ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ಸಲಹೆಗಾರ ಹುದ್ದೆಗೆ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಅಥವಾ ಸಚಿವರು ಸೇರಿದಂತೆ ಯಾರಿಂದಲೂ ಆಹ್ವಾನ ಬಂದಿಲ್ಲ ಎಂದು ನಿವೃತ್ತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು.
ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಾಣಿಜ್ಯ ವಿಭಾಗದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಲಹೆಗಾರರ ಹುದ್ದೆಗೆ ನೇಮಕಾತಿ ಸಂಬಂಧ ಮುಖ್ಯಮಂತ್ರಿ ಅಥವಾ ಉನ್ನತ ಶಿಕ್ಷಣ ಇಲಾಖೆ ಸಚಿವರಿಂದ ಆಹ್ವಾನ ನೀಡಬೇಕಿತ್ತು.
ಆದರೆ, ಈ ವರೆಗೂ ಯಾವುದೇ ರೀತಿಯ ಆಹ್ವಾನ ಬಂದಿಲ್ಲ. ಸರ್ಕಾರಿ ಮಟ್ಟದಲ್ಲಿ ಚರ್ಚೆಯಾಗಿದೆಯೋ ಇಲ್ಲವೋ ಮಾಹಿತಿ ಇಲ್ಲ ಎಂದು ಹೇಳಿದರು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕಾಯ್ದೆಯಂತೆ ತಾಂತ್ರಿಕ ಕೋರ್ಸ್‌ಗಳಿಗೆ ಅನುಮತಿ ನೀಡಿದ್ದೇನೆ. ಯಾವುದೇ ರೀತಿಯ ಅಕ್ರಮ ಮಾಡಿಲ್ಲ.
ಯುಜಿಸಿಯಿಂದಲೂ ನನಗೆ ಪತ್ರ ಬಂದಿಲ್ಲ. 2013ರ ನಂತರ ಬಂದಿರುವ ಕುಲಪತಿಗಳು ಮಾನ್ಯತೆ ನವೀಕರಣ ಮಾಡಬೇಕಿತ್ತು. ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸದೇ ಇರುವುದರಿಂದ ನವೀಕರಣವಾಗಿಲ್ಲ. ಮೈಸೂರು ವಿವಿಯ ಕೆಲವು ಕಾಲೇಜುಗಳ ನ್ಯಾಕ್ ಮಾನ್ಯತೆ ರದ್ದಾಗಿ 50 ಕೋಟಿ ರೂ. ನಷ್ಟ ಆಗಿರುವುದು ನನ್ನ ಅವಧಿಯಲ್ಲ ಅಲ್ಲ ಎಂದು ಸ್ಪಷ್ಟಪಡಿಸಿದರು.
ವಾಣಿಜ್ಯ ವಿಷಯಕ್ಕೆ ಬೇಡಿಕೆ ಹೆಚ್ಚಾಗಿ, ಸಮಾಜ ವಿಜ್ಞಾನ ಬೇಡಿಕೆ ಕಳೆದುಕೊಳ್ಳುತ್ತಿದೆ. ಇಂದಿನ ಅಗತ್ಯತೆಗೆ ತಕ್ಕಂತೆ ಪಠ್ಯಕ್ರಮ ರೂಪಿಸಬೇಕು. ಜ್ಞಾನಾಧಾರಿತ ಪದ್ಧತಿಯಿಂದ ಕೌಶಲ್ಯಾಧಾರಿತ ಪದ್ಧತಿಗೆ ಬದಲಾಗಬೇಕು.
-ಪ್ರೊ.ಟಿ.ಡಿ.ಕೆಂಪರಾಜು, ಬೆಂಗಳೂರು ಉತ್ತರ ವಿವಿ ಕುಲಪತಿ