Advertisement

ಶಿಥಿಲಗೊಂಡ ಶಾಲೆಗಳಲ್ಲಿ ತರಗತಿ ನಡೆಸದಂತೆ ಸೂಚನೆ

12:29 PM Aug 13, 2019 | Team Udayavani |

ಹಾವೇರಿ: ಅತಿವೃಷ್ಠಿ ಹಾಗೂ ನೆರೆ ಹಾವಳಿಯಿಂದ ಹಾನಿಯಾಗಿರುವ ವಿವಿಧ ಬೆಳೆಹಾನಿ, ಮನೆಹಾನಿ, ರಸ್ತೆ, ಸೇತುವೆ ಒಳಗೊಂಡಂತೆ ಮೂಲ ಸೌಕರ್ಯಗಳ ಹಾನಿ ಕುರಿತಂತೆ ನಿಖರ ವರದಿ ಸಂಗ್ರಹಿಸಿ ಅಗತ್ಯ ಅನುದಾನದ ವಿವರ ಸಲ್ಲಿಸುವಂತೆ ವಿವಿಧ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅತಿವೃಷ್ಠಿ ಹಾಗೂ ಪ್ರವಾಹದ ಹಾನಿ ಕುರಿತಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ಹಾನಿಯಾದ ವಿವರನ್ನು ಸರಿಯಾಗಿ ದಾಖಲೀಕರಣ ಮಾಡಬೇಕು. ಛಾಯಾಚಿತ್ರದ ಮೂಲಕ ಹಾನಿಯ ವಿವರ, ದುರಸ್ತಿಗಾಗಿ ಬೇಕಾಗಿರುವ ಹಣ ಹಾಗೂ ಪ್ರತಿ ವಿವರವನ್ನು ಸಂಗ್ರಹಿಸಬೇಕು. ಕುಡಿಯುವ ನೀರಿನ ಸಂಪರ್ಕ, ವಿದ್ಯುತ್‌ ಸಂಪರ್ಕ, ರಸ್ತೆ ಸಂಪರ್ಕಗಳನ್ನು ತ್ವರಿತ್ವವಾಗಿ ಪುನರ್‌ ಸ್ಥಾಪಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಲೋಕೋಪಯೋಗಿ ಇಲಾಖೆ ಸಹಕಾರ ಪಡೆದು ನೆರೆಪೀಡಿತ ಗ್ರಾಮಗಳ ಪ್ರತಿ ಶಾಲೆಗಳನ್ನೂ ಪರಿಶೀಲನೆ ಮಾಡಬೇಕು. ಶಿಥಿಲವಾದ ಕೊಠಡಿ ಹಾಗೂ ಗೋಡೆ ಕುಸಿತವಾದ ಶಾಲಾ-ಕಾಲೇಜು ಹಾಗೂ ಅಂಗನವಾಡಿ ಕಟ್ಟಡಗಳಲ್ಲ್ಲಿ ಯಾವುದೇ ಕಾರಣಕ್ಕೂ ಮಕ್ಕಳಿಗೆ ತರಗತಿ ನಡೆಸಬಾರದು. ಪ್ರತಿ ಶಾಲೆಗಳಲ್ಲಿ ತರಗತಿ ನಡೆಸಲು ಯೋಗ್ಯ ಎಂಬ ಕುರಿತಂತೆ ಪ್ರಮಾಣಪತ್ರ ಪಡೆದು ಶಾಲೆಗಳನ್ನು ನಡೆಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಕಾರಿಗಳಿಗೆ ಸೂಚನೆ ನೀಡಿದರು.

ಕುಡಿಯುವ ನೀರಿನ ಪೈಪ್‌ಲೈನ್‌ನಲ್ಲಿ ಕಲುಷಿತವಾದ ನೀರು ಮಿಶ್ರಣವಾಗದಂತೆ ಎಚ್ಚರ ವಹಿಸಬೇಕು. ತಕ್ಷಣ ಪೈಪ್‌ಗ್ಳನ್ನು ಬದಲಾಯಿಸಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಔಷಧಗಳನ್ನು ದಾಸ್ತಾನು ಮಾಡಿಕೊಂಡು ವೈದ್ಯಕೀಯ ಚಿಕಿತ್ಸೆ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ ಇತರರು ಇದ್ದರು.

Advertisement

ಹಾನಿ ವಿವರ: ಜಿಲ್ಲೆಯಲ್ಲಿ 2667 ಮನೆಗಳಿಗೆ ಹಾನಿಯಾಗಿದ್ದು, ಇದರಲ್ಲಿ 2479 ಮನೆಗಳು ಭಾಗಶಃ ಹಾಳಾಗಿವೆ ಹಾಗೂ 188 ಮನೆಗಳು ಪೂರ್ಣಪ್ರಮಾಣದಲ್ಲಿ ಹಾಳಾಗಿದ್ದು 802.73 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ. ಪ್ರಾಥಮಿಕ ವರದಿಯಲ್ಲಿ 42665.18 ಹೆಕ್ಟೇರ್‌ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, 4856.96 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ. 20 ಕುರಿಗಳು, ಎರಡು ಎಮ್ಮೆ, ಮೂರು ಹಸುಗಳು ಸಾವಿಗೀಡಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next