Advertisement

ಸ್ಟೇಟ್  ಮರಿಟೈಮ್‌ ಬೋರ್ಡ್‌ಗೆ ಸಿಗದ ಚಾಲನೆ

05:02 PM Oct 11, 2018 | |

ಕಾರವಾರ: ಕರ್ನಾಟಕದಲ್ಲಿ ಸ್ಟೇಟ್‌ ಮರಿಟೈಮ್‌ ಬೋರ್ಡ್‌ ಇರದ ಕಾರಣ ಕಾರವಾರ ಬಂದರು ಇಲಾಖೆ ಹಾಗೂ ಐಎನ್‌ಎಸ್‌ ಕದಂಬದಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕದ ನೌಕರರಿಗೆ ಬಡ್ತಿಯೇ ಸಿಗದಂತಾಗಿದೆ.

Advertisement

ಮರೀನ್‌ ಎಂಜಿನಿಯರಿಂಗ್‌ ಪರೀಕ್ಷೆ (ನಾವಿಕ ಶಿಲ್ಪಿ ಪರೀಕ್ಷೆ) ಎದುರಿಸಲು ಮಹಾರಾಷ್ಟ್ರ(ಮುಂಬೈ) ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮರೀನ್‌ ಎಂಜಿನಿಯರಿಂಗ್‌ ಪರೀಕ್ಷೆ ಬರೆಯಲು ಕರ್ನಾಟಕದ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುತ್ತಿಲ್ಲ. ಹಾಗಾಗಿ ನೇವಿ ಮತ್ತು ಬಂದರು ಇಲಾಖೆಯಲ್ಲಿ ಎಂಜಿನ್‌ ಡ್ರೈವರ್‌-3 ಮತ್ತು ಮಾಸ್ಟರ್‌ ಗ್ರೇಡ್‌-3ರಲ್ಲಿ ಕೆಲಸ ಮಾಡುವ ನೌಕರರು ಶಿಪ್‌ ಮತ್ತು ವೆಜಲ್ಸ್‌, ಡಾಕ್‌ ಯಾರ್ಡ್‌ಗಳಲ್ಲಿ ಕೆಲಸ ಮಾಡುತ್ತಾ ಸೇರಿದ ಹುದ್ದೆಯಲ್ಲೇ ಉಳಿಯ ಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಮಾಸ್ಟರ್‌ ಗ್ರೇಡ್‌ 1-2 ಹಾಗೂ ಡ್ರೈವರ್‌ 1-2 ಹುದ್ದೆಗಳಿಗೆ ಬಡ್ತಿ ಪಡೆಯಲು ಮರೀನ್‌ ಎಂಜಿನಿಯರಿಂಗ್‌ ಪರೀಕ್ಷೆ ಪಾಸ್‌ ಮಾಡುವುದು ಕಡ್ಡಾಯ. ಆದರೆ ಈ ಪರೀಕ್ಷೆ ಬರೆಯಲು ಕರ್ನಾಟಕದಲ್ಲಿ ಅವಕಾಶವೇ ಇಲ್ಲ. ಡೈರೆಕ್ಟರ್‌ ಜನರಲ್‌ ಶಿಪ್ಪಿಂಗ್‌ ಆಫ್‌ ಇಂಡಿಯಾದವರು ಮರಿಟೈಮ್‌ ಬೋರ್ಡ್‌ ಇರುವ ರಾಜ್ಯಗಳಲ್ಲಿ ನಾವಿಕ ಶಿಲ್ಪಿ ಪರೀಕ್ಷೆ ಏರ್ಪಡಿಸುತ್ತದೆ.

ರಾಜ್ಯದಲ್ಲಿ ಮರಿಟೈಮ್‌ ಸ್ಥಾಪನೆಗೆ ಹತ್ತು ವರ್ಷದ ಹಿಂದೆಯೇ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು. ನವ ಮಂಗಳೂರು ಬಂದರು ಹೊರತುಪಡಿಸಿ ಸ್ಟೇಟ್‌ ಮರಿಟೈಮ್‌ ಬೋರ್ಡ್‌ ಸ್ಥಾಪನೆಯಾದಲ್ಲಿ ಕರ್ನಾಟಕದ ಎಲ್ಲಾ ವಾಣಿಜ್ಯ ಬಂದರುಗಳು ಇದರಡಿ ಕೆಲಸ ಮಾಡುತ್ತವೆ. ಬಂದರುಗಳ ಅಭಿವೃದ್ಧಿಗೆ ಸಹ ತುರ್ತು ನಿರ್ಣಯಗಳು ಹಾಗೂ ಖಾಸಗಿ ಸಹಭಾಗಿತ್ವದ ಅಭಿವೃದ್ಧಿಗೂ ದಾರಿಗಳು ತೆರೆದುಕೊಳ್ಳುತ್ತವೆ. 

