Advertisement

ಕುಮಾರಸ್ವಾಮಿ ಅಲ್ಲ, ಟೇಪ್‌ ಸ್ವಾಮಿ: ಸಿದ್ದರಾಮಯ್ಯ ವ್ಯಂಗ್ಯ

07:31 AM Feb 15, 2019 | Team Udayavani |

ಮಂಡ್ಯ: ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿ ಕಡೆ ಗಮನಹರಿಸಬೇಕಾಗಿದ್ದ ಕುಮಾರಸ್ವಾಮಿ ಅಭಿವೃದ್ಧಿಯನ್ನು ಬಿಟ್ಟು ಟೇಪ್‌ ಹಿಡಿಯುವ ಮೂಲಕ ಟೇಪ್‌ಸ್ವಾಮಿ ಆಗಿದ್ದಾರೆ ಎಂದು ಬಿಜೆಪಿ ಮುಖಂಡ ಡಾ.ಜಿ.ಸಿದ್ದರಾಮಯ್ಯ ವ್ಯಂಗ್ಯವಾಡಿದರು.

Advertisement

ರಾಮನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಯ ಜನರನ್ನು ಜೆಡಿಎಸ್‌ನ ಗುಲಾಮರೆಂದು ಭಾವಿಸಿದಂತಿದೆ. ಯಾರೂ ಅವರ ವಿರುದ್ಧ ಮಾತನಾಡದಂತಹ ವಾತಾವರಣ ಸೃಷ್ಟಿಸಿದ್ದಾರೆ. ಇದು ಸಿಎಂ ಸರ್ವಾಧಿಕಾರಿ ಧೋರಣೆ. ಮುಸಲೋನಿ ರೀತಿ ಆಡಳಿತ ನಡೆಸುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಗೂಂಡಾ ಸಂಸ್ಕೃತಿ: ಹಾಸನದ ಬಿಜೆಪಿ ಜನಪ್ರತಿನಿಧಿ ಪ್ರೀತಂಗೌಡ ಮನೆ ಮೇಲೆ ಕಾರ್ಯಕರ್ತರನ್ನು ಛೂ ಬಿಟ್ಟು ಹಲ್ಲೆ ನಡೆಸುವ ಮೂಲಕ ಗೂಂಡಾ ಸಂಸ್ಕೃತಿ ಮೆರೆದಿದ್ದಾರೆ. ಜನಪ್ರತಿನಿಧಿಗಳ ಸ್ಥಿತಿಯೇ ಹೀಗಾದರೆ ಸಾಮಾನ್ಯ ಕಾರ್ಯಕರ್ತರ ಪಾಡೇನು ಎಂದು ಪ್ರಶ್ನಿಸಿದರಲ್ಲದೆ, ಇದು ಪ್ರಜಾಪ್ರಭುತ್ವದ ಕಗ್ಗೊàಲೆ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯ ಉಲ್ಲಂಘನೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಬರಗಾಲವಿದೆ. ಹಾಲಿನ ದರ ಕಡಿತಗೊಳಿಸಿದ್ದು, ರೈತರಿಗೆ ಕಬ್ಬಿನ ಹಣ ಬಾಕಿ ಪಾವತಿಸಿಲ್ಲ. ಸಾಲ ಮನ್ನಾ ಸೇರಿದಂತೆ ಚುನಾವಣಾ ಪೂರ್ವ ನೀಡಿದ್ದ ಭರವಸೆಗಳು ಈಡೇರಿಲ್ಲ. ಆ ವಿಚಾರಗಳ ಬಗ್ಗೆ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಯ ಅನುಷ್ಠಾನದ ಬಗ್ಗೆ ಗಮನಹರಿಸದೆ ಬಿಜೆಪಿ ನಾಯಕರ ತೇಜೋವಧೆ ಮಾಡುವುದನ್ನೇ ಗುರಿಯಾಗಿಸಿಕೊಂಡಿದ್ದಾರೆ.

ಕಾರ್ಯಕರ್ತರನ್ನು ಬಿಜೆಪಿಯವರ ವಿರುದ್ಧ ಎತ್ತಿಕಟ್ಟಿ ಪ್ರಚೋದನೆ ನೀಡುತ್ತಿದ್ದಾರೆ. ಹಿಂದೊಮ್ಮೆ ರಾಜ್ಯದ ಜನರಿಗೆ ದಂಗೆ ಏಳಲು ಕರೆಕೊಟ್ಟಿದ್ದ ಕುಮಾರಸ್ವಾಮಿ ಅವರು, ಈಗ ಬಿಜೆಪಿಯವರನ್ನು ಹತ್ತಿಕ್ಕಲು ಕಾರ್ಯಕರ್ತರನ್ನು ಛೂಬಿಟ್ಟಿದ್ದಾರೆ ಎಂದು ದೂರಿದರು.

Advertisement

ಉಸಿರುಗಟ್ಟುವ ವಾತಾವರಣ: ಜೆಡಿಎಸ್‌ ಒಂದು ಪಕ್ಷವಲ್ಲ. ಅದೊಂದು ಫ್ಯಾಮಿಲಿ ಟ್ರಸ್ಟ್‌. ಎಲ್ಲ ಪ್ರಧಾನ ಹುದ್ದೆಗಳೂ ಕುಟುಂಬದವರಿಗೇ ಮೀಸಲಾಗಿವೆ. ಮುಖ್ಯಮಂತ್ರಿಯಿಂದ ಹಿಡಿದು ಜಿಲ್ಲಾ ಪಂಚಾಯಿತಿ ಸದಸ್ಯರವರೆಗೆ ಅವರ ಕುಟುಂಬದವರಿದ್ದಾರೆ. ತಾಲೂಕು, ಗ್ರಾಮ ಪಂಚಾಯಿತಿ ಸ್ಥಾನಗಳನ್ನು ಮಾತ್ರ ಬಿಟ್ಟಿದ್ದಾರೆ. ಎಲ್ಲೆಡೆ ಅನುಕೂಲ ಸಿಂಧು ವಾತಾವರಣ ಸೃಷ್ಟಿಸಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ಮಂಡ್ಯದಲ್ಲೂ ಉಸಿರುಗಟ್ಟುವ ವಾತಾವರಣವಿದೆ. ಕಾಂಗ್ರೆಸ್‌ನವರಂತೂ ಮಾತನಾಡುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಜಿಲ್ಲೆಯೊಳಗೆ ಉಸಿರುಗಟ್ಟುವ ವಾತಾವರಣವಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಮೇಲುಕೋಟೆ ಕ್ಷೇತ್ರಕ್ಕಷ್ಟೇ ಸೀಮಿತರಾಗಿದ್ದಾರೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಯಾರಿಗೂ ಗಮನವಿಲ್ಲ,

ಅಭಿವೃದ್ಧಿಯ ಚಿಂತೆಯೂ ಇಲ್ಲ. ಜನರನ್ನು ಮೂರ್ಖರನ್ನಾಗಿ ಮಾಡುವ ಕೆಲಸದಲ್ಲಿ ಎಲ್ಲರೂ ನಿರತರಾಗಿದ್ದಾರೆ ಎಂದು ದೂರಿದರು. ಗೋಷ್ಠಿಯಲ್ಲಿ ಕೆ.ನಾಗಣ್ಣಗೌಡ, ಮಲ್ಲಿಕಾರ್ಜುನ್‌, ಬಿ.ಕೃಷ್ಣ, ಸುರೇಶ್‌, ಬಸವರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next