Advertisement

ಗೊತ್ತಿಲ್ಲದ ಹೊತ್ತು ನಳ್ಳಿ ನೀರು; ಸದ್ಯ ಬಾವಿ ನೀರೇ ಆಧಾರ

01:32 AM Apr 28, 2019 | Team Udayavani |

ಉಡುಪಿ:ಮೂರು ದಿನಕ್ಕೊಮ್ಮೆ ನೀರು ನೀಡುವ ಯೋಜನೆ ಮಾರ್ಚ್‌ ಮೊದಲ ವಾರದಲ್ಲೇ ಕೈಗೊಂಡಿದ್ದರೆ ಈ ರೀತಿ ಸಮಸ್ಯೆ ಉದ್ಭವಿಸುತ್ತಿರಲಿಲ್ಲ ಎಂದು ಅಸಹನೆ ತೋಡಿಕೊಂಡವರು ಕಿನ್ನಿಮೂಲ್ಕಿ ವಾರ್ಡ್‌ ನಿವಾಸಿಗಳು.

Advertisement

2,996 ಜನಸಂಖ್ಯೆ ಇರುವ ಕಿನ್ನಿಮೂಲ್ಕಿ ವಾರ್ಡ್‌ ಪ್ರದೇಶದ ಮಧ್ಯಭಾಗದಲ್ಲಿ ಕೆಲವು ಮನೆಗಳು ಬಾವಿ ನೀರನ್ನು ಆಶ್ರಯಿಸಿವೆ. ಬಾವಿಗಳೂ ಕೂಡ ಬತ್ತಿಹೋಗಿದ್ದರಿಂದ ಈ ತಿಂಗಳು ಹೇಗೆ ಮುಂದೆ ಹೋಗುತ್ತೋ ಎಂಬ ಯೋಚನೆಯಲ್ಲಿದ್ದಾರೆ. ಶೆಟ್ಟಿಗಾರ್‌ ಕಾಲನಿ, ಕನ್ನರ್ಪಾಡಿ, ಎನ್‌ಜಿಒ ಲೈನ್ಸ್‌, ಪಿಡಬ್ಲೂÂಡಿ ಕ್ವಾರ್ಟರ್, ಅಗ್ನಿಶಾಮಕ ದಳ ಕಚೇರಿ, ಮಿಷನ್‌ ಕಾಂಪೌಂಡ್‌ ಬಳಿ ನೀರಿನ ಸಮಸ್ಯೆ ಹೆಚ್ಚಿದೆ.

ಬಾವಿ ಇದೆ; ನೀರಿಲ್ಲ
ವಿವೇಕಾನಂದ ಮುಖ್ಯರಸ್ತೆ, ನಾಯರ್‌ಕೆರೆ, ಎನ್‌ಜಿಒ, ಸರ್ವೋದಯ ಕಾಲನಿಯ ಕೆಲವೆಡೆ ಬಾವಿ ನೀರು ಇದ್ದರೂ ಕೂಡ ಬಿಸಿಲಿನ ತಾಪಮಾನದಿಂದ ಬತ್ತಿ ಹೋಗಿದೆ. ಇಲ್ಲಿ ತನಕ ಪರವಾಗಿಲ್ಲ; ಜೂನ್‌ ತಿಂಗಳಲ್ಲಿ ಮಳೆ ಸುರಿದರೆ ಓಕೆ. ಇಲ್ಲದಿದ್ದರೆ ಏನು ಮಾಡುವುದು ಎಂದು ತೋಚುತ್ತಿಲ್ಲ ಎಂದು ಹೇಳುತ್ತಾರೆ ವಿಮಲಾ.

