ರಾಯಚೂರು: ಮರಳು ಅಕ್ರಮ ದಂಧೆ ಜಿಲ್ಲೆಯ ಬಡ, ಮಧ್ಯಮ ವರ್ಗದ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಸಾರ್ವಜನಿಕರಿಗಷ್ಟೇ ಅಲ್ಲ ಸರ್ಕಾರಿ ಕೆಲಸ ಕಾರ್ಯಗಳಿಗೂ ಮರಳು ಸಿಗುತ್ತಿಲ್ಲ. ಹೀಗಾಗಿ ಜಿಲ್ಲೆಯ ಬಹುತೇಕ ಕಾಮಗಾರಿಗಳು ವಿಳಂಬಗೊಳ್ಳುತ್ತಿವೆ.
ಮರಳು ಸಾಗಣೆ ಎಂಬುದು ಹಣ ಮಾಡುವ ದಂಧೆಯಾಗಿ ಮಾರ್ಪಟ್ಟಿದ್ದರಿಂದ ಈಗ ಮರಳಿಗೆ ಚಿನ್ನದ ಬೆಲೆ ಬಂದಿದೆ. ಇದು ಜಿಲ್ಲೆಯ ಉಭಯ ನದಿಗಳ ಒಡಲನ್ನು ಖಾಲಿ ಮಾಡುತ್ತಿದ್ದರೆ, ಹಳ್ಳ ಕೊಳ್ಳಗಳಿಗೂ ಉಳಿಗಾಲವಿದಂತಾಗಿದೆ. ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಅಕ್ರಮ ಸಾಗಣೆ ಮಾತ್ರ ಎಗ್ಗಿಲ್ಲದೇ ಸಾಗುತ್ತಿದೆ.
ಮರಳು ವ್ಯಾಪಾರ ಮಾಡಲು ಸರ್ಕಾರವೇ ವೇದಿಕೆ ಕಲ್ಪಿಸಿದೆ. ರಾಜಧನ ಪಾವತಿಸುವ ಮೂಲಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೂಚಿಸಿದ ನಿಯಮ ಪಾಲಿಸಿ ಮರಳು ಸಾಗಣೆ ಮಾಡಬೇಕು. ಆದರೆ, ಪರವಾನಗಿ ಸಿಕ್ಕವರು ನಿಯಮ ಉಲ್ಲಂಘಿಸಿ ಮರಳು ಸಾಗಣೆ ಮಾಡುತ್ತಿದ್ದಾರೆ. ರಾಜಧನ ಪಾವತಿಸಿದ ಬಳಿಕ ಟಿಪ್ಪರ್ ಗೆ 22ರಿಂದ 25 ಸಾವಿರ ರೂ. ದರ ಗದಿಯಾಗಬೇಕು. ದೂರದ ಊರುಗಳಿಗೆ ಸಾಗಿಸಬೇಕಾದರೆ ಹೆಚ್ಚುವರಿ ಹಣ ಪಾವತಿಸಬೇಕು. ಆದರೆ, ನಗರ ವ್ಯಾಪ್ತಿಯಲ್ಲೇ ಒಂದು ಟಿಪ್ಪರ್‌ಗೆ 35ರಿಂದ 40 ಸಾವಿರ ರೂ. ತೆರಬೇಕಿದೆ. ಹೀಗಾಗಿ ಬಡ, ಮಧ್ಯಮ ವರ್ಗದ ಜನ ಮನೆ ಕಟ್ಟಲು ಪರದಾಡುವಂತಾಗಿದೆ.
