ನವದೆಹಲಿ: ದೆಹಲಿ ಮಾತ್ರವಲ್ಲ ದೇಶಾದ್ಯಂತ ಕೋವಿಡ್ 19 ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಶನಿವಾರ(ಜನವರಿ 02) ತಿಳಿಸಿದ್ದಾರೆ.
ದರಿಯಾಗಂಜ್ ನ ಹೆರಿಗೆ ಮತ್ತು ಮಕ್ಕಳ ಕಲ್ಯಾಣ ಕೇಂದ್ರದಲ್ಲಿ ಕೋವಿಡ್ 19 ಡ್ರೈ ರನ್ ಕುರಿತು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡುತ್ತ ಆರೋಗ್ಯ ಸಚಿವ ಹರ್ಷ್ ವರ್ಧನ್ ಹೇಳಿಕೆ ನೀಡಿದ್ದಾರೆ.
ಒಂದು ವೇಳೆ ದೆಹಲಿಯಂತೆ ಕೋವಿಡ್ 19 ಲಸಿಕೆಯನ್ನು ಉಚಿತವಾಗಿ ನೀಡುವ ಉದ್ದೇಶ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೇವಲ ದೆಹಲಿ ಮಾತ್ರವಲ್ಲ, ಇಡೀ ದೇಶಾದ್ಯಂತ ಉಚಿತ ಲಸಿಕೆ ನೀಡಲಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ:ಉತ್ತಮ ನಟ, ನಟಿ ಯಾರು? ಶಿವಣ್ಣ, ರಕ್ಷಿತ್ ಶೆಟ್ಟಿಗೆ ದಾದಾ ಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ
ದೇಶಾದ್ಯಂತ ಮೊದಲ ಹಂತದಲ್ಲಿ ಆದ್ಯತೆಯ ಮೇರೆಗೆ ಒಂದು ಕೋಟಿ ಹೆಲ್ತ್ ಕೇರ್ ಹಾಗೂ 2 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ 19 ಲಸಿಕೆಯನ್ನು ನೀಡಲಾಗುತ್ತದೆ. ಜುಲೈ ತಿಂಗಳವರೆಗೆ ಈ ಲಸಿಕೆ ಕಾರ್ಯ ಮುಂದುವರಿಯಲಿದ್ದು, ಒಟ್ಟು 27 ಕೋಟಿ ಮಂದಿ ಲಸಿಕೆ ಪಡೆಯಲಿದ್ದಾರೆ ಎಂದು ಹೇಳಿದರು.
ದೆಹಲಿಯ ದರಿಯಾಗಂಜ್ ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಸ್ವಾಧೀನದ ಗುರು ತೇಜ್ ಬಹದ್ದೂರ್ ಆಸ್ಪತ್ರೆ ಮತ್ತು ಖಾಸಗಿ ವೆಂಕಟೇಶ್ವರ ಆಸ್ಪತ್ರೆಯಲ್ಲಿ ಡ್ರೈ ರನ್ ನಡೆಸಲಾಗಿದೆ.