Advertisement

ವೀಕ್ಷಣೆಗೆತೆರೆದುಕೊಳ್ಳದಪುತ್ತೂರಿನ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ

10:28 AM Oct 06, 2018 | Team Udayavani |

ಪುತ್ತೂರು: ಪೇಟೆ ನಡುವಿನಲ್ಲಿ ಜೀವ ತಳೆದ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಇದೀಗ ಬಾಲಗೃಹ ಎದುರಾಗಿದೆ. ಎರಡನೇ ಹಂತದ ಕಾಮಗಾರಿಗಾಗಿ ಕಳುಹಿಸಿದ ಪ್ರಸ್ತಾವನೆಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಅಕ್ಟೋಬರ್‌ ಮೊದಲ ವಾರದಲ್ಲಿ ಎರಡನೇ ಹಂತದ ಕಾಮಗಾರಿ ಆರಂಭಗೊಳ್ಳಬೇಕಿತ್ತು.

Advertisement

ಪುತ್ತೂರಿನ ಬಿರುಮಲೆ ಗುಡ್ಡದ ತುದಿಯಲ್ಲಿ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ ಕಾಮಗಾರಿ ಆರಂಭಗೊಂಡು, ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ ಕೂಡ. ಆದರೆ ಇವಿಷ್ಟನ್ನು ಮುಂದಿಟ್ಟುಕೊಂಡು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಮಾಡುವುದು ಅಸಾಧ್ಯ. ಒಂದಷ್ಟು ಕಾಮಗಾರಿಗಳು ಪೂರ್ಣಗೊಂಡ ಬಳಿಕವಷ್ಟೇ ವೃಕ್ಷೋದ್ಯಾನ ವೀಕ್ಷಣೆಗೆ ಲಭ್ಯ. ಇದು ಸಾಧ್ಯ ಆಗಬೇಕಾದರೆ, ಎರಡನೇ ಹಂತದ ಕಾಮಗಾರಿಯೂ ಪೂರ್ಣಗೊಳ್ಳಬೇಕು.

2018ರ ಎಪ್ರಿಲ್‌ಗೆ ಮೊದಲೇ ಎರಡನೇ ಹಂತದ ಕಾಮಗಾರಿಗಾಗಿ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗಿತ್ತು. ಅಷ್ಟರಲ್ಲಿ ಚುನಾವಣೆ ಎದುರಾಗಿ, ಸರಕಾರ ರಚನೆಯ ಕಸರತ್ತು ಶುರುವಾಯಿತು. ಇದೀಗ ಅರಣ್ಯ ಸಚಿವರು ಇದ್ದರೂ, ಯಾವೊಂದು ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಎರಡನೇ ಹಂತದ ಕಾಮಗಾರಿಗೆ ಅನುಮೋದನೆ ನೀಡಲು ಬಾಕಿ ಉಳಿದಿದೆ.

700 ಬಗೆಯ ಗಿಡಗಳು
ಪ್ರತಿ ಜಿಲ್ಲೆಗೊಂದು ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ ಯೋಜನೆ ಮಾಡಿರುವ ರಾಜ್ಯ ಸರಕಾರ, ಒಂದೂ ಕಾಲು ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ 30 ಲಕ್ಷ ರೂ. ಮಂಜೂರಾಗಿದ್ದು, ಕೆಲಸವೂ ಪೂರ್ಣಗೊಂಡಿದೆ. ಈ ಕಾಮಗಾರಿಗಳ ವೇಗವನ್ನು ಗಮನಿಸಿ, ಇಲಾಖೆಯ ಮೇಲಾಧಿಕಾರಿಗಳು ಪುತ್ತೂರಿಗೆ ಹೆಚ್ಚುವರಿ 11.5 ಲಕ್ಷ ರೂ.ವನ್ನು ನೀಡಿದರು.

ಇವಿಷ್ಟನ್ನು ಬಳಸಿಕೊಂಡು ಸ್ವಾಗತ ಗೇಟ್‌, ಟಿಕೇಟ್‌ ಕೌಂಟರ್‌, ಚೈನ್‌ ಲಿಂಕ್‌ ಬೇಲಿ, ಮುಳ್ಳುತಂತಿ ಬೇಲಿ ಹಾಗೂ ವಾಕಿಂಗ್‌ ಪಾಥ್‌, ಪೆರಾಗೋಲ, ಕುಳಿತುಕೊಳ್ಳಲು ಕಟ್ಟೆ, ಬೋರ್‌ವೆಲ್‌, 700 ವಿವಿಧ ಬಗೆಯ ಗಿಡಗಳನ್ನು ನೆಡುವ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇದೀಗ ಎರಡನೇ ಹಂತದ ಕಾಮಗಾರಿ ನಡೆಯಬೇಕಾಗಿದ್ದು, ಆಂಪಿಥಿಯೇಟರ್‌ ಪ್ರಮುಖ ಆಕರ್ಷಣೆ. ಕಾಂಕ್ರೀಟ್‌ ವಸ್ತುಗಳನ್ನು ಕಡಿಮೆ ಮಾಡಿ, ನೈಸರ್ಗಿಕ ವಸ್ತುಗಳಿಂದಲೇ ಇದನ್ನು ನಿರ್ಮಾಣ ಮಾಡಲಾಗುತ್ತದೆ. ಮಕ್ಕಳ ಬರ್ತ್‌ಡೇ ಪಾರ್ಟಿ, ಅಂಗನವಾಡಿಗಳ ವಾರ್ಷಿಕೋತ್ಸವ, ವಾರದ ಸಾಂಸ್ಕೃತಿಕ ಕಾರ್ಯಕ್ರಮ, ಕೌಟುಂಭಿಕ ಮನರಂಜನೆಗಾಗಿ ಇದನ್ನು ಬಳಸಿಕೊಳ್ಳಬಹುದು. ಇದರ ಜತೆಗೆ ಇನ್ನಷ್ಟು ಕಾಮಗಾರಿಗಳು ನಡೆಯಬೇಕಿದೆ. ಈ ಎಲ್ಲ ಕಾಮಗಾರಿಗಳನ್ನು ನಡೆಸಲು ಎರಡನೇ ಹಂತದಲ್ಲಿ ಅನುದಾನ ಆದಷ್ಟು ಶೀಘ್ರ ಬಿಡುಗಡೆ ಆಗಬೇಕಾದ ಅಗತ್ಯವಿದೆ. 

