Advertisement

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

04:14 PM Apr 28, 2024 | Team Udayavani |

ಶಿರಸಿ: ‘500 ವರ್ಷಗಳ ಕನಸಾದ ರಾಮ ಮಂದಿರ ನಿರ್ಮಾಣಕ್ಕಾಗಿ ಸ್ವಾತಂತ್ರ್ಯ ಸಿಕ್ಕಿದ ಮರುದಿನವೇ ನಿರ್ಣಯ ಕೈಗೊಳ್ಳಬೇಕಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಆ ನಿರ್ಧಾರ ಕೈಗೊಳ್ಳಲು 56 ಇಂಚಿನ ಎದೆ ಬೇಕಾಗಿತ್ತು’ ಎಂದು ಪ್ರಧಾನಿ ಮೋದಿ ವಿಪಕ್ಷಗಳ ವಿರುದ್ಧ ಕಿಡಿ ಕಾರಿದರು.

Advertisement

ಭಾನುವಾರ ಶಿರಸಿಯಲ್ಲಿ ನಡೆದ ಬೃಹತ್ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ‘500 ವರ್ಷಗಳ ಕನಸು ನಿಮ್ಮ ಮತದ ಶಕ್ತಿಯಿಂದ ಸಾಧ್ಯವಾಯಿತು. ರಾಮ ಮಂದಿರ ಪುಣ್ಯ, ಪವಿತ್ರ ಕಾರ್ಯ. ಪುಣ್ಯದ ಹಕ್ಕುದಾರ ಯಾರು? ಮತ ನೀಡಿ ಶಕ್ತಿಯುತ ಸರ್ಕಾರ ನೀಡಿದ ನೀವೇ ಪುಣ್ಯವಂತರು’ಎಂದರು.

ಮಂದಿರ ನಿರ್ಮಾಣವಾಗದಂತೆ ವಿಕೃತ ಮನಸ್ಥಿತಿಯವರೆಲ್ಲ ಒಂದಾಗಿದ್ದರು. ಕಾಂಗ್ರೆಸ್ ಪಕ್ಷ ಮತ್ತು ಎಲ್ಲ ಮಿತ್ರ ಪಕ್ಷಗಳು ಮಂದಿರ ನಿರ್ಮಾಣದ ವಿರುದ್ಧ ಕೋರ್ಟ್ ನಲ್ಲೂ ಹೋರಾಟ ನಡೆಸಿದರು. ಎಲ್ಲವನ್ನೂ ಮರೆತು ಆಮಂತ್ರಣ ನೀಡಿದರೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಬಹಿಷ್ಕರಿಸಿ ರಾಮಲಲ್ಲಾನಿಗೆ ಅವಮಾನ ಮಾಡಿದರು. ಅವರನ್ನು ನೀವು ಬಹಿಷ್ಕರಿಸಿ ಎಂದು ಮನವಿ ಮಾಡಿದರು.

‘ರಾಮ ಮಂದಿರದ ವಿರುದ್ಧ ತಲೆಮಾರುಗಳಿಂದ ಹೋರಾಟ ನಡೆಸಿದ್ದ ಅನ್ಸಾರಿ ಕುಟುಂಬಕ್ಕೂ ಆಮಂತ್ರಣ ನೀಡಲಾಗಿತ್ತು.ಮುಸಲ್ಮಾನರಾದರೂ ಅವರು ಕೂಡ ಎಲ್ಲವನ್ನು ಮರೆತು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು’ ಎಂದರು.

‘ದೇಶದ ಸುಪ್ರೀಂ ಕೋರ್ಟ್ ನಿರ್ಣಯದ ಬಳಿಕ ದೇಶದ ಕೋಟಿ ಕೋಟಿ ರಾಮ ಭಕ್ತರು ಒಂದಾಗಿ ಭವ್ಯ ಮಂದಿರ ನಿರ್ಮಾಣ ಮಾಡಲಾಗಿದೆ.ಕೆಲವರು ಐದು ರೂಪಾಯಿ, ಕೆಲವರು ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದಾರೆ. ಮಂದಿರ ನಿರ್ಮಾಣಕ್ಕೆ ಸರಕಾರದ ಹಣವಾಗಲಿ, ತೆರಿಗೆ ಹಣವಾಗಲಿ ಬಳಸಲಾಗಿಲ್ಲ’ ಎಂದರು.

Advertisement

‘ನಮ್ಮ ಸರಕಾರ ದೇಶದ್ರೋಹಿ ಕೃತ್ಯ ಮಾಡುತ್ತಿದ್ದ ಪಿಎಫ್ ಐ ಸಂಘಟನೆಯನ್ನು ನಿಷೇಧ ಮಾಡಿತು. ಕಾಂಗ್ರೆಸ್ ಆ ಸಂಘಟನೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್ ಗೆ ಮತ ನೀಡಿದರೆ ದೇಶ ದ್ರೋಹಿಗಳ ಸಂಖ್ಯೆ ಹೆಚ್ಚುತ್ತದೆ’ ಎಂದು ವಿಪಕ್ಷಗಳ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದರು.

‘ಹಿಂದೆ ನಮ್ಮ ದೇಶಕ್ಕೆ ಉಗ್ರರು ನುಸುಳಿ ಜನರ ಹತ್ಯೆಗೈಯುತ್ತಿದ್ದರು. ನಾವು ಸರ್ಜಿಕಲ್ ಸ್ಟ್ರೈಕ್ ಮಾಡಿಸಿದೆವು. ಈಗ ಕಾಲ ಬದಲಾಗಿದ್ದುದೇಶದೊಳಗೆ ನುಗ್ಗಿ ಹೊಡೆಯುತ್ತೇವೆ’ ಎಂದರು.

‘ಕಾಂಗ್ರೆಸ್ ಭಾರತದ ಸಂಸ್ಕೃತಿಗೆ ನಷ್ಟ ಉಂಟುಮಾಡಿದೆ . ನಿಜವಾದ ಇತಿಹಾಸವನ್ನು ತಿರುಚಿದೆ. ಛತ್ರಪತಿ ಶಿವಾಜಿ ಮಹಾರಾಜ್, ರಾಣಾ ಪ್ರತಾಪ್ ರಂತಹ ವೀರರ ಕಥೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸದಂತೆ ಷಡ್ಯಂತ್ರ ಕಾಂಗ್ರೆಸ್ ಮಾಡಿತ್ತು’ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಬಿಸಿಲಿನಲ್ಲೂ ನಿಂತು ಸಾವಿರಾರು ಮಂದಿ ಭಾಷಣ ಕೇಳುತ್ತಿದ್ದರು. ಅವರ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ, ‘ನಾನು ನಿಮ್ಮ ಈ ಶ್ರಮವನ್ನೂ ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ’ ಎಂದರು.

ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಉತ್ತರಕನ್ನಡದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ದಾಖಲೆ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಪ್ರಧಾನಿ ಮೋದಿ ಅವರಿಗೆ ಗ್ರಾಮೀಣ, ಜಾನಪದ ಸಾಂಸ್ಕೃತಿಕ ಕಲೆ ಬೇಡರ ವೇಷದ ಕಿರೀಟ, ಮಲೆನಾಡು-ಉತ್ತರ ಕನ್ನಡದ ಪ್ರಮುಖ ಬೆಳೆಗಳಾದ ಅಡಿಕೆ, ಕಾಳುಮೆಣಸು ಮತ್ತು ಏಲಕ್ಕಿಯಿಂದ ಮಾಡಿದಂತಹ ವಿಶಿಷ್ಟ ಹಾರ, ಗ್ರಾಮದೇವತೆಯಾದ ಶ್ರೀ ಮಾರಿಕಾಂಬಾ ದೇವಿಯ ಪ್ರತಿಮೆ ನೀಡಿ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next