Advertisement

ಮಜ್‌ಬೂರ್‌ ಅಲ್ಲ ; ಮಜ್‌ಬೂತ್‌ ಸರಕಾರ: ರಾಜನಾಥ್‌

12:30 AM Mar 10, 2019 | Team Udayavani |

ಮಂಗಳೂರು: ದೇಶಕ್ಕೆ ಬೇಕಾಗಿರುವುದು ಮಜ್‌ಬೂರ್‌ (ಅಸಹಾಯಕ) ಸರಕಾರವಲ್ಲ; ಮಜ್‌ಬೂತ್‌ (ಸದೃಢ) ಸರಕಾರ. ಕಳೆದ 5 ವರ್ಷಗಳಲ್ಲಿ ಬಿಜೆಪಿ ದೇಶಕ್ಕೆ ಮಜ್‌ಬೂತ್‌ ಸರಕಾರ ನೀಡಿದೆ. ಮುಂದೆಯೂ ನೀಡುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

Advertisement

ಬಿಜೆಪಿ ವತಿಯಿಂದ ನಗರದ ಡಾ| ಟಿ.ಎಂ.ಎ. ಪೈ ಇಂಟರ್‌ನ್ಯಾಶನಲ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಶನಿವಾರ ಆಯೋಜಿಸಿದ್ದ ಪ್ರಬುದ್ಧರ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ದೇಶದಲ್ಲಿ ಚುನಾವಣೆ ಸಮೀಪಿಸುತ್ತಿದೆ. ವಿಪಕ್ಷಗಳು ಬರೇ ಘಟ್‌ಬಂಧನ್‌ ಅಲ್ಲ; ಮಹಾಘಟ್‌ಬಂಧನ್‌ ಮಾಡಿಕೊಳ್ಳುತ್ತಿವೆ. ಪ್ರಧಾನಿ ಅಭ್ಯರ್ಥಿಯಾರೆಂಬುದನ್ನು ಚುನಾವಣೆ ಬಳಿಕ ಘೋಷಿಸುವುದಾಗಿ ಹೇಳುತ್ತಿದ್ದಾರೆ. ತಾವು ಮುಂದಿನ ಬಾರಿ ಅಧಿಕಾರಕ್ಕೆ ಬರುವುದಿಲ್ಲ, ಸರಕಾರ ರಚಿಸುವುದಿಲ್ಲ ಎಂಬುದು ಅವರಿಗೆ ತಿಳಿದಿದೆ. ಅದುದರಿಂದ ಪ್ರಧಾನಿ ಅಭ್ಯರ್ಥಿ ಹೆಸರು ಹೇಳುವ ಗೋಜಿಗೆ ಹೋಗುತ್ತಿಲ್ಲ ಎಂದರು.

2014ರ ಚುನಾವಣೆಯಲ್ಲಿ ಸ್ವಷ್ಟ ಬಹುಮತ ಪಡೆದ ಬಿಜೆಪಿ ಸ್ಥಿರ ಸರಕಾರ ನೀಡಿದೆ. ನಿರ್ಧಾರಾತ್ಮಕ ನಾಯಕತ್ವ, ಧನಾತ್ಮಕ ನೀತಿ ಮತ್ತು ದೃಢಸಂಕಲ್ಪ ಬೇಕಾಗಿದೆ. ಇದನ್ನು ಬಿಜೆಪಿ ನೀಡಿದೆ. ಮುಂದೆಯೂ ನೀಡಲಿದೆ ಎಂದವರು ಹೇಳಿದರು.

ವಿಶ್ವಗುರು ಸಂಕಲ್ಪ
ಭಾರತವನ್ನು ಕೇವಲ ಸೂಪರ್‌ ಪವರ್‌ ಆಗಿ ಮಾಡುವುದು ಮಾತ್ರವಲ್ಲ, ಬಲಶಾಲಿ, ಸಮೃದ್ಧಶಾಲಿ ಮತ್ತು ಜ್ಞಾನಶಾಲಿಯಾಗಿ ವಿಶ್ವಗುರು ಸ್ಥಾನದಲ್ಲಿ ಭಾರತ ನಿಲ್ಲಬೇಕು ಎಂಬುದು ಬಿಜೆಪಿ ಸಂಕಲ್ಪ. ಸೂಪರ್‌ ಪವರ್‌ ಆದಾಗ ಅಲ್ಲಿ ಇತರ ರಾಷ್ಟ್ರಗಳು ಭಯದಿಂದ ಕಾಣುವ ವಾತಾವರಣ ಇರುತ್ತದೆ. ವಿಶ್ವಗುರು ಆದಾಗ ಅಲ್ಲಿ ಪ್ರೀತಿ ಮತ್ತು ವಿಶ್ವಾಸ ನೆಲೆಗೊಳ್ಳುತ್ತದೆ. ವಿದೇಶಿ ರಾಷ್ಟ್ರಗಳು ನಮ್ಮ ಬಳಿ ಬರಲು ಭಯ ಪಡುವ ಬದಲು ಬಳಿಗೆ ಬಂದಾಗ ಆನಂದ ಅನುಭೂತಿಯನ್ನು ಪಡೆಯುವಂತಹ ದೇಶ ನಿರ್ಮಿಸುವುದು ನಮ್ಮ ಗುರಿ. ವಿಶ್ವಗುರು ಆಗುವ ನಿಟ್ಟಿನಲ್ಲಿ ಭಾರತ ಈಗಾಗಲೇ ದಾಪುಗಾಲು ಇಟ್ಟಿದೆ ಎಂದವರು ಹೇಳಿದರು.

