Advertisement

ಧರ್ಮದ ಬಗ್ಗೆ ಹೆಚ್ಚು ಮಾತಾಡಲ್ಲ: ಸಿದ್ದರಾಮಯ್ಯ 

06:00 AM Dec 09, 2018 | Team Udayavani |

ಮೈಸೂರು: ಧರ್ಮದ ಬಗ್ಗೆ ಹೆಚ್ಚು ಮಾತಾಡಲ್ಲ. ವಿವಾದ ಆದರೆ ಕಷ್ಟ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಧರ್ಮ ಮಾಡಿ ಎಂದು ಅವರೇ ಗಂಟು ಬಿದ್ದರು. ಒಂದೆಡೆ ವಿರಕ್ತರು, ಇನ್ನೊಂದೆಡೆ ಗುರು ಪರಂಪರೆಯವರ ಮಧ್ಯೆ ಸಿಕ್ಕು ನನ್ನ ವಿರುದ್ಧ ಅಪಪ್ರಚಾರ ಮಾಡಿಬಿಟ್ಟರು. ಕಾವಿ ಹಾಕಿ ಕೊಂಡವರೆಲ್ಲರೂ ಸನ್ಯಾಸಿಗಳಲ್ಲ. ಎಲ್ಲವನ್ನೂ ತ್ಯಜಿಸಿದವರೇ ಸನ್ಯಾಸಿಗಳು ಎಂದರು.

ನಾನು ಹೈ ಪವರ್‌ ಕಮಿಟಿ ರಚನೆ ಮಾಡಿ ವರದಿ ನೀಡಲು ತಿಳಿಸಿದ್ದೆ. ಸಭೆ ಕರೆದು ಎಲ್ಲರೊಂದಿಗೂ ಚರ್ಚೆ ಮಾಡಿದೆವು. ಸಭೆಯಲ್ಲಿ ಎಂ.ಬಿ.ಪಾಟೀಲ್‌, ಶಾಮನೂರು ಶಿವಶಂಕರಪ್ಪ ಅವರ ಪುತ್ರ ಮಲ್ಲಿಕಾರ್ಜುನ, ಈಶ್ವರ ಖಂಡ್ರೆ ಮತ್ತಿತರರು ಭಾಗವಹಿಸಿದ್ದರು. ಇವರು ಒಮ್ಮತಕ್ಕೆ ಬಾರದೇ ನನ್ನ ವಿರುದ್ಧ ಅಪಪ್ರಚಾರ ಮಾಡಲಾಯಿತು. ಅಂದಿನಿಂದ ನಾನು ಹುಷಾರಾಗಿ ಮಾತನಾಡುತ್ತಾ ಇದ್ದೇನೆ ಎನ್ನುತ್ತಾ ನಗು ಬೀರಿದರು.

ಲೋಕಸಭಾ ಚುನಾವಣೆ ದಿಕ್ಸೂಚಿ:
ಪಂಚರಾಜ್ಯಗಳ ಚುನಾವಣಾ ಫ‌ಲಿತಾಂಶ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಡ ರಾಜ್ಯಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂದರು. ಮಿಜೋರಾಂ ಮತ್ತು ತೆಲಂಗಾಣ ರಾಜ್ಯಗಳಲ್ಲಿ ನೇರ ಪೈಪೋಟಿ ನಡೆದಿದೆ. ಕರ್ನಾಟಕದಲ್ಲಿ ನಡೆದ ಉಪ ಚುನಾವಣೆಗಳ ಫ‌ಲಿತಾಂಶವು ಈ ಐದು ರಾಜ್ಯಗಳ ಚುನಾವಣೆಗಳ ಮೇಲೆ ಸ್ವಲ್ಪ ಪ್ರಮಾಣದಲ್ಲಿ ಪರಿಣಾಮ ಬೀರಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ನೂರಕ್ಕೆ ನೂರು ನರೇಂದ್ರ ಮೋದಿ ಅವರ ಸರ್ಕಾರ ಹೋಗುತ್ತದೆ ಎಂದು ಭವಿಷ್ಯ ನುಡಿದರು.

ಯಡಿಯೂರಪ್ಪಗೆ ವಯಸ್ಸಾಯ್ತು. ಲೋಕಸಭಾ ಚುನಾವಣೆ ಒಳಗೆ ಹೇಗಾದರೂ ಮುಖ್ಯಮಂತ್ರಿ ಆಗಿ ಬಿಡಬೇಕು ಎಂದು ಶಾಸಕರನ್ನು ಖರೀದಿ ಮಾಡಲು ಓಡಾಡುತ್ತಿದ್ದಾರೆ. ಯಾವ ಶಾಸಕರೂ ಹೋಗಲ್ಲ. ಸರ್ಕಾರ ಬೀಳಿಸುವಲ್ಲಿ ಅವರು ಯಶಸ್ವಿಯೂ ಆಗುವುದಿಲ್ಲ.
– ಸಿದ್ದರಾಮಯ್ಯ, ಮಾಜಿ ಸಿಎಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next