Advertisement

ಕಾಸರಕೋಡ ಕುಸುಮಕ್ಕನ ನಿರ್ಲಕ್ಷ್ಯ ಸಲ್ಲ 

03:40 PM Nov 30, 2018 | |

ಹೊನ್ನಾವರ: ಹೆದ್ದಾರಿ ಬದಿಗೆ ಮರನೆಟ್ಟು ತಮ್ಮ ವೃಕ್ಷ ಪ್ರೀತಿಯನ್ನು ಲೋಕಕ್ಕೆ ತೋರಿಸಿಕೊಟ್ಟು ಸಾಲುಮರದ ತಿಮ್ಮಕ್ಕ ಎಂದು ಪ್ರಸಿದ್ಧಿ ಪಡೆದ ತಿಮ್ಮಕ್ಕನ ಹೆಸರಿನಲ್ಲಿ ಕಾರವಾರ, ಮುರ್ಡಶ್ವರಗಳಲ್ಲಿ ಉದ್ಯಾನ ಉದ್ಘಾಟನೆಗೊಂಡಿದೆ. ಇದೇನೋ ಸರಿ. ಆದರೆ ಸರ್ವನಾಶದತ್ತ ಸಾಗಿದ್ದ ಜಿಲ್ಲೆಯ ಕಾಡನ್ನು ಉಳಿಸಲು ದೊಡ್ಡ ಹೋರಾಟ ನಡೆಸಿದ, ಹಲವು ಯೋಜನೆಗಳು ಬಂದರೂ ಹೆಚ್ಚು ಅರಣ್ಯ ನಾಶವಾಗದಂತೆ ಶತಪ್ರಯತ್ನಪಟ್ಟ ಕಾಸರಕೋಡಿನ ಡಾ| ಕುಸುಮಾ ಸೊರಬ ಇವರ ಹೆಸರನ್ನು ಜಿಲ್ಲೆ ಯಾವ ವನಕ್ಕೂ ಇಟ್ಟಿಲ್ಲ ಯಾಕೆ?

Advertisement

ರಾತ್ರಿ ನರ್ಸ್‌ ಆಗಿ ದುಡಿದು, ಹೋರಾಡಿ ವೈದ್ಯಕೀಯ ಶಿಕ್ಷಣದಲ್ಲಿ ನರ್ಸ್‌ಗಳಿಗಾಗಿ ಸ್ಥಾನಗಿಟ್ಟಿಸಿ ತಾವು ಎಂಬಿಬಿಎಸ್‌, ಎಂಎಸ್‌ ಓದಿ ಹಿಮಾಲಯದಲ್ಲಿ ಯೋಗ, ಆಯುರ್ವೇದ, ನಿಸರ್ಗ ಚಿಕಿತ್ಸೆ ಅಭ್ಯಾಸಮಾಡಿ ಜಿಲ್ಲೆಯ ಸೇವೆಗೆ ತಮ್ಮನ್ನು ಮುಡುಪಾಗಿಡಲು ಬಂದ ಕೆರವಳ್ಳಿ ಮೂಲದ ಡಾ| ಕುಸುಮಾ ಸೊರಬ ವಿವೇಕಾನಂದ ಆರೋಗ್ಯಧಾಮ ಸ್ಥಾಪಿಸಿದ್ದರು. ಅವಿವಾಹಿತ ಈ ಮಹಿಳೆ ಆರೋಗ್ಯ, ಉದ್ಯೋಗ, ಪರಿಸರ ಕಾಳಜಿ ರೂಢಿಸಲು ಸ್ನೇಹಕುಂಜ ಸ್ಥಾಪಿಸಿದರು. ಯೋಜನೆಗಳಿಂದಾಗಿ ಜಿಲ್ಲೆಯ ಅರಣ್ಯ ನಾಶವಾಗುವುದನ್ನು ಕಂಡು ಸಹಿಸಲಾರದೆ ಪರಿಸರ ಚಳವಳಿಯನ್ನು ದೊಡ್ಡಪ್ರಮಾಣದಲ್ಲಿ ಆರಂಭಿಸಿದರು.

