ಇಂದು(ಶನಿವಾರ) ವಿಶ್ವ ಪರಿಸರ ದಿನ. ಜಾಗತಿಕವಾಗಿ ವಿಶ್ವಸಂಸ್ಥೆ ಕಡೆಯಿಂದಲೇ ಪರಿಸರ ದಿನವನ್ನು ಆಚರಿಸಲಾಗುತ್ತಿದ್ದು, ಪರಿಸರ ವ್ಯವಸ್ಥೆಯ ಪುನರ್ ನಿರ್ಮಾಣ ಸಾರವನ್ನು ತೆಗೆದುಕೊಳ್ಳಲಾಗಿದೆ. ಇದು ಮುಂದಿನ 10 ವರ್ಷಗಳ ಯೋಜನೆಯಾಗಿದ್ದು, ಜಗತ್ತಿನಾದ್ಯಂತ ಅರಣ್ಯ ಬೆಳೆಸಲು ಪ್ರೋತ್ಸಾಹಿಸಲಾಗುತ್ತದೆ. ಅಷ್ಟೇ ಅಲ್ಲ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಕುರಿತಂತೆಯೂ ಈ 10 ವರ್ಷ ಅರಿವು ಮೂಡಿಸಲಾಗುತ್ತದೆ.
ವಿಶ್ವ ಪರಿಸರ ದಿನವನ್ನು 1972ರಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಜಗತ್ತಿನಲ್ಲಿ ಅರಣ್ಯದ ವಿನಾಶ ಹೆಚ್ಚುತ್ತಿರುವುದನ್ನು ಮನಗಂಡ ವಿಶ್ವ ಸಂಸ್ಥೆಯು ಪರಿಸರವನ್ನು ಉಳಿಸಲು ಪ್ರತೀ ವರ್ಷದ ಜೂ.5ರಂದು ಪರಿಸರ ದಿನವನ್ನು ಆಚರಿಸುತ್ತಿದೆ. ಹಾಗೆಯೇ ಪ್ರತೀ ವರ್ಷವೂ ಒಂದೊಂದು ದೇಶ ಇದನ್ನು ಆಚರಿಸುವ ಹೊಣೆ ಹೊತ್ತುಕೊಳ್ಳುತ್ತಿದ್ದು, ಈ ವರ್ಷ ಪಾಕಿಸ್ಥಾನ ಆತಿಥ್ಯ ವಹಿಸಿಕೊಂಡಿದೆ.
ಪ್ರತಿಯೊಂದು ದೇಶವು ಪರಿಸರ ರಕ್ಷಣೆಗೆ ಪಣ ತೊಡಬೇಕಿದ್ದು, ಮಾಲಿನ್ಯಕ್ಕೊಳಗಾಗುತ್ತಿರುವ ನಮ್ಮ ನಗರಗಳು, ಕರಾವಳಿಗಳ ಮೇಲೆ ಹಾವಳಿ ಮತ್ತು ಅರಣ್ಯ ನಾಶವನ್ನು ತಡೆಗಟ್ಟಬೇಕಾಗಿದೆ ಎಂದು ವಿಶ್ವಸಂಸ್ಥೆ ಈ ವರ್ಷದ ಸಂದೇಶದಲ್ಲಿ ತಿಳಿಸಿದೆ. ಒಂದು ವೇಳೆ ನಾವು ಇವುಗಳ ರಕ್ಷಣೆ ಮಾಡಿದಲ್ಲಿ ಬಡತನ ನಿರ್ಮೂಲನೆ ಮಾಡಬಹುದಾಗಿದ್ದು, ಹಸಿವು, ನಿರಾಶ್ರಿತ ಸಮಸ್ಯೆ ಮತ್ತು ರೋಗಗಳಿಂದ ಮುಕ್ತಿ ಪಡೆಯಬಹುದಾಗಿದೆ ಎಂದೂ ಹೇಳಿದೆ.
