ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನಡೆದಿರುವ ಮುಖ್ಯ ಚಳವಳಿಗಳಲ್ಲಿ ಒಂದಾದ ನವ್ಯ ಚಳವಳಿಯ ಬೆನ್ನಿಗೇ ಎನ್ನುವಂತೆ ಕಾಣಿಸಿಕೊಂಡ ಅಸಂಗತವಾದದ ಪ್ರೇರಣೆಯಿಂದ ಸೃಷ್ಟಿಯಾದ ಸಾಹಿತ್ಯಕೃತಿಗಳ, ಮುಖ್ಯವಾಗಿ ಸಣ್ಣಕತೆಗಳ ಧಾರೆಯೂ ಗಮನಾರ್ಹವಾದುದು.
ಅಸಂಗತವಾದದ ಒಲವು-ನಿಲುವುಗಳು ಎಂ.ಎಸ್.ಕೆ. ಪ್ರಭು, ಸುಮತೀಂದ್ರ ನಾಡಿಗ, ಚಂದ್ರಶೇಖರ ಪಾಟೀಲ ಮುಂತಾದವರ ಕೃತಿಗಳಲ್ಲಿ ಬಿಂಬಿತವಾಗಿವೆ; ಇದೇ ರೀತಿ ಕೆ. ಟಿ. ಗಟ್ಟಿ, ತಿರುಮಲೇಶ್, ಶಾಂತಾರಾಮ ಸೋಮಯಾಜಿ ಮುಂತಾದವರ ಅಸಂಗತ ಛಾಯೆಯ ಕಥನ ವ್ಯವಸಾಯ ಕನ್ನಡದ ವೈವಿಧ್ಯಮಯ ಬೆಳಸಿಗೆ ತನ್ನದೇ ಕೊಡುಗೆಯನ್ನು ನೀಡಿದೆ.
ಈಗ ಹೊರಬಂದಿರುವ ಎಸ್. ಶೇಷಾದ್ರಿ ಕಿನಾರ ಅವರ ಅವತಾರ ಸಂಕಲನದ 19 ಕಥೆಗಳೂ ಅಸಂಗತ ಕಥನಗಾರಿಕೆಯ ಲಕ್ಷಣಗಳನ್ನು ಸಮರ್ಥವಾಗಿ ಬಿಂಬಿಸುವ ರಚನೆಗಳಾಗಿವೆ. ಜತೆಗೆ, ಈ ಕಥೆಗಳಲ್ಲಿ ಕಂಡುಬರುವ ಕುತೂಹಲಕಾರಿ ಅನಿರೀಕ್ಷಿತ ಸನ್ನಿವೇಶಗಳು, ಸಾಂಕೇತಿಕ ಅರ್ಥಗಳನ್ನು ಸೂಚಿಸುವ ವಿಪುಲವಾದ ವಿವರಗಳು, ಕಾವ್ಯದ ಸಾಲುಗಳಂತೆ ಅರ್ಥ ಸಂದಿಗ್ಧತೆಗೆ ಹಾದಿಮಾಡಿಕೊಡುವ ಸಂಭಾಷಣೆಯ ತುಣುಕುಗಳು, ಸಂಕ್ಷೇಪ ಗುಣವೇ ಪ್ರಧಾನವಾದ ಚುರುಕಿನ ವಾಕ್ಯಗಳು ಇವೆಲ್ಲವೂ ಶೇಷಾದ್ರಿಯವರ ಬರವಣಿಗೆಯ ಆಕರ್ಷಣೆಗೆ ಕಾರಣವಾಗಿವೆ. ಗದ್ಯದ ವಾಕ್ಯಗಳು ಸಂಕ್ಷೇಪ ಗುಣದಿಂದ ಕೂಡಿದ್ದರೆ ಅವುಗಳಿಗೆ ಕಾವ್ಯದ ಸಾಲುಗಳ ಮೆರುಗು ದಕ್ಕುತ್ತದೆ; ನಿರೂಪಣೆ ಯೆಂಬುದು ನಿಜವಾದ ಅರ್ಥದಲ್ಲಿ “ವಚೋವಿಲಾಸ’ವೆನಿಸುತ್ತದೆ; ಕಥೆಗಳು ಹಲವು ರೂಪಕಾರ್ಥ ಸಮನ್ವಿತವಾಗಿ ಬರವಣಿಗೆ ತನ್ನಿಂದ ತಾನೇ “ಕೊಲಾಜ್’ ಆಗಿಬಿಡುತ್ತದೆ.
ಇಲ್ಲಿನ ಅವತಾರ, ಪಾತ್ರ, ನಾನೆಂಬೋದು ನಾನಲ್ಲ, ಟೋಪಿ ಆಟ, ಹೂವೊಳು ಹಾವೇ ಮುಂತಾದ ರಚನೆಗಳಲ್ಲಿ ಕಥೆಗಾರ ಶೇಷಾದ್ರಿ ಕೇವಲ ಕಥೆಗಳನ್ನು ಬರೆದು ಮುಗಿಸಿರುವ ಲೇಖಕನಾಗಿ ಕಾಣಿಸದೆ ಕಥೆಯನ್ನು ಇನ್ನೂ ಹೇಳುತ್ತಲೇ ಹೋಗುತ್ತಿದ್ದಾರೆಂಬಂಥ ಅನುಭವ ಓದುಗರಿಗೆ ಆಗುತ್ತದೆ ಮೇಲೆ ಹೇಳಿದ ಅಸಂಗತ ಸಂವೇದನೆಯ ಕಥನಗಾರಿಕೆಯ ಸಾಧ್ಯತೆಯನ್ನು ಶೇಷಾದ್ರಿಯವರು ತೋರಿಸಿಕೊಡುತ್ತಲೇ ಅದನ್ನು ಮೀರಿ ನಿಂತಿರುವುದು ಹೀಗೆ. ಇಂಥ ಯಶಸ್ಸನ್ನು ಸಾಧಿಸಿರುವುದಕ್ಕಾಗಿ ಅವರನ್ನು ಅಭಿನಂದಿಸಬೇಕಾಗಿದೆ.
– ಜಕಾ