ಟ್ಯಾಂಕರ್‌ ನೀರಾದರೂ ಒದಗಿಸಲಿ
ಹಿಂದೆ ದಿನಂಪ್ರತಿ ನೀರು ಲಭ್ಯವಾಗುತ್ತಿತ್ತು. ಆದರೆ ಏಕಾಏಕಿ ಮೂರು ದಿನಕ್ಕೊಮ್ಮೆ ನೀರು ಎಂದು ನಿಗದಿಪಡಿಸಿದರೆ ನಾವು ಹೊಂದಿ ಕೊಳ್ಳುವುದಾದರೂ ಹೇಗೆ? ಸಮಸ್ಯೆ ಉದ್ಭವಿ ಸುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಿತ್ತು. ಕನಿಷ್ಠ ಪಕ್ಷ ನೀರಿನ ಸಮಸ್ಯೆ ಇರುವ ವಾರ್ಡ್‌ಗಳಿಗೆ ಟ್ಯಾಂಕರ್‌ ಮೂಲಕವಾದರೂ ನೀರು ಪೂರೈಕೆ ಮಾಡಿ ಅವರ ಸಮಸ್ಯೆಗೆ ಸ್ಪಂದಿಸಬಹುದಿತ್ತಲ್ಲ ಎಂಬುದು ಬ್ರಹ್ಮಬೈದರ್ಕಳ ನಿವಾಸಿ ಶೇಖರ್‌ ಅವರ ಅಭಿಪ್ರಾಯ.

ನಾಲ್ಕು ಸಾವಿರ ರೂ. ತೆತ್ತು ಟ್ಯಾಂಕ್‌ ಖರೀದಿ
3 ದಿನಕ್ಕೊಮ್ಮೆ ಸಾಕಾಗುವಷ್ಟು ನೀರು ಸಂಗ್ರಹಿಸಿಡುವುದು ಕೂಡ ನಮಗೆ ಕಷ್ಟವೇ. ಬಕೇಟು, ಸಣ್ಣಪುಟ್ಟ ಬಿಂದಿಗೆ ಬಿಟ್ಟರೆ ಬೇರೆ ವ್ಯವಸ್ಥೆ ನಮ್ಮಲ್ಲಿಲ್ಲ. ನೀರು ಶೇಖರಿಸಿಡಲಿಕ್ಕೆಂದೇ ನಾಲ್ಕು ಸಾವಿರ ರೂ. ತೆತ್ತು ನೀರಿನ ಟ್ಯಾಂಕ್‌ ಖರೀದಿಸಿದ್ದೇನೆ ಎಂದವರು ಸರ್ವೋದಯ ರಸ್ತೆ ಕಾಲನಿಯ ವಸಂತಿ. ನೀರು ಬಾರದೆ ಇದ್ದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಪಕ್ಕದವರ ಬಾವಿ ನೀರು ಎಂಬ ಉತ್ತರ ಅವರಿಂದ ಬಂತು.

Advertisement

ನೀರಿನ ಸಂಪರ್ಕವೂ ಇಲ್ಲ
ಕಿನ್ನಿಮೂಲ್ಕಿ 2ನೇ ಕ್ರಾಸ್‌ ನಿವಾಸಿ ಸದಾನಂದ ಅವರು ತಮ್ಮ ಮನೆಯಲ್ಲಿನ ತೆರೆದ ಬಾವಿಯನ್ನು ತೋರಿಸುತ್ತಾ ವರ್ಷಪೂರ್ತಿ ನಮಗೆ ಇದರ ನೀರೇ ಆಧಾರ. ಆದರೆ ಈಗ ಇದರಲ್ಲಿ ದಿನಕ್ಕೆ 4ರಿಂದ 5 ಬಿಂದಿಗೆ ನೀರನ್ನಷ್ಟೇ ತೆಗೆಯಬಹುದು. ನಗರಸಭೆಯ ನೀರಿನ ಸಂಪರ್ಕವೂ ನಮಗಿಲ್ಲ. ನೆರೆಹೊರೆಯವರ ಬಾವಿ ನೀರನ್ನೇ ಆಶ್ರಯಿಸಬೇಕಿದೆ. ಅದೂ ಕೂಡ ಎಷ್ಟು ದಿನವೋ ಗೊತ್ತಿಲ್ಲ. ಮುಂದಿನ ವಾರ ಗೃಹಪ್ರವೇಶ ಕಾರ್ಯಕ್ರಮವಿದೆ. ನೀರಿಗೇನು ಮಾಡುವುದು ಎಂಬ ಚಿಂತೆಯಿದೆ. ಮನೆಯಂಗಳದಲ್ಲೇ ನೀರು ದಾಸ್ತಾನು ಮಾಡಬೇಕಾಗುತ್ತದೆ ಎನ್ನುತ್ತಾರೆ ಅವರು.

