ಇತ್ತೀಚಿಗೆ ಎಲ್ಲಾ ಊರಲ್ಲೂ ಕ್ರಿಕೆಟ್ ಪಂದ್ಯಾಟಗಳು ನಡೆಯುವುದು ಸಾಮಾನ್ಯ ಆಗಿಬಿಟ್ಟಿದೆ. ನಮಗದು ಬರೀ ಗಲ್ಲಿ ಕ್ರಿಕೆಟ್ ಎಂದು ಅನಿಸಿದರೂ ನಿಜವಾದ ಆಟಗಾರರಿಗೆ ಅದು ಪ್ರೀಮಿಯರ್ ಲೀಗ್ ಆಗಿರುತ್ತದೆ. ಇದು ಊರಿನ ಪ್ರತಿಭಾವಂತ ಆಟಗಾರರ ಅನ್ವೇಷಣೆಗೂ ಆಗಿರಬಹುದು ಅಥವಾ ಇನ್ನು ಕೆಲವರಿಗೆ ಆಟವಾಡಿ ಖುಷಿಪಡಲೂ ಆಗಿರಬಹುದು. ಮಳೆ ಕಳೆದು ಡಿಸೆಂಬರ್ ತಿಂಗಳಲ್ಲೇ ಶುರುವಾಗುವ ಈ ಪಂದ್ಯಾಟ ಮುಂದಿನ ಮಳೆಗಾಲ ಶುರುವಾಗುವವರೆಗೂ ನಡೆಯುತ್ತಲೇ ಇರುತ್ತದೆ. ಅಂತಹದೊಂದು ಪ್ರೀಮಿಯರ್ ಲೀಗ್ ನಮ್ಮೂರಲ್ಲೂ ನಡೆಯುತ್ತೆ.
ನಮ್ಮೂರಲ್ಲೂ ಪ್ರತಿವಾರ ಈ ಗಲ್ಲಿ ಕ್ರಿಕೆಟ್ ಅಲ್ಲಲ್ಲ, ಪ್ರೀಮಿಯರ್ ಲೀಗ್ ನಡೆಯುತ್ತಿರುತ್ತದೆ. ನಿಜ ಹೇಳಬೇಕೆಂದರೆ, ಈ ಕ್ರಿಕೆಟನ್ನು ವೀಕ್ಷಿಸಲು ನಾವೆಲ್ಲರೂ ಹಾತೊರೆಯುತ್ತಿರುತ್ತೇವೆ. ಒಂದು ದಿನ ಪಂದ್ಯಾಟವೇನಾದರೂ ರದ್ದುಗೊಂಡರೆ ಮನೆ ಮನೆಯಲ್ಲೂ ಅದೇ ಮಾತು, ಎಲ್ಲರದ್ದೂ ಅದೇ ಪ್ರಶ್ನೆ, “ಇವತ್ತು ಕ್ರಿಕೆಟ್ ಯಾಕಿಲ್ಲ. ಯಾಕೆ ನಿಂತೋಯ್ತು’ ಅಂತ. ಅವತ್ತೂ ಆಟ ನಡೆದಿಲ್ಲ ಅಂದರೆ ಮಕ್ಕಳೊಂದಿಗೆ ನಾವೂ ಸಪ್ಪೆಮೋರೆ ಹಾಕುತ್ತೇವೆ.