Advertisement

2ನೇ ಹಂತದ ಕಾಮಗಾರಿ
2ನೇ ಹಂತದ ಕಾಮಗಾರಿಯಲ್ಲಿ ಸಾಕಷ್ಟು ಕೆಲಸಗಳು ನಡೆಯಬೇಕಿದೆ. ಮಳೆಗಾಲದಲ್ಲೇ ಈ ಎಲ್ಲ ಕೆಲಸಗಳು ಪೂರ್ಣಗೊಂಡರೆ, ನೀರಿನ ಸಮಸ್ಯೆ ಇರುವುದಿಲ್ಲ. ಮಳೆ ಬಿಟ್ಟ ಬಳಿಕ ಅನುದಾನ ಮಂಜೂರಾದರೆ, ಕಾಮಗಾರಿ ಕುಂಠಿತ ಆಗುವ ಸಂಭವ ಹೆಚ್ಚು. ಅದಲ್ಲದೇ ಬಿರುಮಲೆ ಗುಡ್ಡ ಎತ್ತರದ ಪ್ರದೇಶದಲ್ಲಿ ಇರುವುದರಿಂದ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಬೇಕಾದ ಅಗತ್ಯವಿದೆ.

ಮಾಹಿತಿ ಕೇಂದ್ರ
ಈ ಮೊದಲಿದ್ದ ಗ್ರಂಥಾಲಯವನ್ನು ನವೀಕರಿಸಿ ಮಾಹಿತಿ ಕೇಂದ್ರವಾಗಿ ನಿರ್ಮಿಸಲಾಗಿದೆ. ಇದರಲ್ಲಿ ಎರಡನೇ ಹಂತದ ಕಾಮಗಾರಿ ವೇಳೆ ಅರಣ್ಯದ ಬಗೆಗಿನ ಫೂಟೋ, ಸಿನಿಮಾ, ಪ್ರಾಣಿ- ಪಕ್ಷಿಗಳ ಮಾಹಿತಿ ನೀಡುವುದು, 3ಡಿಯಲ್ಲಿ ಫೂಟೋ ಮೊದಲಾದವು ಸೇರಿಕೊಳ್ಳಲಿದೆ.

2ನೇ ಹಂತದ ಕಾಮಗಾರಿ
. ಮಕ್ಕಳ ಆಟದ ಮೈದಾನದ ಸವಲತ್ತುಗಳಿಗೆ 5 ಲಕ್ಷ ರೂ.
.  ಪ್ಲಾನೆಟೋರಿಯಂಗೆ 1.16 ಲಕ್ಷ ರೂ.
. ಆಕರ್ಷಕ ಆವರಣ ಗೋಡೆ ನಿರ್ಮಾಣಕ್ಕೆ 2 ಲಕ್ಷ ರೂ.
. ಮಾಹಿತಿ ಕೇಂದ್ರದ ಫಲಕಗಳಿಗಾಗಿ 75 ಸಾವಿರ ರೂ.
. ನೀರಿನ ಟ್ಯಾಂಕ್‌ಗೆ 1.40 ಲಕ್ಷ ರೂ.
. ಕಾರಂಜಿಯ ರಿಪೇರಿ ಹಾಗೂ ನವೀಕರಣಕ್ಕಾಗಿ 4.90 ಲಕ್ಷ ರೂ.
.  ಅರ್ಧ ಚಂದ್ರಾಕಾರದ ಟಿಕೇಟ್‌ ಕೌಂಟರ್‌ಗಾಗಿ 81 ಸಾವಿರ ರೂ.
. ಪುರುಷ ಹಾಗೂ ಮಹಿಳಾ ಶೌಚಾಲಯಕ್ಕೆ 25 ಸಾವಿರ ರೂ.
.  ಕಾವಲುಗಾರರ ವಾರ್ಷಿಕ ವೇತನ 2.34 ಲಕ್ಷ ರೂ. ಇತ್ಯಾದಿ

ನಿರೀಕ್ಷೆಯಲ್ಲಿ
ಬಿರುಮಲೆ ಗುಡ್ಡದ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಎರಡನೇ ಹಂತದ ಕಾಮಗಾರಿ ಇನ್ನಷ್ಟೇ ಪ್ರಾರಂಭ ಆಗಬೇಕು. ಅನುದಾನಕ್ಕಾಗಿ ಎದುರು ನೋಡುತ್ತಿದ್ದೇವೆ.   
– ವಿ.ಪಿ. ಕಾರ್ಯಪ್ಪ
ವಲಯ ಅರಣ್ಯಾಧಿಕಾರಿ, ಪುತ್ತೂರು

ಗಣೇಶ್‌ ಎನ್‌.ಕಲ್ಲರ್ಪೆ

Advertisement

Udayavani is now on Telegram. Click here to join our channel and stay updated with the latest news.

Next