ಧಾರವಾಡ: ಬಿಆರ್‌ಟಿಎಸ್ ಯೋಜನೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆ ಹೊಡೆತದಿಂದ ಸೆಂಟ್ರಲ್ ಪಾರ್ಕ್‌ನಲ್ಲಿ ನೀರು ತುಂಬಿ ಹಾನಿ ಆಗಿದ್ದರಿಂದ ಇದೀಗ 15ಕ್ಕೂ ಹೆಚ್ಚು ಜನ ಕೆಲಸವಿಲ್ಲದೇ ಪರದಾಡುವಂತಾಗಿದೆ. ಇಲ್ಲಿನ ಸೆಂಟ್ರಲ್ ಪಾರ್ಕ್‌ನಲ್ಲಿದ್ದ ಓಂ ಸೈಬರ್ ಸೆಂಟರ್ ನಷ್ಟದ ಹಿನ್ನೆಲೆಯಲ್ಲಿ ಮುಚ್ಚಿದ್ದು, ಮಾಲೀಕರಾದ ಭಾಗ್ಯ ಹೊಂಗಲಮಠ ಅವರಲ್ಲದೇ ಈ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದವರು 15 ಜನ ಇದೀಗ ನಿರುದ್ಯೋಗಿಗಳಾಗಿದ್ದಾರೆ. ಒಂದೇ ಒಂದು ಕಂಪ್ಯೂಟರ್‌ನಿಂದ ಪ್ರಾರಂಭವಾದ ಈ ಸಂಸ್ಥೆ ಪ್ರಸ್ತುತ 25 ಜನ ಹೆಣ್ಣು ಮಕ್ಕಳ ಕುಟುಂಬಕ್ಕೆ ಆಸರೆಯಾಗಿ ನಿಂತಿತ್ತು. ಆದರೆ, ಈ ಅನಾಹುತದಿಂದಾಗಿ ಪ್ರಸ್ತುತ ಈ ಸಂಸ್ಥೆ ಬಾಗಿಲು ಮುಚ್ಚಿದೆ.
ಕಳೆದ ಮಾರ್ಚ್ 19ರಂದು ಬಿಆರ್ ಟಿಎಸ್ ರಸ್ತೆ ಕಾಮಗಾರಿ ವೇಳೆ ಅವೈಜ್ಞಾನಿಕ ಚಿಂತನೆಯಿಂದ ಚರಂಡಿ ನೀರಿಗೆ ಸರಿಯಾಗಿ ಮಾರ್ಗ ತೋರಿಸದ ಕಾರಣ ಶಂಕರ ಪ್ಲಾಜಾ ವಾಣಿಜ್ಯ ಮಳಿಗೆಗೆ ಅಪಾರ ಪ್ರಮಾಣದ ನೀರು ನುಗ್ಗಿತ್ತು. ಇದರಿಂದಾಗಿ ವಾಣಿಜ್ಯ ಕಟ್ಟಡದಲ್ಲಿ ಕನಿಷ್ಠ 8 ಅಡಿ ಕೊಳಚೆ ನೀರು ತುಂಬಿ ಅಲ್ಲಿದ್ದ 16 ಮಳಿಗೆಗಳಿಗೆ ಚರಂಡಿ ನೀರು ನುಗ್ಗಿ ಕಂಪ್ಯೂಟರ್, ಝರಾಕ್ಸ್, ಕಲರ ಝರಾಕ್ಸ್, ಕಟ್ಟಿಂಗ್ ಮಶೀನ್, ಕಾರು, ಬೈಕುಗಳಂತಹ ಅನೇಕ ಬೆಲೆಬಾಳುವ ಉಪಕರಣಗಳು ಹಾಳಾಗಿದ್ದು, ಒಟ್ಟು 4 ಕೋಟಿ ರೂ.ಗಳ ಹಾನಿಯನ್ನು ಅಂದಾಜಿಸಲಾಗಿತ್ತು.
ಈ ವಿಷಯವಾಗಿ ಶಾಸಕ ಅರವಿಂದ ಬೆಲ್ಲದ, ಮಾಜಿ ಸಚಿವ ವಿನಯ ಕುಲಕರ್ಣಿ, ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ಬಿಆರ್‌ಟಿಎಸ್ ನಿರ್ದೇಶಕ ಎಂ.ಡಿ. ಹಿರೇಮಠ ಅವರಿಗೆ ಮೌಖಿಕ ಹಾಗೂ ಲಿಖೀತವಾಗಿ ಮನವಿ ಸಲ್ಲಿಸಿದರೂ ಹಾನಿಯನ್ನು ಭರಿಸಿ ಕೊಡಲು ಯಾರಿಂದಲೂ ಈವರೆಗೂ ಸಾಧ್ಯವಾಗಲಿಲ್ಲ. ಬಿಆರ್‌ಟಿಎಸ್‌ನ ನಿರ್ದೇಶಕರು ಈ ವಿಷಯವಾಗಿ ಸಭೆ ನಡೆಸಿ ಸೂಕ್ತ ಪರಿಹಾರ ಕೊಡಿಸುವುದಾಗಿ ಹೇಳಿದ್ದರು. ರಸ್ತೆ ಕಾಮಗಾರಿ ಮಾಡುತ್ತಿರುವ ಕೆಆರ್‌ಡಿಎಸ್‌ಎಲ್ ಸಂಸ್ಥೆಯವರಿಗೆ ನಿರ್ದೇಶನ ನೀಡಿದ್ದರೂ ಯಾವುದೇ ಸ್ಪಷ್ಟ ನಿರ್ಧಾರ ಬರುತ್ತಿಲ್ಲ ಎಂಬುದು ಭಾಗ್ಯ ಹೊಂಗಲಮಠದ ಅವರ ಅಳಲು.
ಬಿಆರ್‌ಟಿಎಸ್ ಸಂಸ್ಥೆಯವರು ಸದರಿ ವಾಣಿಜ್ಯ ಕಟ್ಟಡದಲ್ಲಿರುವ ಎಲ್ಲ ಅಂಗಡಿಕಾರರಿಗೆ ತಮ್ಮ ನಷ್ಟವನ್ನು ಪಟ್ಟಿಮಾಡಿ ಕೊಡಿ ಎಂದು ತಿಳಿಸಿ ಅದನ್ನು ಸಬ್ ಕಾಂಟ್ರಾಕ್ಟರ್ ಆರ್‌ಎನ್‌ಎಸ್ ಕಂಪನಿಗೆ ಕೊಟ್ಟಿದ್ದು ಅವರು ತಮ್ಮ ಸಂಸ್ಥೆಯ ವಿಮೆ ಇರುತ್ತದೆ. ಅದರಿಂದ ತಮಗೆ ಪರಿಹಾರ ಕೊಡುವುದಾಗಿಯೂ ಹೇಳಿಕೊಂಡಿತ್ತು. ಆದರೆ ಐದು ತಿಂಗಳಾದರೂ ಪರಿಹಾರವಿಲ್ಲ. ಅದರ ಬಗ್ಗೆ ಮಾತನಾಡುವುದಕ್ಕೂ ಆರ್‌ಎನ್.ಎಸ್ ಸಂಸ್ಥೆಯವರು ತಯಾರಿಲ್ಲ. ಈಗಲಾದರೂ ಬಿಆರ್‌ಟಿಎಸ್‌ನಿಂದ ಪರಿಹಾರ ನೀಡಬೇಕು ಎಂದು ಭಾಗ್ಯ ಹೊಂಗಲಮಠ ಆಗ್ರಹಿಸಿದ್ದಾರೆ.