುದ್ಧಕ್ಕೆ ಸಿದ್ದತೆ ನಡೆಸಲಾಗುತ್ತಿದೆ ಎನ್ನುವ ಮಾಧ್ಯಮ ವರದಿಗಳನ್ನು ಶುಕ್ರವಾರ ಪಾಕಿಸ್ಥಾನ ತಳ್ಳಿ ಹಾಕಿದೆ.
ಸೇನಾ ಡಿಜಿ ಮೇಜರ್ ಜನರಲ್ ಆಸಿಫ್ ಗಫೂರ್ ಅವರು ಎಎನ್‌ಐಗೆ ಪ್ರತಿಕ್ರಿಯಿಸಿ, ‘ಭಾರತದ ಯುದ್ಧ ಬೆದರಿಕೆಗಳಿಗೆ ಪ್ರತಿಕ್ರಿಯಿಸುವ ಹಕ್ಕನ್ನು ಪಾಕಿಸ್ಥಾನ ಕಾಯ್ದಿರಿಸಿದೆ’ ಎಂದಿದ್ದಾರೆ.
‘ಪಾಕಿಸ್ಥಾನ ಯುದ್ಧ ಸಿದ್ಧತೆಗಳನ್ನು ನಡೆಸುತ್ತಿದೆ’ ಎನ್ನುವ ವರದಿಗಳು ಬಂದ ಬಳಿಕ ಗಫೂರ್ ಅವರು ಈ ಹೇಳಿಕೆ ನೀಡಿದ್ದಾರೆ.
‘ನಾವು ಯುದ್ಧಕ್ಕೆ ಸಿದ್ಧತೆಗಳನ್ನು ನಡೆಸುತ್ತಿಲ್ಲ ಮಾತ್ರವಲ್ಲದೆ ಯುದ್ಧವನ್ನು ಬಯಸುತ್ತಿಲ್ಲ. ಭಾರತ ಯುದ್ಧ ಬೆದರಿಕೆಗಳನ್ನು ಕಳುಹಿಸುತ್ತಿದೆ. ಯುದ್ಧ ಪ್ರಾರಂಭಿರಸಲು ನಾವು ಸಿದ್ಧರಿಲ್ಲ ಆದರೆ ಬೆದರಿಕೆಗಳಿಗೆ ಪ್ರತಿಕ್ರಿಯಿಸುವ ಹಕ್ಕು ನಮಗಿದೆ’ ಎಂದಿದ್ದಾರೆ.
‘ನಾವು ಬೆದರಿಕೆಗೆ ಸಂಪೂರ್ಣ ಬಲದಿಂದ ಪ್ರತಿಕ್ರಿಯೆ ನೀಡುತ್ತೇವೆ. ಇದು ನಿಮಗೆ ಅಚ್ಚರಿ ನೀಡಲಿದೆ. ಪಾಕ್‌ನೊಂದಿಗೆ ಗೊಂದಲ ಬೇಡ’ ಎಂದಿರುವುದಾಗಿ ಸುದ್ದಿ ಸಂಸ್ಥೆ ರೂಟರ್ಸ್ ವರದಿ ಮಾಡಿದೆ.