Advertisement

ಒಳಚರಂಡಿ ನೀರು; ಹುಲ್ಲು ತುಂಬಿ ಕಾಣದಾಗಿದೆ ಕೆರೆಯ ಒಡಲು

12:06 PM Jul 16, 2018 | |

ಮಹಾನಗರ: ನಗರದ ಜೆಪ್ಪು ಮಾರ್ಕೆಟ್‌ ಸಮೀಪದಲ್ಲಿರುವ ಐತಿಹಾಸಿಕ ಗುಜ್ಜರಕೆರೆ ದುರಸ್ತಿ ಕಾಮಗಾರಿಗೆ ಈಗ 18ರ ಹರೆಯ. 2001ರಲ್ಲಿ ಆರಂಭವಾಗಿರುವ ಕೆರೆ ಅಭಿವೃದ್ಧಿ ಕೆಲಸ 2018ನೇ ಇಸವಿಯಾದರೂ ಮುಗಿದಿಲ್ಲ. ಇಲ್ಲಿವರೆಗೆ ಈ ಕೆರೆ ಅಭಿವೃದ್ಧಿಗೆ ಬಳಸಲಾದ ಮೊತ್ತವೆಷ್ಟು ಗೊತ್ತೇ? ಬರೋಬ್ಬರಿ ಆರು ಕೋಟಿ ರೂ.! ಆದರೆ ಅಭಿವೃದ್ಧಿ ಆಗಿರುವುದು ಮಾತ್ರ ಶೂನ್ಯ.

Advertisement

ಶತಮಾನಗಳ ಇತಿಹಾಸ ಇರುವ ಜೆಪ್ಪು ಮಾರ್ಕೆಟ್‌ ಸಮೀಪದ ಗುಜ್ಜರಕೆರೆ ಇಪ್ಪತ್ತೈದು ವರ್ಷಗಳ ಹಿಂದೆ ಶುಭ್ರ ನೀರಿನಿಂದ ಕಂಗೊಳಿಸುತ್ತಿತ್ತು. ವರ್ಷಕ್ಕೆ ಎರಡು ಬಾರಿ ಈ ಕೆರೆ ಯಲ್ಲಿ ದೇವರ ಜಳಕ ನಡೆಯುತ್ತಿತ್ತು. ಅಲ್ಲದೆ ಪರಿಸರದ ಮನೆ ಮಂದಿಗೆಲ್ಲ ಜೀವಜಲ ಒದಗಿಸುತ್ತಿತ್ತು. ಬಳಿಕ ಪಾಲಿಕೆಯ ಆಗಿನ ಆಡಳಿತವು ಏಕಾಏಕಿ ಈ ಕೆರೆಯ ನೀರು ಕುಡಿಯಲು ಯೋಗ್ಯವಲ್ಲ ಎಂದ ಪರಿಣಾಮ ಕೆರೆಗೆ ತ್ಯಾಜ್ಯ, ಕಸ ಕಡ್ಡಿ ಎಸೆಯುವಿಕೆ ಶುರುವಾಯಿತು. ಎಷ್ಟೆಂದರೆ ಒಳಚರಂಡಿ ನೀರು ಕೂಡ ಇದೇ ಕೆರೆಯಲ್ಲಿ ಶೇಖರಣೆಗೊಂಡು ಕೆರೆಯ ನೀರು ಯಾವುದೇ ಬಳಕೆಗೂ ಅಯೋಗ್ಯವಾಯಿತು. ಕೆರೆಯ ತುಂಬೆಲ್ಲ ಹುಲ್ಲು, ಪಾಚಿ ಬೆಳೆದು ನೀರೇ ಕಾಣದಂತಾಯಿತು ಎನ್ನುತ್ತಾರೆ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್‌ ಕುಮಾರ್‌ ಜೆಪ್ಪು.

ಅಭಿವೃದ್ಧಿಗೆ ಆರು ಕೋಟಿ ರೂ.!
2001ರಿಂದ 2018ರ ವರೆಗೆ ವಿವಿಧ ಹಂತದಲ್ಲಿ ಈ ಕೆರೆಯ ಅಭಿವೃದ್ಧಿಗಾಗಿ 6,25,65,000 ರೂ. ಅನುದಾನ ಬಿಡುಗಡೆಯಾಗಿದೆ. 2001-02ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 1.65 ಲಕ್ಷ ರೂ. ಬಿಡುಗಡೆಯಾಗಿದೆ. 2008-09ರಲ್ಲಿ ಅಂದಿನ ಶಾಸಕ ಯೋಗೀಶ್‌ ಭಟ್‌ ಅವರ ಅನುದಾನದಲ್ಲಿ 99.50 ಲಕ್ಷ ರೂ., 2009-10ರಲ್ಲಿ ಪಾಲಿಕೆಯಿಂದ ಸುಮಾರು 2 ಕೋಟಿ ರೂ., ಅದಾದ ಬಳಿಕ ಒಳಚರಂಡಿ ಕಾಮಗಾರಿಗಾಗಿ 2011ರಲ್ಲಿ ಮತ್ತೆ 25 ಲಕ್ಷ ರೂ. ಪಾಲಿಕೆಯಿಂದ ಬಿಡುಗಡೆಗೊಂಡಿದೆ. 2015ರಲ್ಲಿ ಮಾಜಿ ಶಾಸಕ ಜೆ.ಆರ್‌. ಲೋಬೋ ನೇತೃತ್ವದಲ್ಲಿ ಮಗದೊಮ್ಮೆ
1 ಕೋಟಿ ರೂ. ಬಿಡುಗಡೆಗೊಂಡಿದೆ. 2017ರಲ್ಲಿ ಒಳಚರಂಡಿ ಕಾಮಗಾರಿಗಾಗಿ 3 ಕೋಟಿ ರೂ. ಬಿಡುಗಡೆಯಾಗಿದೆ. ಹೀಗೆ 18 ವರ್ಷಗಳಿಂದ ಅನುದಾನ ಬಿಡುಗಡೆ, ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದರೂ, ಗುಜ್ಜರಕೆರೆ ಮಾತ್ರ ಹುಲ್ಲು, ಒಳಚರಂಡಿ ನೀರಿನಿಂದ ತುಂಬಿಕೊಂಡಿರುವುದು ದುರದೃಷ್ಟ.

