Advertisement

ಬೆಳಕಿನ ಅನಂತರ ಕದ್ರಿ ಪಾರ್ಕ್‌ನಲ್ಲಿ ಕೈಕೊಟ್ಟ ಮೈಕ್‌ !

10:58 AM Dec 26, 2018 | |

ಮಹಾನಗರ : ಕರಾವಳಿ ಉತ್ಸವದಂಗವಾಗಿ ಸೋಮವಾರ ಕರಾವಳಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವಿದ್ಯುತ್‌ ಕೈಕೊಟ್ಟರೆ, ಮಂಗಳವಾರ ಸಂಜೆ ಮತ್ತೆ ಕದ್ರಿ ಪಾರ್ಕ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಸಮಸ್ಯೆಯಿಂದಾಗಿ ಕಲಾವಿದರು, ಪ್ರೇಕ್ಷಕರು ಕಿರಿಕಿರಿ ಅನುಭವಿಸಿದ್ದಾರೆ. ಕರಾವಳಿ ಉತ್ಸವ ಉದ್ಘಾಟನೆಗೊಂಡು ಐದು ದಿನ ಕಳೆದಿದ್ದು, ಮೆರುಗು ನೀಡಬೇಕಿದ್ದ ಉತ್ಸವಕ್ಕೆ ಈ ಬಾರಿ ವಿಘ್ನಗಳೇ ಎದುರಾಗುತ್ತಿರುವುದು ವಿಪರ್ಯಾಸ.

Advertisement

ವೇದಿಕೆ ಮೇಲೇರಿ ಕುಳಿತ ಕಲಾಸಕ್ತರು !
ಕದ್ರಿ ಪಾರ್ಕ್‌ ವೇದಿಕೆಯಲ್ಲಿ ಮಂಗಳವಾರ ನಡೆದ ವಿದ್ವಾನ್‌ ಎಸ್‌. ಶಂಕರ್‌ ಅವರ ಕರ್ನಾಟಿಕ್‌ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಮೈಕ್‌ ಕೈಕೊಟ್ಟಿತ್ತು. ಇದರಿಂದಾಗಿ ಸೇರಿದ್ದ ಪ್ರೇಕ್ಷಕರಿಗೆ ನಿರಾಸೆ ಉಂಟಾಯಿತು. ಕಾರ್ಯಕ್ರಮದ ಆಯೋಜಕರು ಧ್ವನಿವರ್ಧಕವನ್ನು ಸರಿಪಡಿಸುವುದಕ್ಕೆ ಎಷ್ಟೇ ಪ್ರಯತ್ನ ಪಟ್ಟಿದ್ದರೂ ತತ್‌ಕ್ಷಣಕ್ಕೆ ಅದು ಸರಿ ಹೋಗಿರಲಿಲ್ಲ. ಹೀಗಾಗಿ, ವೇದಿಕೆಯಲ್ಲಿದ್ದ ಸಂಗೀತ ಕಲಾವಿದರು, ಧ್ವನಿವರ್ಧಕದ ಸಹಾಯವಿಲ್ಲದೆ, ಹಾಡುಗಾರಿಕೆಯನ್ನು ಮುಂದುವರಿಸಿದ್ದರು. ಇತ್ತ ಪ್ರೇಕ್ಷಕರಿಗೂ ಮೈಕ್‌ನ ಕೊರತೆಯಿಂದಾಗಿ ಹಾಡುಗಾರಿಕೆ ಕೇಳಿಸುತ್ತಿರಲಿಲ್ಲ. ಕೊನೆಗೆ ಕೆಲವು ಕಲಾಸಕ್ತರು ವೇದಿಕೆಯ ಮೇಲೆಯೇ ಒಂದು ಬದಿಯಲ್ಲಿ ಬಂದು ಕುಳಿತುಕೊಂಡು ಸಂಗೀತ ಕೇಳುತ್ತಿದ್ದ ದೃಶ್ಯ ಕಂಡುಬಂತು. ಈ ರೀತಿ ಸುಮಾರು ಅರ್ಧತಾಸು ಮೈಕ್‌ ಇಲ್ಲದೆ ಸಂಗೀತ ಕಲಾವಿದರು ಹಾಡುಗಾರಿಕೆ ನಡೆಸಿದ್ದು, ಅನಂತರ ಸಂಘಟಕರು ಧ್ವನಿವರ್ಧಕ ಸರಿಪಡಿಸಿದರು.