ಬೆಳ್ಳಂಬೆಳಗ್ಗೆ ನೀರು
ನೀರು ಯಾವಾಗ ಬಿಡುತ್ತಾರೆ ಎಂಬುದೇ ನಮಗೆ ಗೊತ್ತಾಗುತ್ತಿಲ್ಲ. ಮೊನ್ನೆ ಬೆಳ್ಳಂಬೆಳಗ್ಗೆ 1.30ರಿಂದ 2 ಗಂಟೆಯ ಹೊತ್ತಿಗೆ ನೀರು ಬಿಟ್ಟಿದ್ದರು. ಅದು ನಮಗೆ ಗೊತ್ತಾದರೆ ಪರವಾಗಿಲ್ಲ. ಇಲ್ಲದಿದ್ದರೆ ಮತ್ತೆ ಮೂರು ದಿನ ಕಾಯಬೇಕಾಗುತ್ತದೆ. 1 ದಿನ ನೀರು ತಪ್ಪಿದರೆ 1 ವಾರ ಕಷ್ಟ ಅನುಭವಿಸಬೇಕಾಗುತ್ತದೆ.
-ಸುಶೀಲಾ, ಸ್ಥಳೀಯರು

ವಾರ್ಡಿನವರ ಬೇಡಿಕೆ
– ದಿನಕ್ಕೊಮ್ಮೆಯಾದರೂ ನೀರು ಒದಗಿಸಿ
– ಟ್ಯಾಂಕರ್‌ ನೀರಾದರೂ ಪೂರೈಸಿ
– ಬಾವಿಗಳ ದುರಸ್ತಿಗೆ ಸಾಲ-ಸೌಲಭ್ಯ ನೀಡಿ
– ನಗರಸಭೆಯಿಂದಲೇ ಬಾವಿಗಳ ದುರಸ್ತಿ ಕಾರ್ಯವಾಗಲಿ
– ಪ್ರತೀ ವರ್ಷದ ಸಮಸ್ಯೆ; ಮೊದಲೇ ಎಚ್ಚೆತ್ತರೆ ಒಳ್ಳೆಯದು.

ಸಮರ್ಪಕ ನೀರು ಒದಗಿಸಲು ಆಗ್ರಹ
ವಾರ್ಡ್‌ಗೆ ನೀರು ಸಮಪರ್ಕಕವಾಗಿ ಪೂರೈಸುವಂತೆ ನಗರಸಭೆಗೆ ಆಗ್ರಹಿಸಿದ್ದೇನೆ. ನೀರು ಬಂದರೂ ಕೂಡ ತಗ್ಗು ಪ್ರದೇಶಗಳಿಗೆ ಪೂರೈಕೆಯಾಗುತ್ತದೆ. ಎತ್ತರ ಪ್ರದೇಶಗಳಲ್ಲಿರುವ ನಿವಾಸಿಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರು ಲಭ್ಯವಾಗುತ್ತಿಲ್ಲ. ಟ್ಯಾಂಕರ್‌ ನೀರು ಪೂರೈಸಲು ಜಿಲ್ಲಾಡಳಿತ ಕ್ರಮ ತೆಗೆದುಕೊಂಡರೆ ಒಳ್ಳೆಯದು.
-ಅಮೃತಾ ಕೃಷ್ಣಮೂರ್ತಿ, ವಾರ್ಡ್‌ ಸದಸ್ಯರು, ಕಿನ್ನಿಮೂಲ್ಕಿ

  • ಪುನೀತ್‌ ಸಾಲ್ಯಾನ್‌
Advertisement

Udayavani is now on Telegram. Click here to join our channel and stay updated with the latest news.

Next