Advertisement

ಆಂತರಿಕ ಭದ್ರತೆಗೆ ಸಂಬಂಧಿಸಿಯೂ ಭಾರತದ ಗುರಿ ಸ್ಪಷ್ಟವಾಗಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ 120 ಜಿಲ್ಲೆಗಳನ್ನು ಕಾಡುತ್ತಿದ್ದ ನಕ್ಸಲ್‌ಸಮಸ್ಯೆ ಇಂದು ಕೇವಲ ಏಳೆಂಟು ಜಿಲ್ಲೆಗಳಿಗೆ ಮಾತ್ರ ಸೀಮಿತಗೊಂಡಿದೆ. ಅದು ಕೂಡ ನಿವಾರಣೆಯಾಗಲಿದೆ ಎಂದು ರಾಜನಾಥ್‌ ಹೇಳಿದರು. 

ಕಾಶ್ಮೀರಿ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಿ ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಬಂದಿರುವ ಕಾಶ್ಮೀರಿ ವಿದ್ಯಾರ್ಥಿಗಳನ್ನು ನಿಮ್ಮ ಮಕ್ಕಳಂತೆ ಕಾಣಿ. ಅವರ ಬಗ್ಗೆ ಕಾಳಜಿ ವಹಿಸಿ ರಕ್ಷಣೆ ಮಾಡಬೇಕೆಂದು ಮನವಿ ಮಾಡಿದ ಕೇಂದ್ರ ಸಚಿವರು, ಈ ಬಗ್ಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಸಂದೇಶ ಕಳುಹಿಸಿರುವುದಾಗಿ ಹೇಳಿದರು.

ಭರವಸೆಗಳು ಈಡೇರಿವೆ
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂ ರಪ್ಪ ಮಾತನಾಡಿ, ಮೋದಿ ಅವರು ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಿದ್ದಾರೆ. ಅವರು ಕೈಗೊಂಡ ದಿಟ್ಟ ನಿಲುವಿನಿಂದಾಗಿ ಬೆನ್ನು ಬಾಗಿಸುವ ರಾಷ್ಟ್ರವಾಗಿರದೆ, ಸೆಟೆದು ನಿಲ್ಲುವ ಭಾರತವಾಗಿ ರೂಪುಗೊಂಡಿದೆ ಎಂದರು. ದೇಶದ ಅಭಿವೃದ್ಧಿ ಗತಿ ಮುಂದುವರಿಯಲು ಮೋದಿಯವರನ್ನು ಮತ್ತೂಮ್ಮೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಚೇತಕ ಸುನಿಲ್‌ ಕುಮಾರ್‌, ಸಂಸದರಾದ ನಳಿನ್‌ ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಸಂಜೀವ ಮಠಂದೂರು, ಬಿಜೆಪಿ ಕ್ಲಸ್ಟರ್‌ ಸಂಚಾಲಕ ಮೋನಪ್ಪ ಭಂಡಾರಿ ಉಪಸ್ಥಿತರಿದ್ದರು. ಶಾಸಕ ವೇದವ್ಯಾಸ ಕಾಮತ್‌ ಸ್ವಾಗತಿಸಿದರು. ಕ್ಯಾ| ಗಣೇಶ್‌ ಕಾರ್ಣಿಕ್‌ ನಿರೂಪಿಸಿದರು. ಕ್ಯಾ| ಬೃಜೇಶ್‌ ಚೌಟ ವಂದಿಸಿದರು.

“ಟೂಟೇ ಮನ್‌ ಸೆ ಕೋಯಿ ಖಡಾ ನಹೀಂ ಹೋತಾ’
ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ತನ್ನ ಕವನವೊಂದರಲ್ಲಿ “ಚೋಟೇ ಮನ್‌ ಸೆ ಕೋಯಿ, ಬಡಾ ನಹೀಂ ಹೋತಾ; ಟೂಟೇ ಮನ್‌ ಸೆ ಕೋಯಿ ಖಡಾ ನಹೀಂ ಹೋತಾ’ ಎಂದು ಹೇಳಿದ್ದಾರೆ. ಮೋದಿ ನೇತೃತ್ವದಲ್ಲಿ ಬಿಜೆಪಿ ಸರಕಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಹಲವಾರು ಜನಪರ ಯೋಜನೆಗಳ ಮೂಲಕ ಜನಸಾಮಾನ್ಯರಲ್ಲಿ ಆತ್ಮವಿಶ್ವಾಸವನ್ನು ತುಂಬಿ ಸ್ವಾವಲಂಬಿ, ಸ್ವಾಭಿಮಾನಿ ಬದುಕು ಕಟ್ಟಿಕೊಡುವ ಕಾರ್ಯ ಮಾಡಿದೆ ಎಂದು ರಾಜನಾಥ್‌ ಸಿಂಗ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next