ವಾಣಿಜ್ಯ ಬಂದರುಗಳ ನಿರ್ವಹಣೆಗೆ ಸರ್ಕಾರದ ವತಿಯಿಂದ ಸಿಇಒ (ಮುಖ್ಯ ಕಾರ್ಯನಿರ್ವಹಣಾಧಿಕಾರಿ) ನೇಮಕವಾಗುತ್ತದೆ. ಅಲ್ಲದೇ ಬೋರ್ಡ್‌ನ ಸದಸ್ಯರು ಬಂದರುಗಳ ಅಭಿವೃದ್ಧಿಗೆ ನಿರ್ಣಯಗಳನ್ನು ಮಾಡುವ ಸಾಧ್ಯತೆಗಳು ಸಹ ತೆರೆದುಕೊಳ್ಳುತ್ತವೆ.

ಕಳೆದ ವರ್ಷ ಅನುಮತಿ ಸಿಕ್ಕಿದೆ: ಕರ್ನಾಟಕ ಸ್ಟೇಟ್‌ ಮರಿಟೈಮ್‌ ಬೋರ್ಡ್‌ ಸ್ಥಾಪನೆಗೆ 2017, ಆಗಸ್ಟ್ ನಲ್ಲಿ ಅನುಮತಿ ಸಿಕ್ಕಿದೆ. ಮರಿಟೈಮ್‌ ಬೋರ್ಡ್‌ ಸ್ಥಾಪಿಸಲು ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಬಂದರು ಇಲಾಖೆ ಮರಿಟೈಮ್‌ ಬೋರ್ಡ್‌ ಸಂಬಂಧ ನೀತಿ, ನಿಯಮಗಳನ್ನು ರೂಪಿಸುತ್ತಿದ್ದು, ಅದು ಇನ್ನೂ ರಾಜ್ಯ ಸರ್ಕಾರದ ಕೈ ಸೇರಬೇಕಿದೆ. ನಂತರ ಅದನ್ನು ಸರ್ಕಾರ, ಬಂದರು ಒಳನಾಡು ಜಲಸಾರಿಗೆ ಸಚಿವಾಲಯ ಸಾರ್ವಜನಿಕ ಅಹವಾಲು ಕೇಳಿ, ಆಕ್ಷೇಪಗಳನ್ನು ಆಹ್ವಾನಿಸಿ, ನಂತರ ಅಂತಿಮ ತೀರ್ಮಾನಕ್ಕೆ ಬರಬೇಕಿದೆ. ಅಂತಿಮವಾಗಿ ಸ್ಟೇಟ್‌ ಮರಿಟೈಮ್‌ ಬೋರ್ಡ್‌ ಸ್ಥಾಪನೆ ಸಂಬಂಧ ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು, ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಬೇಕಾಗುತ್ತದೆ. ಇಷ್ಟೆಲ್ಲಾ ಪ್ರಕ್ರಿಯೆಗಳು ವೇಗವಾಗಿ ನಡೆದಲ್ಲಿ ಕರ್ನಾಟಕ ಸ್ಟೇಟ್‌ ಮರಿಟೈಮ್‌ ಬೋರ್ಡ್‌ ಅಸ್ತಿತ್ವಕ್ಕೆ ಬರಲಿದೆ.

Advertisement

ಮರಿಟೈಮ್‌ ಬೋರ್ಡ್‌ ಸ್ಥಾಪನೆಯಿಂದ ಬಂದರಿನಲ್ಲಿ ರಾಜಕೀಯ ಹಸ್ತಕ್ಷೇಪ ಕಡಿಮೆಯಾಗುತ್ತದೆ. ಸ್ಥಳೀಯ ಶಾಸಕರು ಬಂದರು ಸಲಹಾ ಸಮಿತಿಯಲ್ಲಿ ಇದ್ದು, ಅವರು ಅಭಿವೃದ್ಧಿಗೆ ಮಾರ್ಗದರ್ಶಕರಾಗಿ ಮತ್ತು ಸಲಹೆಗಾರರಾಗಿ ಮಾತ್ರ ಇರುತ್ತಾರೆ.

