“ಅಂದ್ರೆ ನನ್ನನ್ನು ನೀವು ಆಗ್ಲೆ ಓಡಿಸಿಬಿಟ್ಟಿದ್ದೀರಾ…’
– ದೀಪಾ ಸನ್ನಿಧಿ ಒಂದು ಕ್ಷಣ ಆಶ್ಚರ್ಯಭರಿತಳಾಗಿ ಈ ತರಹ ಕೇಳಿಯೇ ಬಿಟ್ಟರು. ದೀಪಾಗೆ ಆ ಪ್ರಶ್ನೆ ಸ್ವಲ್ಪ ಇರಿಟೇಟ್ ಆದಂತಿತ್ತು. “ಇದು ನಿಮ್ಮ ಕಂಬ್ಯಾಕ್ ಸಿನಿಮಾ ಆಗುತ್ತಾ’ ಎಂಬ ಪ್ರಶ್ನೆಯನ್ನು ದೀಪಾ ಸನ್ನಿಧಿ ಹಾರ್ಟ್‌ಗೇ ತಗೊಂಡು ಬಿಟ್ಟಿದ್ದರು. “ಚಕ್ರವರ್ತಿ’ ಚಿತ್ರ ಬಿಡುಗಡೆಯಾಗಿದೆ. ದರ್ಶನ್ ಜೊತೆ ತುಂಬಾ ಗ್ಯಾಪ್‌ನ ನಂತರ ದೀಪಾ ನಟಿಸಿದ್ದಾರೆ. ಒಮ್ಮೆ ಮಿಂಚಿ ಮರೆಯಾಗಿದ್ದ ದೀಪಾ ಮತ್ತೆ ಗ್ರ್ಯಾಂಡ್ ಎಂಟ್ರಿಗೆ ರೆಡಿಯಾಗಿದ್ದರಿಂದ “ಕಂಬ್ಯಾಕ್’ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ದೀಪಾ ಹೇಳುವಂತೆ ಅವರ ಕೆರಿಯರ್‌ನಲ್ಲಿ ಕಂಬ್ಯಾಕ್ ಪ್ರಶ್ನೆಯೇ ಬರುವುದಿಲ್ಲ. ಚಿತ್ರರಂಗವನ್ನು ಬಿಟ್ಟುಹೋಗಿದ್ದರೇ ತಾನೇ ಕಂಬ್ಯಾಕ್ ಆಗೋದು. ತಾನು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದೆ ಎನ್ನುತ್ತಾರೆ ದೀಪಾ.
“ಒಂದೆರಡು ವರ್ಷ ಗ್ಯಾಪ್ ಆಗಿದ್ದು ನಿಜ. ಹಾಗಂತ ನಾನು ಚಿತ್ರರಂಗವನ್ನು ಬಿಟ್ಟು ಎಲ್ಲೂ ಹೋಗಿರಲಿಲ್ಲ. ತಮಿಳು ಸಿನಿಮಾದಲ್ಲಿ ಬಿಝಿಯಾಗಿದ್ದೆ. “ಲೂಸಿಯಾ’ ಚಿತ್ರದ ಪಾತ್ರವನ್ನು ನಾನು ತುಂಬಾ ಇಷ್ಟಪಟ್ಟಿದ್ದೆ. ಆ ತರಹದ ಕ್ಯಾರೆಕ್ಟರ್ ನನಗೂ ಸಿಗಬೇಕೆಂದು ಆಸೆಪಟ್ಟಿದ್ದೆ. ಅದಕ್ಕೆ ಸರಿಯಾಗಿ ಆ ಚಿತ್ರದ ತಮಿಳು ರೀಮೇಕ್‌ನಿಂದ ಆಫರ್ ಬಂತು. ಆ ಕಡೆ ಹೋಗಿದ್ದೆ. ಆ ಚಿತ್ರ ಮುಗಿಯುವಷ್ಟರಲ್ಲಿ ನನಗೆ “ಚಕ್ರವರ್ತಿ’ ಆಫರ್ ಬಂತು’ ಎಂದು ಗ್ಯಾಪ್ ಆಗಿದ್ದರ ಬಗ್ಗೆ ಹೇಳುತ್ತಾರೆ ದೀಪಾ ಸನ್ನಿಧಿ. ತಮಿಳಿನತ್ತ ಹೋಗಿದ್ದೇನೋ ನಿಜ. ಆದರೆ ಈ ಗ್ಯಾಪ್‌ನಲ್ಲಿ ಕನ್ನಡದಿಂದ ಆಫರ್ ಬರಲೇ ಇಲ್ವಾ ದೀಪಾಗೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ.