ಸರ್ಕಾರಿ ಕೆಲಸಗಳಿಗೂ ಸಿಗುತ್ತಿಲ್ಲ:ವಿಪರ್ಯಾಸ ಎಂದರೆ ಜಿಲ್ಲಾಡಳಿತ ಕೈಗೊಂಡ ಕಾಮಗಾರಿಗೂ ಮರಳು ಸಿಗುವುದು ಕಷ್ಟವಾಗಿದೆ. ಇದರಿಂದ ಕಾಮಗಾರಿಗಳು ವಿಳಂಬವಾಗುತ್ತಿವೆ. ಇದೇ ಕಾರಣಕ್ಕೆ ವೈಟಿಪಿಎಸ್‌ನಲ್ಲಿ ಕೆಲವು ದಿನ ಕೆಲಸ ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗೆ ಒಂದು ಬ್ಲಾಕ್ ನೀಡಿದ್ದರಿಂದಾಗಿ ಸಮಸ್ಯೆ ನಿವಾರಣೆಯಾಗಿದೆ. ಆದರೆ, ಕ್ಯಾಶುಟೆಕ್, ಲೋಕೋಪಯೋಗಿ ಇಲಾಖೆ ಸೇರಿ ವಿವಿಧ ಇಲಾಖೆಗಳಿಗೆ ಬೇಡಿಕೆಯಷ್ಟು ಮರಳು ಸಿಗುತ್ತಿಲ್ಲ.
ನಿಯಮಗಳ ಅಡೆತಡೆ: ಮರಳು ಹಂಚಿಕೆ ವಿಚಾರದಲ್ಲಿ ಸರ್ಕಾರ ಹೊಸ ನಿಯಮ ರೂಪಿಸಿದೆ. ಅದರನ್ವಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸರ್ಕಾರಿ ಕೆಲಸಗಳಿಗೆಂದೇ ನದಿಗಳಲ್ಲಿ ಪ್ರತ್ಯೇಕ ಮರಳು ಬ್ಲಾಕ್‌ಗಳನ್ನು ನಿರ್ಮಿಸಿದೆ. ಆದರೆ, ಅವುಗಳನ್ನು ಸರ್ಕಾರಿ ಇಲಾಖೆಗಳೇ ನಿರ್ವಹಿಸಬೇಕು ಎಂಬ ಷರತ್ತು ಹಾಕಿದ್ದರಿಂದ ಸಮಸ್ಯೆಗೆ ಕಾರಣವಾಗಿದೆ. ಮುಂಗಡ ಹಣ ಪಾವತಿಸುವ ಮೂಲಕ ಇಲಾಖೆಗಳು ನಿರ್ವಹಣೆ ಹೊಣೆ ಹೊರಬೇಕು. ಅಲ್ಲದೇ, ನಿಯಮಗಳ ಪಾಲನೆ ಕಡ್ಡಾಯ. ಹೀಗಾಗಿ ಯಾವುದೇ ಇಲಾಖೆಗಳು ಪರವಾನಗಿ ಪಡೆಯಲು ಮುಂದೆ ಬರುತ್ತಿಲ್ಲ. ಇದರಿಂದ ಸರ್ಕಾರಿ ಕೆಲಸಗಳಿಗೆ ಮರಳು ಸಿಗುವುದು ಕಷ್ಟವಾಗಿದೆ.
ಖಾಸಗಿಯವರ ಹಾವಳಿ: ಜಿಲ್ಲೆಯಲ್ಲಿ ಖಾಸಗಿ ಮರಳು ದಂಧೆಕೋರರ ಹಾವಳಿ ಮಿತಿಮೀರಿದೆ. ನದಿಯಲ್ಲಿ ಯಾವುದೇ
ಯಂತ್ರ ಬಳಸಿ ಮರಳು ತುಂಬಬಾರದು ಎಂಬ ನಿಯಮಕ್ಕೆ ಬೆಲೆ ಇಲ್ಲದಾಗಿದೆ. ಅಲ್ಲದೆ, ಅಗತ್ಯಕ್ಕಿಂತ ಹೆಚ್ಚು ಮರಳು ತುಂಬಿದ ಲಾರಿಗಳ ಓಡಾಟ ಜೋರಾಗಿದೆ. ಮೇಲಾಗಿ ಇದರ ಹಿಂದೆ ಜಿಲ್ಲೆಯ ಪ್ರಭಾವಿಗಳ ಕುಮ್ಮಕ್ಕಿದೆ ಎಂಬ ಆರೋಪಗಳಿಗೆ ಕೊರತೆಯಿಲ್ಲ.