Advertisement

ಬುದ್ಧಿಜೀವಿ ಆಷಾಢಭೂತಿ ಸಾಹಿತಿಗಳಿಗೆ ನಾಚಿಕೆಯಿಲ್ಲ

05:47 AM Dec 30, 2018 | Team Udayavani |

ಮೈಸೂರು: ಜಾಣ್ಮೆ, ಪದಸಂಪತ್ತು, ವಾಕ್ಚಾತುರ್ಯ ಹೊಂದಿರುವ ಬುದ್ಧಿಜೀವಿಗಳೆನಿಸಿಕೊಂಡ ಆಷಾಢಭೂತಿ ಸಾಹಿತಿಗಳಿಗೆ ಸ್ವಲ್ಪ ನಾಚಿಕೆಯೂ ಇದ್ದಿದ್ದರೆ ಭೂಮಿಯ ಮೇಲೆ ಇವರ ಅಸ್ತಿತ್ವ ಅರ್ಥ ಪಡೆದುಕೊಳ್ಳುತ್ತಿತ್ತು. ಸಮಾಜದಲ್ಲಿ ಇಷ್ಟೊಂದು ಲೇವಡಿಗೆ ಒಳಗಾಗುತ್ತಿರಲಿಲ್ಲ ಎಂದು ಅಖೀಲ ಭಾರತೀಯ ಸಾಹಿತ್ಯ ಪರಿಷದ್‌ 2ನೇ ರಾಜ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಪ್ರೇಮಶೇಖರ ಹೇಳಿದರು.

Advertisement

ಅಖೀಲ ಭಾರತೀಯ ಸಾಹಿತ್ಯ ಪರಿಷದ್‌, ಕರ್ನಾಟಕ ಘಟಕ ಮೈಸೂರು ವಿಶ್ವವಿದ್ಯಾಲಯದ ಸೆನೆಟ್‌ ಭವನದಲ್ಲಿ ಆಯೋಜಿಸಿರುವ ಸಾಹಿತ್ಯದಲ್ಲಿ ಭಾರತೀಯತೆ ವಿಷಯ ಕುರಿತ ಎರಡು ದಿನಗಳ 2ನೇ ರಾಜ್ಯ ಸಮ್ಮೇಳನದಲ್ಲಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.

ಸ್ವಾರ್ಥವಷ್ಟೇ ಸಾಹಿತ್ಯ: ತಿರುಚಿದ ಇತಿಹಾಸ, ಸುಳ್ಳುಗಾರ, ಸ್ವಾರ್ಥಿ, ಸಮಾಜ ವಿಜ್ಞಾನಿಗಳ  ಗರಡಿಯಲ್ಲಿ ತಯಾರಾದ ಸಾಹಿತಿಗಳು ರಚಿಸಿದ ಸಾಹಿತ್ಯದಲ್ಲಿ ಭಾರತೀಯತೆ ಮರೆಯಾಗಿಹೋಯಿತು. ನಮ್ಮ ಸಾಹಿತ್ಯ ವಲಯ ಅಪ್ರಮಾಣಿಕತೆಯಿಂದ, ಆಷಾಢಭೂತಿತನದಿಂದ ಕಲುಷಿತಗೊಂಡಿತು. ಪ್ರಶಸ್ತಿ, ಹಣ, ಸ್ಥಾನಮಾನಗಳನ್ನು ಗಳಿಸುವ ಸ್ವಾರ್ಥವಷ್ಟೇ ಸಾಹಿತ್ಯದ ಉದ್ದೇಶ ಎನ್ನುವ ಸ್ಥಿತಿ ನಿರ್ಮಾಣವಾಯಿತು. ಇಂತಹ ಸಾಹಿತಿಗಳು ರಚಿಸಿದ ಸಾಹಿತ್ಯದಲ್ಲಿ ಭಾರತೀಯತೆ ಹೇಗೆ ಉಳಿಯಲು ಸಾಧ್ಯ ಎಂದು ಪ್ರೊ. ಪ್ರೇಮಶೇಖರ ಪ್ರಶ್ನಿಸಿದರು.

ಸಾಹಿತ್ಯದಲ್ಲಿ ಭಾರತೀಯತೆ ಎಂಬ ವಿಷಯವು ನಾವೆಲ್ಲರೂ ಗಂಭೀರವಾಗಿ ಚರ್ಚಿಸಬೇಕಾದ ಮಹತ್ತರ ವಿಷಯವಾಗಿದೆ. ಜಗತ್ತಿಗೆ ಸಾಹಿತ್ಯವನ್ನು ನೀಡಿದ ಭಾರತೀಯರು ಇಂದು ನಮ್ಮ ಸಾಹಿತ್ಯದಲ್ಲಿ ಭಾರತೀಯತೆಯನ್ನು ಹುಡುಕುವಂತಹ ಸ್ಥಿತಿ ನಿರ್ಮಾಣವಾಗಿರುವುದು ನೋವಿನ ಸಂಗತಿ. ಸ್ವಾತಂತ್ರ್ಯ ನಂತರ ಭಾರತೀಯರ ಬದುಕಿನಲ್ಲಿ ಕರ್ತವ್ಯ ಮತ್ತು ಜವಾಬ್ದಾರಿಯ ಅರಿವು ಹಿನ್ನೆಲೆಗೆ ಸರಿದಂತೆಯೇ ಹಕ್ಕು ಮುನ್ನೆಲೆಗೆ ಬಂದು ಅದು ಭಾರತೀಯ ಸಾಹಿತ್ಯದ ಮುಖ್ಯವಾಹಿನಿಯಲ್ಲೂ ಗಾಢವಾಗಿ ಕಾಣಿಸಿಕೊಳ್ಳತೊಡಗಿತು. 

