ಶಿವಮೊಗ್ಗ: ಇಡೀ ಪ್ರಪಂಚದ ಜನಪ್ರಿಯ ನಾಯಕರಲ್ಲಿ ಮೋದಿ ಕೂಡ ಒಬ್ಬರಾಗಿದ್ದಾರೆ. ಅವರೆಂದರೆ ನಮಗೆ ಪೂಜ್ಯ ಭಾವನೆ, ಗೌರವವಿದೆ. ದೇಶದಲ್ಲಿ ಭಾರತೀಯರಿಗೆ ಸಿಗುವಂತ ಗೌರವ ಇಂದು ಬದಲಾಗಿದೆ. ವಿಶ್ವದ ಎಲ್ಲಾ ದೇಶಗಳು ಇಂದು ಭಾರತದ ಜೊತೆಗಿದ್ದು, ಪಾಕಿಸ್ತಾನ ಒಬ್ಬಂಟಿಯಾಗಿದೆ. ಅಂತಹ ಮೋದಿಯವರ ಹೆಸರನ್ನು ಸುಲಭ್ ಶೌಚಾಲಯಕ್ಕೆ ಇಡಿ ಎಂದು ಹರಿಪ್ರಸಾದ್ ಹೇಳ್ತಾರೆ. ಕಾಂಗ್ರೆಸ್ ನಾಯಕರ ಈ ರೀತಿಯ ಹೇಳಿಕೆಗೆ ಯಾರಿಗೆ ಸಿಟ್ಟು ಬರಲ್ಲ? ಅದೇ ಕಾರಣಕ್ಕೆ ನಾನು ಹಾಗೇ ಮಾತನಾಡಿದ್ದೆ. ಅದೇ ಕಾರಣಕ್ಕೆ ಬೈದೆ ಕೂಡ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊನೆಗೆ ತಪ್ಪಿನ ಅರಿವಾಗಿ ವಿತ್ ಡ್ರಾ ಮಾಡಿಕೊಂಡೆ. ಜೊತೆಗೆ ಪದಬಳಕೆಗೆ ಕ್ಷಮೆ ಕೂಡ ಕೇಳಿದೆ. ನನ್ನ ವಿರುದ್ದ ಪ್ರತಿಭಟನೆ ಮಾಡುತ್ತೇನೆ, ಹೋರಾಟ ಮಾಡುತ್ತೇನೆ ಎನ್ನುವವರು ಬೇಕಾದರೆ ಮಾಡಲಿ, ನಾನು ಬೇಡ ಎನ್ನುವುದಿಲ್ಲ ಎಂದರು.
ನಾನು ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡಿಲ್ಲ. ಅವರ ನಾಯಕರ ಬಗ್ಗೆ ಹೇಳಿದ್ದೇನೆ ಅಷ್ಟೇ. ಡಿ.ಕೆ.ಶಿವಕುಮಾರ್ ಆ ನಾಯಕರ ಬಗ್ಗೆ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಇದನ್ನೂ ಓದಿ:ಆಟೋ ರಿಕ್ಷಾ, ಟ್ರಕ್, ಬಸ್ ಚಾಲಕರು, ಸಿಬ್ಬಂದಿಗೆ ನೆರವಾಗುವ ಹೊಸ ಬಿಲ್ ಜಾರಿ: ಸಚಿವ ಹೆಬ್ಬಾರ್
ನರೇಗಾ ಯೋಜನೆಯಡಿ ಜಲಶಕ್ತಿ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಕಳೆದ ಮಾರ್ಚ್ ನಲ್ಲಿ ಕ್ಯಾಚ್ ದ ರೇನ್ ಅಭಿಯಾನ ಸಹ ಆರಂಭಿಸಲಾಗಿತ್ತು. ಕೆರೆ ನಿರ್ಮಾಣ, ಕಲ್ಯಾಣಿ ಪುನಶ್ಚೇತನ, ಬದು, ಕೃಷಿ ಹೊಂಡ, ತೆರದ ಬಾವಿ ನಿರ್ಮಾಣದಂತ ಕಾಮಗಾರಿ ಮಾಡಲಾಗಿದೆ. ಈ ಅಭಿಯಾನದಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನವನ್ನು ಗಳಿಸಿದೆ. ರಾಜ್ಯದಲ್ಲಿ ಜಲಶಕ್ತಿ ಯೋಜನೆಯಡಿ 4, 87,655 ಕಾಮಗಾರಿ ಕೈಗೊಳ್ಳಲಾಗಿತ್ತು ಇದರಲ್ಲಿ 2,38,082 ಕಾಮಗಾರಿ ಪೂರ್ಣಗೊಂಡಿದ್ದು, 2,49,573 ಕಾಮಗಾರಿ ಪ್ರಗತಿಯಲ್ಲಿವೆ. ನರೇಗಾ ಯೋಜನೆಯಡಿ ಅಭಿಯಾನಕ್ಕಾಗಿ ಕೆಲಸ ಮಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ವರ್ಷ ಕೂಡ ರಾಜ್ಯ ಮೊದಲ ಸ್ಥಾನದಲ್ಲೇ ಇರುವಂತಹ ಕೆಲಸ ಮಾಡುತ್ತೇವೆ ಎಂದು ಸಚಿವ ಈಶ್ವರಪ್ಪ ಹೇಳಿದರು.