ದೀಪಾ ಸನ್ನಿಧಿ ಚಿತ್ರರಂಗಕ್ಕೆ ಬಂದು ಏಳು ವರ್ಷ ಆಗಿದೆ. ಈ ಏಳು ವರ್ಷಗಳಲ್ಲಿ ದೀಪಾ ಮಾಡಿದ್ದು ಕೇವಲ ಒಂಭತ್ತೇ ಸಿನಿಮಾ. ನಾಯಕಿಯರ ವಿಷಯದಲ್ಲ ಇದು ತೀರಾ ಕಡಿಮೆ. ವರ್ಷಕ್ಕೆ ಮೂರ್‍ನಾಲ್ಕು ಸಿನಿಮಾ ಒಪ್ಪಿಕೊಳ್ಳುವ ನಾಯಕಿಯರ ಮಧ್ಯೆ ದೀಪಾ ಸಿನಿಮಾಗಳ ಸಂಖ್ಯೆ ತೀರಾ ಕಡಿಮೆಯೇ. “ನನಗೆ ಒಂದಷ್ಟು ಆಫರ್ ಬಂದಿದ್ದು ಸುಳ್ಳಲ್ಲ. ಆದರೆ ಅವೆಲ್ಲವನ್ನು ಒಪ್ಪಿಕೊಂಡು ಮಾಡಲು ನನಗೆ ಡೇಟ್ಸ್ ಇರಲಿಲ್ಲ. ನನಗೆ ಅಟ್ ಎ ಟೈಮ್ ಕೈ ತುಂಬಾ ಸಿನಿಮಾಗಳಿರಬೇಕು, ಬಿಝಿಯಾಗಿರಬೇಕೆಂಬ ಆಸೆಯಂತೂ ಇಲ್ಲ. ನನ್ನ ಪರ್ಸನಲ್ ಲೈಫ್ಗೂ ಸಾಕಷ್ಟು ಸಮಯಬೇಕಾಗುತ್ತದೆ. ಕೆರಿಯರ್ ಎಂಬ ಕಾರಣಕ್ಕೆ ನಾನು ನನ್ನ ಪರ್ಸನಲ್ ಲೈಫ್ ಅನ್ನು ಮಿಸ್ ಮಾಡಿಕೊಳ್ಳಲು, ಅದನ್ನು ಬದಿಗೊತ್ತಲು ತಯಾರಿಲ್ಲ’ ಎಂದು ತಮ್ಮ ಸಿನಿಮಾ ಆಯ್ಕೆ ಬಗ್ಗೆ ಹೇಳುತ್ತಾರೆ ದೀಪಾ.
ದೀಪಾ ಸನ್ನಿಧಿ “ಚಕ್ರವರ್ತಿ’ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಖುಷಿಯಾಗಿದ್ದಾರೆ. ಜೊತೆಗೆ ಇವರ ಪಾತ್ರವನ್ನು ಜನ ಇಷ್ಟಪಟ್ಟಿದ್ದಾರೆಂಬುದು ಅವರ ಖುಷಿಗೆ ಮತ್ತೂಂದು ಕಾರಣ. “ನಿಮಗೆ ಗೊತ್ತಿರುವಂತೆ ನಾನಿಲ್ಲಿ ಶಾಂತಿ ಎಂಬ ಪಾತ್ರ ಮಾಡಿದ್ದೇನೆ. ಇಡೀ ಸಿನಿಮಾದುದ್ದಕ್ಕೂ ಸಾಗಿ ಬರುವ ಪಾತ್ರ. ಸಾಮಾನ್ಯವಾಗಿ ನಾಯಕಿಯರಿಗೆ ಕಮರ್ಷಿಯಲ್ ಸಿನಿಮಾಗಳಲ್ಲಿ ಹೆಚ್ಚು ಅವಕಾಶಗಳೇ ಇರುವುದಿಲ್ಲ. ಅಲ್ಲಿ ನಾಯಕನಿಗಷ್ಟೇ ಹೆಚ್ಚು ಮಹತ್ವ. ಆದರೆ, “ಚಕ್ರವರ್ತಿ’ಯಲ್ಲಿ ಮಾತ್ರ ನನಗೆ ಸಾಕಷ್ಟು ಅವಕಾಶ ಸಿಕ್ಕಿದೆದೆ. “ಚಕ್ರವರ್ತಿ’ ದೊಡ್ಡ ಕಮರ್ಷಿಯಲ್ ಸಿನಿಮಾ. ದರ್ಶನ್ ಅವರ ಪಾತ್ರ ಹೇಗೆ ಸಾಗಿ ಬರುತ್ತೋ, ಅವರೊಂದಿಗೆ ನನ್ನ ಪಾತ್ರವೂ ಸಾಗಿ ಬಂದಿದೆ. ಈಗ ಚಿತ್ರ, ನನ್ನ ಪಾತ್ರವನ್ನು ಜನ ಇಷ್ಟಪಟ್ಟಿದ್ದಾರೆ’ ಎನ್ನುವುದು ದೀಪಾ ಮಾತು. ಏಳು ವರ್ಷಗಳ ಹಿಂದೆ ದರ್ಶನ್ ನಾಯಕರಾಗಿರುವ “ಸಾರಥಿ’ ಚಿತ್ರದ ಮೂಲಕ ಲಾಂಚ್ ಆದವರು ದೀಪಾ ಸನ್ನಿಧಿ. ಆ ಚಿತ್ರವನ್ನು ದಿನಕರ್ ತೂಗುದೀಪ ನಿರ್ದೇಶಿಸಿದ್ದರು. ಈಗ “ಚಕ್ರವರ್ತಿ’ಯಲ್ಲಿ ದರ್ಶನ್ ಜೊತೆ ದಿನಕರ್ ಕೂಡಾ ನಟಿಸಿದ್ದಾರೆ. “ಚಕ್ರವರ್ತಿ’ ಅನುಭವ ಹೇಗಿತ್ತೆಂದರೆ ಮತ್ತೂಮ್ಮೆ “ಸಾರಥಿ’ ತಂಡದೊಂದಿಗೆ ನಟಿಸಿದಂತಾಯಿತು ಎನ್ನುತ್ತಾರೆ. “ನನಗೆ “ಸಾರಥಿ’ ಚಿತ್ರದಲ್ಲಿ ಕೆಲಸ ಮಾಡಿದಷ್ಟೇ ಖುಷಿಯಾಯ್ತು. ಎಲ್ಲರೂ ಗೊತ್ತಿರುವುದರಿಂದಲೇ, ನಾನು ಇಲ್ಲಿ ಚೆನ್ನಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ನಿರ್ದೇಶಕ ಚಿಂತನ್ ಅವರಿಗೆ ನನ್ನ ಪಾತ್ರದ ಬಗ್ಗೆ ಐಡಿಯಾ ಇತ್ತು. ಹಾಗಾಗಿ, ನನ್ನಿಂದ ತುಂಬಾ ಚೆನ್ನಾಗಿ ಕೆಲಸ ತೆಗೆಸಿಕೊಂಡಿದ್ದಾರೆ’ ಎನ್ನುತ್ತಾರೆ ದೀಪಾ.
ಸದ್ಯ ದೀಪಾ ಸನ್ನಿಧಿ ಇಂಗ್ಲೀಷ್ ಸಾಹಿತ್ಯ ಓದುತ್ತಿದ್ದಾರೆ. ಹಾಗಾಗಿ, ಹೆಚ್ಚು ಸಿನಿಮಾ ಒಪ್ಪಿಕೊಳ್ಳುವ ಆಲೋಚನೆ ಕೂಡಾ ಅವರಿಗಿಲ್ಲ. “ಈಗ ನಾನು “ಗರುಡ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಮಲಯಾಳಂ ಮತ್ತು ತಮಿಳಿನಿಂದಲೂ ಅವಕಾಶ ಬರುತ್ತಿದೆ. ಆದರೆ ಎಜುಕೇಶನ್ ಕೂಡಾ ಜೊತೆಗೆ ನಡೆಯುತ್ತಿರುವುದರಿಂದ ಆ ಕಡೆ ಹೆಚ್ಚು ಗಮನಕೊಟ್ಟಿಲ್ಲ’ ಎನ್ನುವುದು ದೀಪಾ ಮಾತು.