ವಿದೇಶಿ ಅಕ್ರಮಣ ವಿಜೃಂಭಣೆ: ಭಾರತದಲ್ಲಿ ಇಂಗ್ಲಿಷ್‌ ಶಿಕ್ಷಣದ ಅಡಿಪಾಯ ಹಾಕಿದ ಲಾರ್ಡ್‌ ಮೆಕಾಲೆ ಪ್ರೇರಿತ ಕಾಂಗ್ರೆಸ್‌ ಪೋಷಿತ ಕಮ್ಯುನಿಸ್ಟ್‌ ಇತಿಹಾಸಕಾರರಿಂದಾಗಿ ವಸುದೈವ ಕುಟುಂಬಕಂ ಎಂಬ ಭಾರತೀಯ ಮೌಲ್ಯವನ್ನು, ಉದಾತ್ತ ಭಾರತೀಯ ನೀತಿ ಮತ್ತು ಆಚರಣೆ ಇತಿಹಾಸದ ಪಠ್ಯಪುಸ್ತಕಗಳಲ್ಲಿ ಸ್ಥಾನ ಪಡೆಯಲೇ ಇಲ್ಲ. ಮಹಮ್ಮದ್‌ ಘಜನಿಯ ದಂಡ ಯಾತ್ರೆಗಳು ಪಠ್ಯಪುಸ್ತಕದಲ್ಲಿ ದೊಡ್ಡದಾಗಿ ದಾಖಲಾದವು. ಅವನ ಉತ್ತರಾಧಿಕಾರಿಗಳು ಭಾರತದಲ್ಲೂ, ಆಫ್ಘಾನಿಸ್ಥಾನದಲ್ಲೂ ಮತ್ತೆ ಮತ್ತೆ ಸೋಲು ಅನುಭವಿಸಿದರು.

Advertisement

ಆದರೆ, ಆಫ್ಘಾನಿಸ್ಥಾನದಲ್ಲಿ ಅನುಭವಿಸಿದ ಸೋಲುಗಳು ಪಠ್ಯಪುಸ್ತಕದಲ್ಲಿ ಸ್ಥಾನ ಪಡೆದರೆ ಭಾರತದಲ್ಲಿ ಉಂಡ ಸೋಲುಗಳು ದಾಖಲಾಗಲೇ ಇಲ್ಲ. ಭಾರತದ ಮೇಲಾದ ವಿದೇಶಿ ಸೇನಾ ಆಕ್ರಮಣಗಳು, ವಿದೇಶಿ ಅಧಿಪತ್ಯಕ್ಕೆ ಇತಿಹಾಸ ಪಠ್ಯಪುಸ್ತಕಗಳಲ್ಲಿ ದೊರೆತಷ್ಟು ಸ್ಥಾನ ತನ್ನ ಧರ್ಮ, ಕಲೆ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಇಡೀ ಆಗ್ನೇಯ ಏಷಿಯಾ, ಚೀನಾಕ್ಕೆ ಶಾಂತಿಮಾರ್ಗದಲ್ಲಿ ಹರಡಿ ಅವೆಲ್ಲವನ್ನೂ ಸಾಂಸ್ಕೃತಿಕ ಬೃಹತ್‌ ಭಾರತಕ್ಕೆ ಸೇರಿಸಿದ್ದಕ್ಕೆ ಸಿಗಲೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಎಡಪಂಥೀಯ ಚಿಂತಕರು ಕಾಂಗ್ರೆಸ್‌ ಕಾಲಾಳು: ಎಡಪಂಥೀಯ ವಿಚಾರವಾದಿ-ಸಾಹಿತಿಗಳಿಗೆ ಮುಖ್ಯವೆನಿಸಿದ್ದು ಹಣ, ಪ್ರಶಸ್ತಿ, ಸ್ಥಾನಮಾನಗಳಂತಹ ಐಹಿಕ ಸುಖಭೋಗಗಳು, ಅವುಗಳನ್ನು ಆಗಾಗ್ಗೆ ಎಸೆಯುವ ಮೂಲಕ ಇವರನ್ನು ತನಗೆ ಬೇಕಾದಂತೆ ಉಪಯೋಗಿಸಿಕೊಳ್ಳಬಹುದು ಎನ್ನುವುದನ್ನು ನೆಹರೂ ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಎಡಪಂಥೀಯ ಚಿಂತಕರು ಕಾಂಗ್ರೆಸ್‌ನ ಕಾಲಾಳುಗಳಾಗಿ ಮಾರ್ಪಟ್ಟು ಆಷಾಢಭೂತಿತನದ ಅಪರಾವತಾರವಾಗಿ ಹೋದರು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next