ಕೈಗಾ ಅಣುಸ್ಥಾವರ, ಗೇರುಸೊಪ್ಪೆಯ ಶರಾವತಿ ಟೇಲರೀಸ್‌ ಯೋಜನೆ, ಕಾರವಾರ ಸೀಬರ್ಡ್‌ ಯೋಜನೆ ಆರಂಭದ ಹಂತದಲ್ಲಿತ್ತು. ಭೂ ಕಂಪವಲಯವಾದ್ದರಿಂದ ಮಾರಕವಾದ ಅಣು ಇಂಧನ ಬಳಸುವ ಕೈಗಾ ಅಣುಶಕ್ತಿ ಯೋಜನೆ ಬೇಡ ಎಂದು ಗೋಪುರಕ್ಕಾಗಿ ತೆಗೆದ ಹೊಂಡದಲ್ಲಿ ಕೂತು ಪ್ರತಿಭಟನೆ ಮಾಡಿದರು. ಗೇರುಸೊಪ್ಪಾದಲ್ಲಿ ಅಪ್ಪಿಕೋ ಚಳವಳಿ ನಡೆಸಿದರು. ಜಿಲ್ಲೆಯ ಜನಜೀವನಕ್ಕೆ ಅಪಾಯ ಒಡ್ಡುವ ಸೀಬರ್ಡ್‌ ಬೇಡ ಎಂದು ಕೂತರು. ಹಂಚಿನ ಮಣ್ಣು ತೆಗೆದು ಭೂಮಿಯ ಫಲವತ್ತತೆ ಹಾಳಾಗುತ್ತದೆ ಎಂದು ವಿರೋಧಿಸಿದರು.

ಅಲೋಪತಿ ಚಿಕಿತ್ಸೆಯಿಂದ ರೋಗ ಹೆಚ್ಚಾಗುತ್ತದೆ ಎಂದು ಯೋಗ, ನಿಸರ್ಗ ಚಿಕಿತ್ಸೆ, ಆಯುರ್ವೇದ ಆಸ್ಪತ್ರೆ ಆರಂಭಿಸಿದರು. ಉತ್ತರಭಾರತದ ದೇಶಿ ತಳಿಯ ದನಗಳನ್ನು ಸಾಕಿದರು. ಖಾದಿ ಸೀರೆಯೊಳಗೆ ಕೆಂಡದಂತಹ ವ್ಯಕ್ತಿತ್ವವುಳ್ಳ ಡಾ| ಕುಸುಮಾ ಜಿಲ್ಲೆಯ ಪರಿಸರದ ಉಳಿವಿಗಾಗಿ ಟೊಂಕ ಕಟ್ಟಿದ್ದರು.

ಉತ್ತರದ ರಾಜ್ಯದಲ್ಲಿ ಚಿಪ್ಕೋ ಚಳವಳಿ ನಡೆಸಿದ ಸುಂದರಲಾಲ್‌ ಬಹುಗುಣರನ್ನು, ನರ್ಮದಾ ಆಂದೋಲನದ ನೇತಾರೆ ಮೇಧಾ ಪಾಟ್ಕರ್‌, ಶಿವರಾಮ ಕಾರಂತ, ಕೆರೆಮನೆ ಮಹಾಬಲ ಹೆಗಡೆ ಅಂತವರನ್ನು ಒಂದುಗೂಡಿಸಿಕೊಂಡು ದೊಡ್ಡ ಆಂದೋಲನ ನಡೆಸಿದರು. ಪರಿಸರ ಕಾಳಜಿ ಇದ್ದವರು ಲೋಕಸಭೆಗೆ ಹೋಗಬೇಕು ಎಂದು ಶಿವರಾಮ ಕಾರಂತರನ್ನು ಕರೆತಂದು ಲೋಕಸಭಾ ಚುನಾವಣೆಗೆ ಇಳಿಸಿದ್ದರು. ಹೋರಾಟದಿಂದ ಯೋಜನೆ ನಿಲ್ಲದಿದ್ದಾಗ ಕೋರ್ಟ್‌ ಮೆಟ್ಟಿಲೇರಿದರು. ಹೈಕೋರ್ಟಿಗೆ ಹೊರಟಾಗ ತುಮಕೂರ ಬಳಿ ಅಪಘಾತಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದರು. 13-10-1938ರಂದು ಜನಿಸಿದ್ದ ಕುಸುಮಕ್ಕ 14-3-1998ರಂದು 60ನೇ ವಯಸ್ಸಿನಲ್ಲಿ ಹೋರಾಟಕ್ಕೆ ಹೊರಟಾಗಲೇ ಜೀವ ಕಳೆದುಕೊಂಡರು. ಅವರು ಬದುಕಿದ್ದಿದ್ದರೆ 80ವರ್ಷವಾಗುತ್ತಿತ್ತು.

