Advertisement

ಬಳಕೆಯಾಗುತ್ತಿಲ್ಲ ಮಂಟೂರು ರಸ್ತೆ ವಿದ್ಯುತ್‌ ಚಿತಾಗಾರ-ಬೆರಳೆಣಿಕೆಯಷ್ಟು ಅಂತ್ಯಸಂಸ್ಕಾರ

04:28 PM Jan 02, 2024 | Team Udayavani |

ಉದಯವಾಣಿ ಸಮಾಚಾರ
ಹುಬ್ಬಳ್ಳಿ: ಸಾರ್ವಜನಿಕರಲ್ಲಿರುವ ಸಾಂಪ್ರದಾಯಿಕ ನಂಬಿಕೆ ಹಾಗೂ ಸೂಕ್ತ ಮಾಹಿತಿ ಕೊರತೆಯಿಂದ ಕೋಟ್ಯಂತರ ರೂ. ಸುರಿದು ನಿರ್ಮಿಸಿರುವ ವಿದ್ಯುತ್‌ ಚಿತಾಗಾರ ಬಳಕೆಯಾಗುತ್ತಿಲ್ಲ. ಆರಂಭವಾಗಿ ಒಂದು ವರ್ಷ ಕಳೆದರೂ ಅಗ್ನಿಸ್ಪರ್ಷವಾಗಿದ್ದು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಸದ್ಬಳಕೆಯಾಗಲಿ ಎನ್ನುವ ಕಾರಣಕ್ಕೆ “ಉಚಿತ’ ಮಾಡಿದರೂ ಅಂತ್ಯಸಂಸ್ಕಾರಕ್ಕೆ ಚಿತಾಗಾರ ಬಳಸಲು ಹಿಂದೇಟು ಹಾಕುತ್ತಿದ್ದಾರೆ.

Advertisement

ನಗರ ಬೆಳೆದಂತೆಲ್ಲಾ ಅಗತ್ಯಕ್ಕೆ ತಕ್ಕಂತೆ ಸ್ಮಶಾನ ಭೂಮಿ ಒದಗಿಸುವುದು ಕಷ್ಟ. ಇನ್ನೂ ಈಗಿರುವ ಚಿತಾಗಾರಗಳಿಂದ ಸೂಸುವ ಹೊಗೆಯಿಂದ ಸುತ್ತಲಿನ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಒಂದು ಶವಸಂಸ್ಕಾರಕ್ಕೆ ಸುಮಾರು ಐದಾರು ಕ್ವಿಂಟಲ್‌ ಸೌಧೆ ಹಾಗೂ ಇತರೆ ರಾಸಾಯಿನಿಕ ಬಳಸಲಾಗುತ್ತದೆ.

ಖರ್ಚು ಹಾಗೂ ಪರಿಸರಕ್ಕೆ ಹಾನಿಯಾಗಬಾರದು ಎನ್ನುವ ಕಾರಣಕ್ಕೆ ಇಲ್ಲಿನ ಮಂಟೂರು ರಸ್ತೆಯಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಮೂಲಕ ಸುಮಾರು 2.8 ಕೋಟಿ ರೂ. ವ್ಯಯ ಮಾಡಲಾಗಿದೆ. 2022ರ ಜೂನ್‌ನಲ್ಲೇ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿತಾಗಾರ ಉದ್ಘಾಟಿಸಿದ್ದರು. ಆದರೆ ಅಲ್ಲಿಂದ ಈವರೆಗೆ ಇಲ್ಲಿ ಶವ ಸಂಸ್ಕಾರವಾಗಿದ್ದು ಕೇವಲ 8 ಮಾತ್ರ.

ಅಗತ್ಯತೆ ಪ್ರಶ್ನೆ ಉದ್ಭವ: ಹೆಗ್ಗೇರಿ ಸ್ಮಶಾನಗಟ್ಟಿಯಲ್ಲಿ ಈ ಹಿಂದೆ ಒಂದು ವಿದ್ಯುತ್‌ ಚಿತಾಗಾರ ನಿರ್ಮಿಸಲಾಗಿತ್ತು. ಆದರೆ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯಸಂಸ್ಕಾರಕ್ಕೆ ಕುಟುಂಬದವರು ಮನಸ್ಸು ಮಾಡದ ಕಾರಣ 10-12 ವರ್ಷಗಳ ಹಿಂದೆಯೇ ತುಕ್ಕು ಹಿಡಿದು ಹಾಳಾಯಿತು. ಹೀಗಿರುವಾಗ ಮಂಟೂರು ರಸ್ತೆಯ ಸ್ಮಶಾನದಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಾಣ ಅಗತ್ಯವಿತ್ತಾ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ.ಇನ್ನೂ ವಿದ್ಯಾನಗರದಲ್ಲಿ ಮಹಾನಗರ ಪಾಲಿಕೆಯ ಸುಮಾರು 2 ಕೋಟಿ ರೂ. ಅನುದಾನದಲ್ಲಿ ಮತ್ತೂಂದು ವಿದ್ಯುತ್‌ ಚಿತಾಗಾರ ನಿರ್ಮಾಣವಾಗಿದ್ದು, ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ. ಆನಂದ ನಗರದಲ್ಲಿ ಗ್ಯಾಸ್‌ ಆಧಾರಿತ ಚಿತಾಗಾರ ನಿರ್ಮಾಣವಾಗಿದೆ.

ಮಾಹಿತಿ ಕೊರತೆ, ಸಂಪ್ರದಾಯ: ಸೌಧೆ ಬಳಸಿ ಹೆಚ್ಚು ಹಣ ಖರ್ಚು ಮಾಡಿ ಶವಸಂಸ್ಕಾರ ಮಾಡಲು ಸಾಧ್ಯವಾಗದ ಕಡುಬಡ ಕುಟುಂಬದವರಿಗೆ ಮಾತ್ರ ವಿದ್ಯುತ್‌ ಚಿತಾಗಾರ ಅನಿವಾರ್ಯವಾಗಿದೆ. ಆದರೆ ಬಹುತೇಕರಲ್ಲಿ ಈ ಚಿತಾಗಾರದ ಮೂಲಕ ಮಾಡಿದರೆ ಮುಕ್ತಿ ಸಿಗುವುದಿಲ್ಲ, ಇದು ಸಂಸ್ಕಾರಕ್ಕೆ ಸೂಕ್ತವಲ್ಲ ಎನ್ನುವ ಭಾವನೆಯಿದೆ. ಅಂತ್ಯಸಂಸ್ಕಾರದ ಪೂಜೆ ವಿಧಿವಿಧಾನಗಳಿಗೆ ಬೇಕಾಗುವ ಸ್ಥಳಾವಕಾಶ ಕಲ್ಪಿಸಲಾಗಿದೆ. ಆದರೆ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡುವ ಮೊದಲು ನೀರು ತುಂಬಿದ ಮಡಿಕೆ ಹೊತ್ತು ಮೂರು ಸುತ್ತು ಹಾಕಲು ಸಾಧ್ಯವಿಲ್ಲ. ಮೇಲಾಗಿ ತಾವಾಗಿಯೇ ಅಗ್ನಿಸ್ಪರ್ಶ ಮಾಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಜನರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಇಲ್ಲೊಂದು ವಿದ್ಯುತ್‌ ಚಿತಾಗಾರವಿದೆ, ಯಾವುದೇ ಶುಲ್ಕವಿಲ್ಲದೆ ಅಂತ್ಯಸಂಸ್ಕಾರ ಮಾಎಬಹುದು ಎಂಬ ಮಾಹಿತಿ ಕೊರತೆಯಿದೆ ಎನ್ನುವ ಅಭಿಪ್ರಾಯ ಇಲ್ಲಿ ಕೆಲಸ ಮಾಡುವವರದ್ದಾಗಿದೆ.