ಇಂದಿನ ಪರಿಸ್ಥಿತಿಯಲ್ಲಿ ಪರಿಸರ ಸಂರಕ್ಷಣೆ ಜಾಗತಿಕವಾಗಿ ಚಿಂತಿಸಬೇಕಾದ ವಿಷಯವೇ. ಆದರೆ ಭಾರತದ ವಿಚಾರಕ್ಕೆ ಬಂದರೆ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡುವ ಅಗತ್ಯವಿದೆ. ಜಾಗತಿಕ ಹವಾಮಾನ ಬದಲಾವಣೆ ವಿಚಾರದಲ್ಲಿ ಭಾರತ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದೆ. ಹೊಸದಿಲ್ಲಿಯೂ ಸೇರಿದಂತೆ ದೇಶದ ಹಲವಾರು ನಗರಗಳಲ್ಲಿ ಮಿತಿ ಮೀರಿದ ಮಾಲಿನ್ಯವಿದೆ. ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಪರಿಸರ ಸಂರಕ್ಷಣೆ ವಿಚಾರದಲ್ಲಿ ನಮ್ಮ ನಿಷ್ಕಾಳಜಿ ಹೆಚ್ಚು ಮಾಲಿನ್ಯ ಸೃಷ್ಟಿಗೆ ಕಾರಣವಾಗುತ್ತಿದೆ. ಅಂತೆಯೇ ಕೈಗಾರಿಕೆಗಳ ಕಲ್ಮಶ ನೀರನ್ನು ಎಗ್ಗಿಲ್ಲದೇ ನದಿ, ಕೆರೆಗಳಿಗೆ ಸೇರಿಸುತ್ತಿದ್ದೇವೆ. ಕರಾವಳಿಯಲ್ಲಿ ಸಮುದ್ರ ಕೊರೆತ ಹೆಚ್ಚಾಗುತ್ತಿದೆ. ತಾಪಮಾನ ಏರಿಕೆ ಕಾರಣದಿಂದಾಗಿ ಸಮುದ್ರ ಮಟ್ಟವೂ ಏರಿಕೆಯಾಗುತ್ತಿದೆ.
ಇದಿಷ್ಟೇ ಅಲ್ಲ, ನೈಸರ್ಗಿಕ ವಿಕೋಪಗಳಿಗೂ ಪರೋಕ್ಷವಾಗಿ ಜಾಗತಿಕ ತಾಪಮಾನ ಬದಲಾವಣೆಯೂ ಕಾರಣವಾಗಿದೆ. 2011ರಿಂದ 2020ರ ವರೆಗೆ ದೇಶ 33 ಚಂಡಮಾರುತಗಳನ್ನು ಕಂಡಿದೆ. ಪ್ರವಾಹ, ಬಿರುಗಾಳಿ, ಚಂಡಮಾರುತಗಳ ಅಬ್ಬರ ಜೋರಾಗಿಯೇ ಇದೆ. 2008ರಿಂದ 2020ರ ವರೆಗೆ ಸುಮಾರು 37 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ. ಭಾರತದಲ್ಲಿ ಮುಂಗಾರು ಕಾಲದಲ್ಲೇ ಹೆಚ್ಚು ಪ್ರವಾಹದಂಥ ಸ್ಥಿತಿ ತಲೆದೋರಿದೆ.
ಇನ್ನು ಕೃಷಿ ಚಟುವಟಿಕೆಗಳ ಮೇಲೂ ಈ ನೈಸರ್ಗಿಕ ವಿಕೋಪಗಳ ಪರಿಣಾಮವಾಗಿದೆ. ತಾಪಮಾನ ಬದಲಾವಣೆಯಿಂದಾಗಿಯೇ ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗುತ್ತಿಲ್ಲ. ಇದು ರೈತನ ಜೀವನದ ಮೇಲೆ ಅಡ್ಡಪರಿಣಾಮ ಬೀರಿದೆ. ಹೀಗಾಗಿ ಸರಕಾರಗಳ ಜತೆಗೆ ಜನರೂ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಬೇ ಕಾಗಿರುವುದು ಅನಿವಾರ್ಯವಾಗಿದೆ.