ನಡೆಯುತ್ತಿರುವುದು ಗಲ್ಲಿ ಕ್ರಿಕೆಟ್ ಆದರೂ ತಯಾರಿಗೇನೂ ಕಮ್ಮಿಯಿಲ್ಲ. ಎಲ್ಲಿಯವರೆಗೆ ಎಂದರೆ ಪಿಚ್‌ಗೆ ಸಾರಿಸಲಾಗುವ ಸೆಗಣಿಯಿಂದ ಹಿಡಿದು ಆಟಗಾರರಿಗೆ ವಿಶ್ರಾಂತಿಗೆಂದು ಹಾಕಲಾಗುವ ಶಾಮಿಯಾನದವರೆಗೂ ತಯಾರಿ ಜೋರಾಗಿಯೇ ನಡೆಯುತ್ತದೆ. ಕ್ರಿಕೆಟ್ ನಡೆಯುವ ದಿನವಂತೂ ಬೆಳಗ್ಗೆ ಬೇಗನೆ ಆಟಗಾರರು ಮೈದಾನದಲ್ಲಿ ಹಾಜರಾಗಿರುತ್ತಾರೆ. ಎಂದೂ ಬೇಗ ಏಳದ ಯುವಕರು ಅಂದು ಮಾತ್ರ ಬಹಳ ಬೇಗನೇ ಎದ್ದಿರುತ್ತಾರೆ. ಬರೀ ಮೋಜಿಗಾಗಿ ಒಂದು ದಿನದ ಮಟ್ಟಿಗೆ ಆಡುತ್ತಿದ್ದ ಆಟಗಳು ಈಗ ಪ್ರೀಮಿಯರ್ ಲೀಗ್ ಆಗಿ ಬದಲಾಗಿದೆ. ಯಾವುದೇ ಕ್ರಿಕೆಟ್‌ಗೆ ಕಮ್ಮಿಯಿಲ್ಲದಂತೆ ವಾರ ವಾರ ಪಂದ್ಯಾಟ ನಡೆಸಿ, ಪ್ರತಿಯೊಂದು ತಂಡಕ್ಕೂ ಒಬ್ಬ ಮಾಲಿಕನೂ ಇದ್ದು, ತಂಡಕ್ಕೊಂದು ಐಕಾನ್ ಆಟಗಾರರೂ ಇದ್ದು, ಗೆದ್ದ ತಂಡಕ್ಕೆ ನಗದು ಬಹುಮಾನವೂ ಇರುತ್ತದೆ. ಇನ್ನು ವಿಜೇತರಿಗೆ ನೀಡುವ ಪ್ರಶಸ್ತಿಯೋ ಅದು ಯಾವ ವಲ್ಡ…ì ಕಪ್‌ಗಿಂತಲೂ ಕಮ್ಮಿಯಿಲ್ಲ ಎಂದೆನಿಸುತ್ತದೆ ಏಕೆಂದರೆ, ಅದನ್ನು ಇಬ್ಬಿಬ್ಬರು ಮಂದಿ ಹೊತ್ತುಕೊಂಡು ತರುತ್ತಾರೆ.
ಆಟ ಶುರುವಾಗುವ ಮೊದಲಂತೂ ಬಹಳ ಶಾಸ್ತ್ರೋಕ್ತವಾಗಿ ಪ್ರಾರ್ಥನೆ ಮಾಡಿ, ತೆಂಗಿನಕಾಯಿ ಹೊಡೆದು ಎಲ್ಲರೂ ನೆಟ್ಟಗೆ ನಿಂತು ರಾಷ್ಟ್ರಗೀತೆ ಹಾಡುವ ಮೂಲಕ ಪ್ರಾರಂಭಿಸುತ್ತಾರೆ. ಆಟ ಶುರುವಾದ ನಂತರ ಮೈಕು ವೀಕ್ಷಕ ವಿವರಣೆಗಾರರ ಕೈಗೆ ಸಿಕ್ಕಿದರಂತೂ ಮುಗಿದೇ ಹೋಯಿತು ಊರಲ್ಲಿರುವ ಎಲ್ಲರ ಮನೆ ಮನೆಗೂ ಕೇಳುವ ಹಾಗೆ ಪಂದ್ಯಾಟದ ಪೂರ್ಣ ವಿವರಣೆ ನೀಡುತ್ತಾರೆ. ನಿಜ ಹೇಳಬೇಕೆಂದರೆ ಈ ಗಲ್ಲಿ ಕ್ರಿಕೆಟ್‌ನಲ್ಲಿ ಆಟಗಾರರು ಆಡುವ ಆಟಕ್ಕಿಂತ ಅವರ ಕಮೆಂಟ್ರಿಯೇ ಬಹಳ ಮಜವಾಗಿರುತ್ತದೆ. ಅದುವೇ ಈ ಪಂದ್ಯಾಟವನ್ನು ಇನ್ನಷ್ಟು ರಂಗೇರಿಸುವುದು. ಎಷ್ಟರಮಟ್ಟಿಗೆ ಎಂದರೆ ಅವರ ಕಮೆಂಟ್ರಿ ಕೇಳಿದಾಗ ಕುಳಿತಲ್ಲಿಂದಲೇ ಎದ್ದು ಒಮ್ಮೆ ಇಣುಕೋಣ ಎಂದನಿಸುವವರೆಗೆ. ಎಲ್ಲಾದರೂ ಬ್ಯಾಟ್ಸ್‌ಮನ್ ಒಂದು ಸಿಕ್ಸ್ ಹೊಡೆದರೆ ಸಾಕು, ಬಾಲ್ ಅಲ್ಲೋ ಎಲ್ಲೋ ಇದ್ದರೂ ವಿವರಣೆಗಾರರ ಪ್ರಕಾರ ಅದು ಯಾರದ್ದೋ ಅಂಗಡಿಯ ಮುಂದೆಯೋ, ಮನೆ ಮುಂದೆಯೋ ಇರುತ್ತೆ. ಆಗ ನಾವು ನಮ್ಮ ಮನೆಯ ಕಿಟಕಿಯ ಮೂಲಕ ಬಾಲ್ ಎಲ್ಲಿದೆ ಎಂದು ಒಮ್ಮೆ ಸುತ್ತ ಕಣ್ಣಾಡಿಸುತ್ತೇವೆ. ಇನ್ನು ಕಮೆಂಟ್ರಿಯ ಮಧ್ಯೆ ಪಂದ್ಯ ವೀಕ್ಷಿಸಲು ಜನಸಾಗರವೇ ಸೇರಿದೆ ಎಂದರೆ ಎಷ್ಟು ಜನ ಇದ್ದಾರಪ್ಪ ಎಂದು ಕಣ್ಣಾಡಿಸಿದರೆ ಅಲ್ಲಿ ಬದಿಯಲ್ಲಿ ಲೆಕ್ಕ ಮಾಡಿ ನಾಲ್ಕು ಅಜ್ಜಂದಿರು ಅವರ ನಾಲ್ಕು ಮೊಮ್ಮಕ್ಕಳೂ ಇರುತ್ತಾರೆ. ಅವರ ಪಾಲಿಗೆ ಅದೇ ಜನಸಾಗರ. ಆದರೆ ಸಂಜೆಯ ಹೊತ್ತಿಗೆ ಮೈದಾನದ ಸುತ್ತ ಸಾಕಷ್ಟು ಜನ ಸೇರುವುದಂತೂ ಖಂಡಿತ. ಆಟ ವೀಕ್ಷಿಸಲು ಅಲ್ಲದಿದ್ದರೂ ಅಲ್ಲಿ ಮಾರಾಟವಾಗುವ ಕಲ್ಲಂಗಡಿ, ಚುರುಮುರಿ ಖರೀದಿಸಲಾದರೂ ಜನ ಬಂದೇ ಬರುತ್ತಾರೆ. ಒಂಥರ ಜಾತ್ರೆಯ ಹಾಗೆಯೇ ಆಗಿರುತ್ತದೆ. ವೀಕ್ಷಣೆ ವಿವರಣೆಗಾರರ ವಿವರಣೆಯನ್ನು ಕೇಳಿಯೇ ಅನುಭವಿಸಬೇಕು. ಅದನ್ನು ಕೇಳಿದರೆ ಪೂರ್ತಿ ಆಟವನ್ನೇ ನೋಡಿದ ಫಲ. ಮಧ್ಯೆ ಎಲ್ಲಾದರೂ ಯಾವುದೇ ರನ್ ಲಭಿಸದೇ ಹೋದಲ್ಲಿ ಚೆಂಡಿಗೂ ದಾಂಡಿಗೂ ಸಂಪರ್ಕ ಕಂಡು ಬಾರದೇ ಚುಕ್ಕಿಯಾಗಿದೆ ಚೆಂಡು ಎನ್ನುತ್ತಾರೆ. ಮೊದ ಮೊದಲು ಚುಕ್ಕಿ ಆಗುವುದೆಂದರೆ ಏನು ಎಂದೇ ಗೊತ್ತಾಗಿರಲಿಲ್ಲ. ಮತ್ತೆ ತಿಳಿಯಿತು ಅದು ನೋ ರನ್ ಎಂದು. ಯಾರಾದರೂ ಉತ್ತಮ ಬ್ಯಾಟ್ಸ್‌ಮನ್ ಇದ್ದಲ್ಲಿ ಆತ ಆ ತಂಡದ ಹೊಡಿ ಬಡಿ ದಾಂಡಿಗನಾಗಿರುತ್ತಾನೆ. ಇನ್ನೆಲ್ಲಾದರು ಕ್ಲೀನ್ ಬೌಲ್ಡ… ಆದರೆ ಚೆಂಡು ಗೂಟವನ್ನು ಸ್ಪರ್ಶಿಸಿದೆ ಎನ್ನುತ್ತಾರೆ. ಇನ್ನೆಲ್ಲಾದರೂ ಎಸೆದ ಚೆಂಡು ವೈಡ್ ಆದಲ್ಲಿ ಎಂಪಾಯರ್‌ನ ಕೈಗಳು ಅಗಲವಾಗಿದೆ, ಚೆಂಡೂ ಅಗಲವಾಗಿದೆ ಎನ್ನಬೇಕೆ? ಅಚ್ಚ ಕನ್ನಡದ ಈ ಕಮೆಂಟ್ರಿಯನ್ನು ಕೇಳಿದಾಗಲೆಲ್ಲಾ ಕಿವಿ ತಂಪಾಗುತ್ತದೆ. ಕನ್ನಡಾಭಿಮಾನ ಎಂದರೆ ಇದೆ ತಾನೆ? ಇನ್ನು ಆಟದ ಮಧ್ಯೆ ಹಾಕಲಾಗುವ ಡಿಜೆ ಹಾಡುಗಳು ಪಂದ್ಯಾಟವನ್ನು ಮತ್ತಷ್ಟು ರಂಗೇರಿಸುವುದಂತೂ ನಿಜ.
ಪಂದ್ಯಾಟಗಳೆಲ್ಲ ಮುಗಿದು ಪ್ರಶಸ್ತಿ ವಿತರಣೆ ಕಾರ್ಯಕ್ರಮದ ಬಗ್ಗೆಯಂತೂ ಹೇಳುವುದೇ ಬೇಡ. ಅರ್ಧ ಗಂಟೆಯ ಮುಂಚೆ ನನ್ನ ಬಳಿ ಮಾತನಾಡಿ ಹೋದ ನಮ್ಮ ನೆರೆಮನೆಯ ಗೋಪಾಲಣ್ಣ ಕಾರ್ಯಕ್ರಮದಲ್ಲಿ ಊರಿನ ಹಿರಿಯ ಮುಖಂಡರಾಗಿ ಮಿಂಚುತ್ತಾರೆ. ಅಲ್ಲಿ ಅವರ ಹೆಸರು ಕೇಳಿದ ಕೂಡಲೇ “ಅರೇ ಈಗ ತಾನೆ ಇಲ್ಲಿದ್ರಲ್ಲ, ಯಾವಾಗ ಅವರು ಊರಿನ ಹಿರಿಯರಾದರೋ’ ಅಂತ ನೆರೆಮನೆಯವರೆಲ್ಲ ಚರ್ಚಿಸುತ್ತಿರುತ್ತಾರೆ. ಬಹಳ ಅಚ್ಚುಕಟ್ಟಾಗಿ ಸಮಾರೋಪ ಸಮಾರಂಭವೂ ನಡೆಯುತ್ತದೆ. ಒಬ್ಬ ನಿರೂಪಕನಿದ್ದೂ ಸ್ವಾಗತ ಭಾಷಣ, ಅಧ್ಯಕ್ಷರ ಭಾಷಣ, ಪ್ರಶಸ್ತಿ ವಿತರಣೆ ಎಲ್ಲವೂ ನಡೆಯುತ್ತದೆ. ಗೆದ್ದ ತಂಡಗಳು ಪಟಾಕಿ ಸಿಡಿಸಿ, ಬ್ಯಾಂಡು ಹೊಡೆದು ಸಂಭ್ರಮಿಸಿದರೆ ಇತರ ತಂಡದವರೂ ಯಾವ ಭೇದಭಾವವಿಲ್ಲದೆ ಗೆದ್ದದ್ದು ಯಾವ ತಂಡವೇ ಆಗಲಿ, ಅವರೊಂದಿಗೆ ಸೇರಿ ನಾಲ್ಕು ಹೆಜ್ಜೆ ಕುಣಿದು ಕುಪ್ಪಳಿಸುತ್ತಾರೆ. ಸಿಕ್ಕ ಪ್ರಶಸ್ತಿಯನ್ನು ಕಾರಲ್ಲೋ, ಬೈಕಲ್ಲೋ ಹೊತ್ತುಕೊಂಡು ಇಡೀ ಊರಿಗೆ ಒಂದು ಪ್ರದಕ್ಷಿಣೆ ಹಾಕುವಾಗ ಅವರ ಹಿಂದೆಯೇ ಮಕ್ಕಳೆಲ್ಲ ಘೋಷಣೆ ಕೂಗಿಕೊಂಡು ಹೋಗಿ ಮನೆ ಸೇರುತ್ತಾರೆ. ಇನ್ನು ಇದನ್ನೆಲ್ಲ ಮನೆಯಲ್ಲೇ ಕೂತು ವೀಕ್ಷಿಸುವ ನಾವು ಮನೆಯಲ್ಲೇ ಕೂತು ಚಪ್ಪಾಳೆ ತಟ್ಟುತ್ತೇವೆ. ಎಲ್ಲಾ ಮುಗಿದು ನಿರೂಪಕ ಈ ಬಾರಿಯ ಪ್ರೀಮಿಯರ್ ಲೀಗ್ ಮುಗಿದಿದೆ. ಮುಂದಿನ ವರ್ಷ ಮತ್ತೆ ಭೇಟಿಯಾಗೋಣ ಎಂದಾಗ ಮುಂದಿನ ವರ್ಷ ಯಾವಾಗ ಬರುತ್ತೋ ಎಂದು ಮನಸಲ್ಲೇ ಗೊಣಗುತ್ತೇವೆ. ಬೇಸಿಗೆ ಮುಗಿದು ಮಳೆ ಬಂದಾಗ ಮೈದಾನದ ತುಂಬಾ ನೀರು ತುಂಬಿ ಆ ಪಿಚ್ ಮೆಲ್ಲ ಮೆಲ್ಲನೇ ಮುಳುಗುತ್ತ ಇರುವಾಗ, ಅಲ್ಲಿ ನಡೆದ ಪಂದ್ಯಾಟಗಳನ್ನು ನೆನೆಸಿ, “ಅಯ್ಯೋ ಛೇ’ ಎಂದನಿಸುತ್ತದೆ.
ಅದೇನೇ ಆಗಲಿ, ಈ ಪ್ರೀಮಿಯರ್ ಲೀಗ್ ಬಂದರಂತೂ ಅದೊಂಥರ ಮಜಾ, ಅದೇನೋ ಒಂಥರ ಖುಷಿ, ಉತ್ಸಾಹ ಎಲ್ಲಾ. ಎಲ್ಲಿಯವರೆಗೆ ಎಂದರೆ ನಾವೂ ಅದರಲ್ಲಿ ಭಾಗಿಯಾಗುವವರೆಗೆ. ನಿಮ್ಮೂರಲ್ಲೂ ನಡೆಯುತ್ತಾ ಇಂತಹ ಕ್ರಿಕೆಟ್?
ಪಿನಾಕಿನಿ ಪಿ. ಶೆಟ್ಟಿ ಸ್ನಾತಕೋತರ ಪದವಿ ಕೆನರಾ ಕಾಲೇಜು ಮಂಗಳೂರು