ಬೆಂಗಳೂರು: ಅಲ್‌ಖೈದಾ ಸಂಘಟನೆ ಜತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬಂಧನಕ್ಕೊಳಗಾದ ಥಣಿಸಂದ್ರ ನಿವಾಸಿ ಮೊಹಮ್ಮದ್ ಆರೀಫ್ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್‌ಐ ಮತ್ತು ಪಾಕಿಸ್ತಾನದ ಕೆಲ ವ್ಯಕ್ತಿಗಳ ಜತೆ ಸಂಪರ್ಕ ಹೊಂದಿದ್ದ ಎಂಬ ಸ್ಫೋಟಕ ಮಾಹಿತಿ ಬಹಿರಂಗ ಹೊಂದಿದೆ.
ಈತನಿಗೆ ಮಹಾರಾಷ್ಟ್ರದ ಥಾಣೆಯಲ್ಲಿ ಬಂಧನಕ್ಕೊಳಗಾದ ಹಮ್ರಾಜ್‌ವೊರ್ಷಿದ್ ಶೇಖ್ ಕೂಡ ಸಹಕಾರ ನೀಡುತ್ತಿದ್ದ ಎಂಬುದು ಗೊತ್ತಾಗಿದೆ.
ಮೂರ್ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿರುವ ಆರೀಫ್, ಥಣಿಸಂದ್ರದಲ್ಲಿ ಕುಟುಂಬ ಸಮೇತ ವಾಸವಾಗಿದ್ದ. ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಆರೀಫ್, ಉತ್ತರ ಪ್ರದೇಶ ಹಾಗೂ ದೇಶದಲ್ಲಿ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಭಾವಿಸಿದ್ದ.
ಹೀಗಾಗಿ ನಕಲಿ ಖಾತೆಗೆ ಉಗ್ರವಾದದ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದ. ಅದನ್ನು ಗಮನಿಸಿದ ಸಂಘಟನೆ ಸದಸ್ಯರು ಈತನನ್ನು ಸಂಪರ್ಕಿಸಿದ್ದರು. ಹೀಗೆ ಸುಮಾರು ಒಂದೂವರೆ ವರ್ಷದಿಂದ ಒಬ್ಬನೇ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿದ್ದ. ಈ ಮಧ್ಯೆ ಕಳೆದ ವರ್ಷ ಬಂಧನಕ್ಕೊಳಗಾದ ಅಖ್ತರ್ ಹುಸೇನ್‌ನನ್ನು ಸಂಪರ್ಕಿಸುವಂತೆ ಸೂಚಿಸಿದ್ದರು. ಒಮ್ಮೆ ಅಖ್ತರ್‌ನನ್ನು ಭೇಟಿಯಾಗಿದ್ದ ಆರೀಫ್, ಆದಷ್ಟು ಬೇಗ ಆಫ್ಘಾನಿಸ್ತಾನಕ್ಕೆ ತೆರಳಿ, ತರಬೇತಿ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದ. ಅದಕ್ಕೆ ಆರ್ಥಿಕ ಸಹಾಯ ಕೂಡ ನೀಡಿದ್ದ ಎಂದು ಮೂಲಗಳು ತಿಳಿಸಿವೆ.
ಪಾಕ್ ಜತೆ ನಂಟು: ಮೊಹಮ್ಮದ್ ಆರೀಫ್ ಮತ್ತು ಹಮ್ರಾಜ್ ಶೇಖ್ ಉಗ್ರ ಸಂಘಟನೆ ವಿದೇಶಿ ಹ್ಯಾಂಡರ್‌ಗಳ ಜತೆ ಸಂಪರ್ಕದಲ್ಲಿದ್ದರು. ಆರೀಫ್ ಎನ್‌ಕ್ರಿಪ್ಟ್ ಮಾಡಲಾದ ಟೆಲಿಗ್ರಾಂ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಅಲ್‌ಖೈದಾ ಮಾತ್ರವಲ್ಲ, ಅದರ ಸಿದ್ಧಾಂತಗಳನ್ನು ಪ್ರತಿಪಾದಿಸುವ ಐಸಿಸ್ ಮತ್ತು ತಾಲಿಬಾನ್ ಹಾಗೂ ಪಾಕಿಸ್ತಾನದ ಐಎಸ್‌ಐ ಜತೆ ಸಂಪರ್ಕದಲ್ಲಿದ್ದ. ಅಲ್ಲದೆ, ಪಾಕ್‌ನ ಸ್ಥಳೀಯ ವ್ಯಕ್ತಿಗಳ ಜತೆ ಆನ್‌ಲೈನ್ ಮೂಲಕ ಚರ್ಚೆ ನಡೆಸಿದ್ದಾರೆ. ತಾಲಿಬಾನ್ ಬೆಂಬಲಿಗರ ಮೂಲಕ ಇಬ್ಬರು ಆಫ್ಘಾನಿಸ್ತಾನಕ್ಕೆ ತೆರಳಲು ಯೋಜಿಸಿದ್ದರು.
ಮತ್ತೊಂದು ಸ್ಫೋಟಕ ವಿಚಾರವೆಂದರೆ, ಆನ್‌ಲೈನ್ ವೇದಿಕೆಗಳ ಮೂಲಕ ಸಂಘಟನೆ ಪ್ರಚಾರ ಕುರಿತು ಚರ್ಚೆ ನಡೆಸಿದ್ದಾರೆ. ವಿದೇಶಿ ಘಟಕಗಳ ಮೂಲಕ ಸಿರಿಯಾದ ಯುದ್ಧದ ವಿಧವೆಯರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದರು ಎಂದು ಮೂಲಗಳು ತಿಳಿಸಿವೆ.