Advertisement

ಸ್ಮಾರ್ಟ್‌ ಸಿಟಿಯಷ್ಟೇ ಅಲ್ಲ; ಮಿಷನ್‌ 2022ಕ್ಕೆ ಮಂಗಳೂರು ಆಯ್ಕೆ ?

01:29 AM Jan 05, 2021 | Team Udayavani |

ಬೆಂಗಳೂರು: ಮಂಗಳೂರಿಗೆ ಡಬಲ್‌ ಧಮಾಕ. ಕೇಂದ್ರ ಸರಕಾರದ ಸ್ಮಾರ್ಟ್‌ ಸಿಟಿ ಯೋಜನೆ ಜಾರಿ ಇರುವಾಗಲೇ ರಾಜ್ಯ ಸರಕಾರದ ಮಿಷನ್‌ 2022 ಯೋಜನೆಗೆ ಮಂಗಳೂರು ಆಯ್ಕೆಯಾಗುವ ಸಾಧ್ಯತೆ ಇದೆ.

Advertisement

ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ರೂಪಿಸಿರುವ “ಮಿಷನ್‌-2022′ ಮಾದರಿಯಲ್ಲೇ ಮಂಗಳೂರು ಸಹಿತ ಪ್ರಮುಖ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಈ ಯೋಜನೆ ಜಾರಿಗೆ ರಾಜ್ಯ ಸರಕಾರ ನಿರ್ಧರಿಸಿದೆ. ಮುಂದಿನ ಬಜೆಟ್‌ನಲ್ಲಿ ಯೋಜನೆ ಪ್ರಕಟಗೊಳ್ಳುವ ಸಂಭವವಿದೆ.

ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮೈಸೂರು, ಶಿವಮೊಗ್ಗ, ಬಳ್ಳಾರಿ, ತುಮಕೂರು ಕಲಬುರಗಿ ಮಹಾ ನಗರಪಾಲಿಕೆಗಳನ್ನೂ ಪರಿಗಣಿಸಲಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯೊಳಗೆ ಯೋಜನೆಯ ಅನುಷ್ಠಾನ ಸರಕಾರದ ಉದ್ದೇಶ.

ಪ್ರಮುಖವಾಗಿ ಸುಗಮ ಸಂಚಾರ, ತ್ಯಾಜ್ಯ ವಿಲೇವಾರಿ ಮತ್ತು ಸ್ವತ್ಛತೆ, ಹಸುರೀಕರಣಕ್ಕೆ ಒತ್ತು ನೀಡುವುದು. ದಿನದ 24 ತಾಸು ನೀರು ಪೂರೈಕೆ ವ್ಯವಸ್ಥೆ ಕೈಗೊಳ್ಳುವುದು. ಎಲ್‌ಇಡಿ ದೀಪಗಳ ಅಳವಡಿಕೆ, ಸ್ಥಳೀಯ ಪರಂಪರೆ, ಸಾಂಸ್ಕೃತಿಕ ಇತಿಹಾಸ ದಾಖಲಿಸಿ ಸಾಕ್ಷ್ಯಚಿತ್ರ ಸಿದ್ಧಪಡಿಸಿ ಐತಿಹಾಸಿಕ ಮತ್ತು ಪ್ರವಾಸಿ ತಾಣಗಳ ಅಭಿವೃದ್ಧಿಗೆ ನೀಲನಕ್ಷೆ ರೂಪಿಸುವುದರ ಸಹಿತ ಹಲವಾರು ಕಾರ್ಯಕ್ರಮಗಳು ಈ ಮಿಷನ್‌ 2022ನಡಿ ಸೇರಿವೆ ಎನ್ನುತ್ತವೆ ಮೂಲಗಳು.

ಬೆಂಗಳೂರು ಮಿಷನ್‌-2022 ಘೋಷಣೆಯ ಅನಂತರ ಇತರ ನಗರಪಾಲಿಕೆಗಳಲ್ಲೂ ಇದೇ ರೀತಿಯ ಯೋಜನೆ ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಬೇಡಿಕೆ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಬಜೆಟ್‌ ವೇಳೆಗೆ ಪ್ರಸ್ತಾವನೆ ಸಿದ್ಧಪಡಿಸಿ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಮಂಡಿಸಲು ನಗರಾಭಿವೃದ್ಧಿ ಇಲಾಖೆಗೆ ಸೂಚಿಸಲಾಗಿದೆ.

Advertisement

ಸ್ಮಾರ್ಟ್‌ ಸಿಟಿ, ಮುಖ್ಯಮಂತ್ರಿಯವರ ನಗರೋತ್ಥಾನ ಸೇರಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳಡಿ ಲಭ್ಯವಾಗುವ ಎಲ್ಲ ಅನುದಾನ ಸೇರಿಸಿ, ರಾಜ್ಯ ಸರಕಾರದಿಂದ ಹೆಚ್ಚುವರಿಯಾಗಿ ಹಣಕಾಸು ಒದಗಿಸಿ ಸುಮಾರು 50 ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಲಾಗುವುದು.

ಇತರ ನಗರಗಳ ಅಭಿವೃದ್ಧಿಯಿಂದ ಕೈಗಾರಿಕೆಗಳನ್ನು ಆಕರ್ಷಿಸ ಬಹುದು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗ ಬಹುದು ಎಂದು ಸಿಎಂ ಇತ್ತೀಚಿನ ಸಭೆಯಲ್ಲಿ ಪ್ರಸ್ತಾವಿಸಿದ್ದರು. ಈ ನಡುವೆ, ಸ್ಮಾರ್ಟ್‌ ಸಿಟಿ ಸಹಿತ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 10 ವರ್ಷಗಳಲ್ಲಿ ಜಾರಿಗೊಂಡ ಯೋಜನೆಗಳ ವಿವರ ಕೇಳಲಾಗಿದೆ.

10 ಸಾವಿರ ಕೋ.ರೂ. ಮೀಸಲು
“ಬೆಂಗಳೂರು ಮಿಷನ್‌-2022′ ಅನುಷ್ಠಾನಕ್ಕೆ ಬಜೆಟ್‌ನಲ್ಲಿ 10 ಸಾವಿರ ಕೋಟಿ ರೂಪಾಯಿ ಮೀಸಲಿಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಖುದ್ದು ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ.

ಎಲ್ಲ ನಗರ ಪಾಲಿಕೆಗಳ ಸಮಗ್ರ ಅಭಿವೃದ್ಧಿ ಬಗ್ಗೆ ಹೊಸ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸುವ ಭರವಸೆಯಿದೆ. ಮುಂದಿನ ಎರಡು ವರ್ಷಗಳಲ್ಲಿ ನಗರ ಪಾಲಿಕೆಗಳ ಚಿತ್ರಣ ಬದಲಾಗಲಿದೆ.
-ಬೈರತಿ ಬಸವರಾಜ್‌, ನಗರಾಭಿವೃದ್ಧಿ ಸಚಿವರು

ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next