ಮಾಧ್ಯಮದಲ್ಲಿ ವರದಿ ಬಂದರೆ ಕಾಮಗಾರಿ
ಗುಜ್ಜರಕೆರೆ ಅಭಿವೃದ್ಧಿ ಕಾಮಗಾರಿ ಬಗ್ಗೆ ಶಾಸಕರಾದವರು ಕೆರೆ ಪರಿಶೀಲನೆ ನಡೆಸುವುದು, ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡುವುದು ನಡೆಯುತ್ತಲೇ ಇದೆ. ಆದರೆ ಇಲ್ಲಿವರೆಗೆ ಎಲ್ಲವೂ ಬಾಯಿ ಮಾತಿನಲ್ಲಷ್ಟೇ ಅಭಿವೃದ್ಧಿಯಾಗಿತ್ತೇ ವಿನಾ ಕೆರೆ ನಿರಂತರ ಹೂಳು ತುಂಬಿಕೊಂಡಿದೆ. ಸ್ಥಳೀಯರು ಹೇಳುವ ಪ್ರಕಾರ ಗುಜ್ಜರ ಕೆರೆ ಅಭಿವೃದ್ಧಿ ಕಾಮಗಾರಿಯ ನಿರ್ಲಕ್ಷ್ಯದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದರೆ ತತ್‌ಕ್ಷಣಕ್ಕೆ ಎಚ್ಚೆತ್ತುಕೊಳ್ಳುವ ಸಂಬಂಧಪಟ್ಟವರು ಒಂದೆರಡು ದಿನ ಬಿರುಸಿನ ಕೆಲಸ ಮಾಡುತ್ತಾರೆ. ಬಳಿಕ ಕೆಲಸ ನಿಲುಗಡೆಯಾಗುತ್ತದೆ ಎನ್ನುತ್ತಾರೆ.

40 ಅಡಿ ಆಳದಲ್ಲಿ 30 ಅಡಿ ಪಾಚಿ!
ಗುಜ್ಜರಕೆರೆ ಒಟ್ಟು 3. 93 ಎಕ್ರೆ ಪ್ರದೇಶದಲ್ಲಿದೆ. ಒಟ್ಟು 40 ಅಡಿ ಆಳ ಹೊಂದಿದೆ. ಆದರೆ ಸುಮಾರು 30 ಅಡಿಯಷ್ಟು ಗಿಡಗಂಟಿ,
ಕೆಸರು ತುಂಬಿಕೊಂಡಿದೆ. ಒಂದು ವೇಳೆ ಒಳಚರಂಡಿ ನೀರು ಹರಿಯುವಿಕೆಯನ್ನು ತಡೆದು, ಡ್ರೆಜ್ಜಿಂಗ್‌ ನಡೆಸಿ ಕೆರೆಯನ್ನು ಪುನರುಜ್ಜೀವನಗೊಳಿಸಿ ಶುಭ್ರ ನೀರು ಸಿಗುವಂತೆ ಮಾಡಿದ್ದರೆ, ಕೇವಲ ಆ ಪ್ರದೇಶಕ್ಕೆ ಮಾತ್ರವಲ್ಲದೆ, ಮಂಗಳೂರಿನ ಅರ್ಧ ಭಾಗಕ್ಕೂ ನೀರುಣಿಸುವುದಕ್ಕೆ ಸಾಧ್ಯವಾಗುತ್ತಿತ್ತು ಎನ್ನುತ್ತಾರೆ ಸ್ಥಳೀಯರು.

Advertisement

 ಅಧಿಕಾರಿಗಳೊಂದಿಗೆ ಚರ್ಚಿಸುವೆ
ಗುಜ್ಜರಕೆರೆಯ ನಾದುರಸ್ತಿಯ ಬಗ್ಗೆ ಈಗಾಗಲೇ ಸ್ಥಳೀಯರು ಗಮನಕ್ಕೆ ತಂದಿದ್ದಾರೆ. ಕೆರೆ ಅಭಿವೃದ್ಧಿ ಕುರಿತಂತೆ ಮುಂದಿನ ವಾರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ.
ವೇದವ್ಯಾಸ ಕಾಮತ್‌, ಶಾಸಕರು

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next