ಲಂಡನ್: ಭಾರತೀಯ ಬ್ಯಾಂಕ್‌ಗಳಿಗೆ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತಂತೆ, ಇಲ್ಲಿನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯದಲ್ಲಿ ಸೋಮವಾರ ವಿಚಾರಣೆ ಆರಂಭವಾಯಿತು.
ವಿಚಾರಣೆಗೆ, ಎಂದಿನಂತೆ, ಫ್ರೆಂಚ್ ಗಡ್ಡ, ಮಿರಿ ಮಿರಿ ಮಿಂಚುವ ಸೂಟ್‌ನಲ್ಲಿ ಆಗಮಿಸಿದ ಮಲ್ಯ, ನ್ಯಾಯಾಲಯ ಪ್ರವೇಶಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. “”ನನ್ನ ಮೇಲಿನ ಆರೋಪಗಳೆಲ್ಲವೂ ಸುಳ್ಳು ಹಾಗೂ ಆಧಾರ ರಹಿತ. ಇದನ್ನು ನಾನು ಪದೇ ಪದೇ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆೆ” ಎಂದರು.
ಆತಂಕ ಸೃಷ್ಟಿಸಿದ ಫೈರ್ ಅಲಾರ್ಮ್: ಮಲ್ಯ ಅವರ ವಿಚಾರಣೆ ಆರಂಭವಾಗಬೇಕೆನ್ನುವಷ್ಟರಲ್ಲಿ ಕೋರ್ಟ್ ಹಾಲ್‌ನಲ್ಲಿದ್ದ ಫೈರ್ ಅಲಾರ್ಮ್ ಜೋರಾಗಿ ಸದ್ದು ಮಾಡಿದ್ದರಿಂದಾಗಿ ಎಲ್ಲರೂ ಗಾಬರಿಯಾಗಿ ವಿಚಾರಣೆ ಸುಮಾರು 40 ನಿಮಿಷಗಳ ಕಾಲ ಮುಂದೂಡಲ್ಪಟ್ಟಿತು. ತಕ್ಷಣವೇ ಎಲ್ಲರನ್ನೂ ಕಲಾಪದ ಹಾಲ್‌ನಿಂದ ಹೊರಗೆ ಕಳುಹಿಸಲಾಯಿತು. ಅಗ್ನಿ ದುರಂತ ಸಂಭವಿಸಿಲ್ಲ ಎಂಬುದನ್ನು ಖಾತ್ರಿ ಪಡಿಸಿದ ನಂತರ, ಕಲಾಪ ಆರಂಭವಾಯಿತು.
ಮಲ್ಯ ನಮ್ಮಲ್ಲೇ ಇಬೇìಕು
ಮಲ್ಯ ವಾಸವಾಗಿರುವ ಲಂಡನ್ ಸಮೀಪದ ಟೆವಿನ್ ಎಂಬ ಪುಟ್ಟ ಹಳ್ಳಿಯ ಜನ ಮಲ್ಯ ಭಾರತಕ್ಕೆ ಹಸ್ತಾಂತರಗೊಳ್ಳಬಾರದೆಂದು ಆಗ್ರಹಿಸಿದ್ದಾರೆ. ಹಲವಾರು ತಿಂಗಳುಗಳಿಂದ ಇಲ್ಲಿ ನೆಲೆಸಿರುವ ಮಲ್ಯ, ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಿದ್ದು ಜನರ ಪ್ರೀತಿ ಗಳಿಸಿದ್ದಾರೆ.