ನಾವಿಕ ಶಿಲ್ಪಿ ತರಬೇತಿ ಕೇಂದ್ರ: ಸ್ಟೇಟ್‌ ಮರೀನ್‌ ಬೋರ್ಡ್‌ ಸ್ಥಾಪನೆಯಿಂದ ಕಡಲ ಸಂಬಂಧಿ ವಿಷಯಗಳಲ್ಲಿ ತರಬೇತಿ ಮತ್ತು ಪರೀಕ್ಷೆಗಳನ್ನು ನಡೆಸಬಹುದಾಗಿದೆ. ಡೈರೆಕ್ಟರ್‌ ಜನರಲ್‌ ಶಿಪ್ಪಿಂಗ್‌ ಆಫ್‌ ಇಂಡಿಯಾ ಮಾರ್ಗದರ್ಶನದ ಜೊತೆ ಹಲವು ಸೌಲಭ್ಯಗಳು ಕಾರವಾರಕ್ಕೆ ಲಭ್ಯವಾಗುತ್ತವೆ. ಅಷ್ಟೇ ಅಲ್ಲದೇ ಮರೀನ್‌ ಎಂಜಿನಿಯರಿಂಗ್‌ ಪರೀಕ್ಷೆಗಳನ್ನು ಕಾರವಾರದಲ್ಲೇ ನಡೆಸಲು ಅವಕಾಶ ಸಹ ಸಿಗುತ್ತದೆ. ಇದರಿಂದ ಸ್ಥಳೀಯರಿಗೆ ಬಂದರು ಇಲಾಖೆ ಸೇರಿದಂತೆ, ಇಂಡಿಯನ್‌ ನೇವಿಯಲ್ಲಿ ಅವಕಾಶಗಳು ಹೆಚ್ಚಲಿದ್ದು, ಬಡ್ತಿ ವಿಷಯಗಳಲ್ಲಿ ಸಹ ನೆರವಾಗಲಿದೆ.

ಹೊರ ರಾಜ್ಯಗಳಲ್ಲಿ ಹೇಗೆ?
ಮಹಾರಾಷ್ಟ್ರದಲ್ಲಿ ಅಲ್ಲಿನ ಸ್ಟೇಟ್‌ ಮರಿಟೈಮ್‌ ಬೋರ್ಡ್‌ನವರು ನಾವಿಕ ಶಿಲ್ಪಿ ಪರೀಕ್ಷೆಯನ್ನು ಬೆಸ್ತ್ ಹೆಸರಲ್ಲಿ ನಡೆಸುತ್ತಾರೆ. ಅಲ್ಲಿನ ದಿ ಸೀಮನ್‌ ಅಸೋಸಿಯೇಶನ್‌ ಆಫ್‌ ಮುಂಬೈ ನಾವಿಕ ಶಿಲ್ಪಿ ಪರೀಕ್ಷೆಗೆ ತರಬೇತಿ ನೀಡುತ್ತಾರೆ. ಇದೇ ಮಾದರಿಯಲ್ಲಿ ನಾವಿಕ ಶಿಲ್ಪಿ (ಮರೀನ್‌ ಎಂಜಿನಿಯರಿಂಗ್‌) ಪರೀಕ್ಷೆಗಳು ಗುಜರಾತ್‌, ಒಡಿಶಾ, ಆಂಧ್ರ, ಪಶ್ಚಿಮ ಬಂಗಾಳಗಳಲ್ಲಿ ನಡೆಯುತ್ತವೆ. ಈ ರಾಜ್ಯಗಳಲ್ಲಿ ಬಹಳ ಹಿಂದೆಯೇ ಮರೀಟೈಮ್‌ ಬೋರ್ಡಗಳು ಸ್ಥಾಪನೆಯಾಗಿವೆ.

ಸ್ಟೇಟ್‌ ಮರಿಟೈಮ್‌ ಬೋರ್ಡ್‌ ಸ್ಥಾಪನೆಗೆ 2017 ಆಗಸ್ಟ್‌ನಲ್ಲಿ ರಾಷ್ಟ್ರಪತಿಗಳ ಅನುಮತಿ ದೊರೆತಿದೆ. ಇದು ಅಸ್ತಿತ್ವಕ್ಕೆ ಬಂದಲ್ಲಿ ರಾಜ್ಯದಲ್ಲಿ ಬಂದರುಗಳ ಅಭಿವೃದ್ಧಿ ಜೊತೆಗೆ ತಾಂತ್ರಿಕ ಕೌಶಲ್ಯ ತರಬೇತಿ ನೀಡಲು ಅನುಕೂಲವಾಗುತ್ತದೆ.
 ಕ್ಯಾಪ್ಟನ್‌ ಸಿ.ಸ್ವಾಮಿ.
 ನಿರ್ದೇಶಕರು. ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ. 

„ನಾಗರಾಜ ಹರಪನಹಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next