Advertisement

ಆನೆ ಸಾಕಿದಂತೆ!
ಮಂಟೂರ ರಸ್ತೆ ವಿದ್ಯುತ್‌ ಚಿತಾಗಾರದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ತಿಂಗಳಿಗೆ ಒಂದು ಅಥವಾ ಎರಡು ಅಂತ್ಯಸಂಸ್ಕಾರ ನಡೆದರೆ
ದೊಡ್ಡದು. ಒಂದೆರಡು ಶವಗಳಿಗೆ ಅಗ್ನಿಸ್ಪರ್ಶ ಮಾಡಬೇಕಾದರೆ ಈ ಚಿತಾಗಾರದ ಉಷ್ಣಾಂಶ 400 ಡಿಗ್ರಿ ಸೆಲ್ಸಿಯಸ್‌ ಇರಬೇಕು. ಹೀಗಾಗಿ ನಿರಂತರವಾಗಿ ವಿದ್ಯುತ್‌ ಬಳಕೆಯಾಗಲಿದೆ. ಇನ್ನೂ ಶವ ಭಸ್ಮವಾಗಲು 700-900 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರಬೇಕಾಗುತ್ತದೆ. ಪ್ರತಿ ತಿಂಗಳು ಇದರ ವಿದ್ಯುತ್‌ ಬಿಲ್‌ ಬರೋಬ್ಬರಿ 1.20 ಲಕ್ಷ ರೂಪಾಯಿಗೂ ಹೆಚ್ಚು ಬರುತ್ತಿದೆ. ಕೋಟ್ಯಂತರ ರೂ. ಅನುದಾನದ ಹಾಕಿರುವುದು ಒಂದೆಡೆಯಾದರೆ ಪ್ರತಿ ತಿಂಗಳು ಲಕ್ಷ ರೂಪಾಯಿಗೂ ಹೆಚ್ಚು ವಿದ್ಯುತ್‌ ಬಿಲ್‌ ಪಾವತಿ ಮಾಡುತ್ತಿರುವುದು ಸಂಪೂರ್ಣ ವ್ಯರ್ಥವಾದಂತಾಗಿದೆ.

ವಿದ್ಯುತ್‌ ಚಿತಾಗಾರ ಆರಂಭವಾಗಿ ಒಂದು ವರ್ಷ ಕಳೆದಿದೆ. ಈ ಕುರಿತು ಪತ್ರಿಕೆ  ಸೇರಿದಂತೆ ಸಾಕಷ್ಟು ಮಾಹಿತಿ ನೀಡಲಾಗಿದೆ.
ಅನುದಾನ ವ್ಯರ್ಥವಾಗದಿರಲಿ ಎನ್ನುವ ಕಾರಣಕ್ಕೆ ಯಾವುದೇ ಶುಲ್ಕ ವಿಧಿಸಿಲ್ಲ. ಮೇಲಾಗಿ ನಗರದ ಎಲ್ಲಾ ಆಸ್ಪತ್ರೆಗಳಿಗೆ ಈ ಕುರಿತು ಪತ್ರ ಕೂಡ ಬರೆಯಲಾಗಿದೆ. ಈ ಕುರಿತು ಇನ್ನಷ್ಟು ಮಾಹಿತಿ ಹಾಗೂ ಪ್ರಚುರ ಪಡಿಸಲಾಗುವುದು.
ಎಸ್‌.ಎನ್‌. ಗಣಾಚಾರಿ, ಇಇ, ವಿದ್ಯುತ್‌
ವಿಭಾಗ, ಹು-ಧಾ ಮಹಾನಗರ ಪಾಲಿಕೆ

ಪಾಲಿಕೆ ವತಿಯಿಂದ ಸ್ಮಶಾನದ ಅಭಿವೃದ್ಧಿಗಾಗಿ ಹಣ ಖರ್ಚು ಮಾಡುತ್ತಿದ್ದಾರೆ. ಆದರೆ ಎಲ್ಲಿಯೂ ಅಂತಹ ಅಭಿವೃದ್ಧಿ ಕಾಣುತ್ತಿಲ್ಲ. ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ವಿದ್ಯುತ್‌ ಚಿತಾಗಾರ ಬಳಕೆಯಾಗದಿದ್ದರೆ ಹೇಗೆ. ಸಾರ್ವಜನಿಕರ ತೆರಿಗೆ ಪೋಲಾಗುವುದು ಸರಿಯಲ್ಲ.
ಸುವರ್ಣ ಕಲಕುಂಟ್ಲಾ, ಪಾಲಿಕೆ ವಿಪಕ್ಷ ನಾಯಕಿ 

ವಿದ್ಯುತ್‌ ಚಿತಾಗಾರ ಉದ್ಘಾಟನೆಯಾಗಿ ಒಂದು ವರ್ಷ ಕಳೆದಿದೆ. ಆದರೆ ಅದು ಎಷ್ಟರ ಮಟ್ಟಿಗೆ ಸದ್ಬಳಕೆಯಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಅಗತ್ಯಬಿದ್ದರೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡುತ್ತೇನೆ.
ಸರ್ತಾಜ್‌ ಆದೋನಿ,
ಪಾಲಿಕೆ ಸದಸ್ಯರು, 62ನೇ ವಾರ್ಡ್‌

*ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next