ನವದೆಹಲಿ : ಪಂಜಾಬ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದಿರುವ ಕಾಂಗ್ರೆಸ್ ನಾಯಕ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಬಿಜೆಪಿ ಸೇರಲಿದ್ದಾರೆ ಎನ್ನುವ ವದಂತಿಗೆ ತೆರೆ ಎಳೆದಿದ್ದಾರೆ.
ಅಮರೀಂದರ್ ಅವರು ಬುಧವಾರ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು. ಇದು ಅಮರೀಂದರ್ ಬಿಜೆಪಿ ಸೇರಲಿದ್ದಾರೆ ಎನ್ನುವ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಆದರೆ, ಇಂದು ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ತಾವು ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
“ನಾನು ಬಿಜೆಪಿಗೆ ಹೋಗುವುದಿಲ್ಲ ಹಾಗಂತ ಕಾಂಗ್ರೆಸ್‍ನಲ್ಲಿ ಇರುವುದಿಲ್ಲ. ಸದ್ಯ ನಾನು ಈ ಪಕ್ಷದಲ್ಲಿ ಇದೀನಿ, ಆದರೆ, ಇದರಲ್ಲಿಯೇ ಮುಂದುವರೆಯುವುದಿಲ್ಲ” ಎಂದಿದ್ದಾರೆ.
ಸೆಪ್ಟೆಂಬರ್ 18 ರಂದು ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಅಮರೀಂದರ್ ಸಿಂಗ್ ಅವರು ರಾಜೀನಾಮೆ ನೀಡಿದರು. ಪಕ್ಷದಲ್ಲಿನ ಒಳಜಗಳವೇ ಕ್ಯಾಪ್ಟನ್ ರಾಜೀನಾಮೆಗೆ ಮುಖ್ಯ ಕಾರಣವಾಯಿತು. ಸಿಎಂ ಸ್ಥಾನ ಕಿತ್ತುಕೊಂಡ ಪಕ್ಷದ ಹೈಕಮಾಂಡ್ ಜೊತೆ ಅಸಮಾಧನಗೊಂಡಿರುವ ಸಿಂಗ್, ಪಕ್ಷ ಬಿಡುವುದು ಖಚಿತವಾಗಿದೆ. ಅವರ ಮುಂದಿನ ನಡೆ ಏನು ಎಂಬುದು ಇದೀಗ ಎಲ್ಲರಲ್ಲೂ ಮೂಡಿರುವ ಪ್ರಶ್ನೆ..
ಇನ್ನು ಪಕ್ಷ ತೊರೆಯುತ್ತಿರುವ ಅಮರೀಂದರ್ ಸಿಂಗ್ ಅವರ ಮನವೋಲಿಕೆಗೆ ಕಾಂಗ್ರೆಸ್ ನಾಯಕರುಗಳಾದ ಅಂಬಿಕಾ ಸೋನಿ ಹಾಗೂ ಕಮಲ್ ನಾಥ್ ಅವರು ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.