ಬೈಕ್‌ ಹೆಡ್‌ಲೈಟ್‌, ಮೊಬೈಲ್‌ ಟಾರ್ಚ್‌
ಸೋಮವಾರ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಮೈಮ್‌ ರಾಮ್‌ ದಾಸ್‌ ಮತ್ತು ತಂಡದವರಿಂದ ಜಾನಪದ ಹಾಡಿನ ಗಾಯನವು ನಡೆಯುತ್ತಿತ್ತು. ಅನೇಕ ಮಂದಿ ಪ್ರೇಕ್ಷಕರು ಸಂಗೀತ ವೀಕ್ಷಿಸುತ್ತಿದ್ದರು. ಇದೇ ವೇಳೆ ಜನರೇಟರ್‌ ಕೈಕೊಟ್ಟ ಕಾರಣದಿಂದಾಗಿ ಸುಮಾರು 20 ನಿಮಿಷಗಳ ಕಾಲ ವೇದಿಕೆಯಲ್ಲಿ ವಿದ್ಯುತ್‌ ವ್ಯವಸ್ಥೆ ಇರಲಿಲ್ಲ. ಆ ವೇಳೆ ತಂಡದ ಸದಸ್ಯರೊಬ್ಬರು ಬೈಕ್‌ ಹೆಡ್‌ಲೈಟ್‌ ಮತ್ತು ಮೊಬೈಲ್‌ ಟಾರ್ಚ್‌ ವೇದಿಕೆಯ ಮೇಲೆ ಬೀರಿದ್ದರು. ಬಳಿಕ ಪ್ರೇಕ್ಷಕರ ಒತ್ತಾಯದ ಮೇರೆಗೆ ಸಂಗೀತ ಕಾರ್ಯಕ್ರಮ ಆರಂಭಗೊಂಡಿತ್ತು. ಕಲಾ ವಿದರು ಸುಮಾರು ಸುಮಾರು ಆರೇಳು ಹಾಡುಗಳನ್ನು ವಿದ್ಯುತ್‌ ಸಂಪರ್ಕ ವಿಲ್ಲದೆಯೇ ಹಾಡಿದರು. ಜನರೇಟರ್‌ ಸರಿಪಡಿಸಿದ ಬಳಿಕ ವೇದಿಕೆಯಲ್ಲಿ ಕಾರ್ಯಕ್ರಮ ಸುಗಮವಾಗಿ ಸಾಗಿತ್ತು.

ಇನ್ನು, ಕಾರ್ಯಕ್ರಮದ ಮೊದಲ ದಿನವೇ ಉದ್ಘಾಟನ ಸಮಾರಂಭ ವೇದಿಕೆಯಲ್ಲಿ ಪ್ರತಿಭಟನೆ ನಡೆದಿತ್ತು. ಎಂಆರ್‌ಪಿಎಲ್‌ ಹೋರಾಟಗಾರರ ತಂಡವೊಂದು ‘ಕರಾವಳಿ ಉಳಿಸಿ ಎಂಆರ್‌ಪಿಎಲ್‌ ವಿಸ್ತರಣೆ ನಿಲ್ಲಿಸಿ’ ಎಂಬ ಪೋಸ್ಟರ್‌ ಪ್ರದರ್ಶಿಸಿ ಗೊಂದಲ ಸೃಷ್ಟಿಸಲು ಪ್ರಯತ್ನಿಸಿತ್ತು. ಇನ್ನು ಈ ಬಾರಿ, ಉತ್ಸವದ ಪ್ರಯುಕ್ತ ನಡೆಯುವ ವಸ್ತು ಪ್ರದರ್ಶನದಲ್ಲಿಯೂ ಕೆಲವು ಮಳಿಗೆಗಳು ಆರಂಭವಾಗದೆ ಸಾರ್ವಜನಿಕರಲ್ಲಿ ನಿರಾಶೆ ಮೂಡಿಸಿತ್ತು.

ತತ್‌ಕ್ಷಣ ಎಲ್ಲ ಮಳಿಗೆ ತೆರೆಯಿರಿ
ಕರಾವಳಿ ಉತ್ಸವ ಮೈದಾನದಲ್ಲಿ ಕಾರಣಾಂತರಗಳಿಂದ ಕೆಲವೊಂದು ವಸ್ತು ಪ್ರದರ್ಶನದ ಮಳಿಗೆಗಳು ತೆರದಿರಲಿಲ್ಲ. ಈ ಬಗ್ಗೆ ಸಂಬಂಧಪಟ್ಟವರ ಜತೆ ಈಗಾಗಲೇ ಮಾತನಾಡಿದ್ದು, ತತ್‌ಕ್ಷಣ ಎಲ್ಲ ಮಳಿಗೆಗಳನ್ನು ಗ್ರಾಹಕರ ಉಪಯೋಗಕ್ಕೆ ತೆರೆಯುವಂತೆ ತಿಳಿಸಿದ್ದೇನೆ ಎಂದು ಮನಪಾ ಮೇಯರ್‌ ಭಾಸ್ಕರ್‌ ಕೆ. ತಿಳಿಸಿದ್ದಾರೆ.

Advertisement

 ಸರಿಪಡಿಸಲು ಸೂಚಿಸಿರುವೆ
ಕರಾವಳಿ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುತ್ತಿಗೆದಾರರಿಂದ ಉಂಟಾಗಿರುವ ತಾಂತ್ರಿಕ ಸಮಸ್ಯೆ ನನ್ನ ಗಮನಕ್ಕೂ ಬಂದಿದೆ. ಅದನ್ನು ಸರಿಪಡಿಸುವಂತೆ ಅವರಿಗೆ ಸೂಚಿಸಲಾಗಿದೆ.
– ಯು.ಟಿ. ಖಾದರ್‌,
ಜಿಲ್ಲಾ ಉಸ್ತುವಾರಿ ಸಚಿವ 

Advertisement

Udayavani is now on Telegram. Click here to join our channel and stay updated with the latest news.

Next