Advertisement

ಕುಸುಮಕ್ಕ ಹೋದ ಮೇಲೆ ಎಲ್ಲ ಯೋಜನೆಗಳು ಬಂದವು, ನಾಶವಾಗುವ ಅರಣ್ಯದ ಪ್ರಮಾಣ ಕಡಿಮೆಯಾಯಿತು, ಜಿಲ್ಲೆಯಲ್ಲಿ ಪರಿಸರ ಕಾಳಜಿ ಮೂಡಿತು. ಜನ ಶತಮಾನದ ಕುಸುಮ ಎಂದು ಕರೆದರು. ಹೆಸರಾಂತ ಚಿಂತಕ ಕೆ.ವಿ. ಸುಬ್ಬಣ್ಣ ‘ಮೂಕ ಸಹ್ಯಾದ್ರಿಗೆ ಮಾತುಕೊಟ್ಟವಳು’ ಎಂದು ಬರೆದರು.

ಕುಸುಮಕ್ಕ ಆಡಳಿತಕ್ಕೆ ಬಂದ ಸರ್ಕಾರಗಳ, ನೌಕರಶಾಹಿಯ ವಿರೋಧ ಕಟ್ಟಿಕೊಂಡು ಕಷ್ಟನಷ್ಟ ಅನುಭವಿಸಿದರು. ಆಗ ಅಧಿಕಾರದಲ್ಲಿದ್ದವರೇ ಈಗಲೂ ಅಧಿಕಾರದಲ್ಲಿದ್ದರೂ ಕುಸುಮಕ್ಕನ ನೆನಪು ಬೇಕಾಗಿಲ್ಲ, ಈಗಿನ ಪರಿಸರ ಪಂಡಿತರಿಗೂ ಬೇಕಾಗಿಲ್ಲ. ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನು ಕಳೆದುಕೊಂಡ ಜಿಲ್ಲೆಯ ಸ್ವಾತಂತ್ರ್ಯ  ಯೋಧರ ನೆನಪು, ಕುಸುಮಕ್ಕ ಮತ್ತು ಜಿಲ್ಲೆಗಾಗಿ ವಿವಿಧ ಕ್ಷೇತ್ರಗಳಲ್ಲಿ ಸಮರ್ಪಣಾಭಾವದಿಂದ ದುಡಿದ ಯಾರ ನೆನಪೂ ಈಗಿನವರಿಗೆ ಬೇಕಾಗಿಲ್ಲ. ಕುಸುಮಕ್ಕ ಕಟ್ಟಿದ ಸಂಸ್ಥೆ, ನೆಟ್ಟ ಗಿಡಗಳು, ಕಟ್ಟಿದ ಕನಸುಗಳು ಸೊರಗಿವೆ. ಕಾಲ ಎಷ್ಟೊಂದು ಕ್ರೂರ ಅಲ್ಲವೇ !?

ಭೂ ಕಂಪವಲಯವಾದ್ದರಿಂದ ಮಾರಕವಾದ ಅಣು ಇಂಧನ ಬಳಸುವ ಕೈಗಾ ಅಣುಶಕ್ತಿ ಯೋಜನೆ ಬೇಡ ಎಂದು ಗೋಪುರಕ್ಕಾಗಿ ತೆಗೆದ ಹೊಂಡದಲ್ಲಿ ಕೂತು ಪ್ರತಿಭಟನೆ, ಗೇರುಸೊಪ್ಪಾದಲ್ಲಿ ಅಪ್ಪಿಕೋ ಚಳವಳಿ, ಹಂಚಿನ ಮಣ್ಣು ತೆಗೆದು ಭೂಮಿಯ ಫಲವತ್ತತೆ ಹಾಳಾಗುತ್ತದೆ ಎಂದು ವಿರೋಧಿಸಿದವರು.

ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next