Advertisement

ಬಾದಾಮಿಯಲ್ಲಿ ಸ್ಪರ್ಧಿಸಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ

07:08 PM Nov 07, 2022 | Team Udayavani |

ಬೆಳಗಾವಿ: ಬಾದಾಮಿ ಕ್ಷೇತ್ರ ಭೌಗೋಳಿಕವಾಗಿ ದೂರ ಇರುವುದರಿಂದ ಅಲ್ಲಿಯ ಜನರಿಗೆ ನ್ಯಾಯ ಒದಗಿಸಲು ಆಗುತ್ತಿಲ್ಲ. ಹೀಗಾಗಿ ಕ್ಷೇತ್ರ ಬಿಡುವ ಚಿಂತನೆ ಮಾಡಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆಗೆ ಹೆಚ್ಚಿನ ಒತ್ತಡ ಇದೆ. ಸಾವಿರಾರು ಮಹಿಳೆಯರು ಮನೆ ಎದುರು ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ಅಭಿಮಾನಿಗಳು ಪತ್ರ ಬರೆಯುತ್ತಿದ್ದಾರೆ. ನೀವು ಕ್ಷೇತ್ರಕ್ಕೆ ಭೇಟಿ ನೀಡದಿದ್ದರೂ ನಡೆಯುತ್ತದೆ ಎನ್ನುತ್ತಿದ್ದಾರೆ. ನನಗೆ ಮನಸ್ಸು ಒಪ್ಪುತ್ತಿಲ್ಲ. ಕೋಲಾರ, ಚಾಮರಾಜಪೇಟೆಯಿಂದ ಸ್ಪರ್ಧೆಗೆ ಆಹ್ವಾನ ಬಂದಿದೆ. ವರುಣಾದಿಂದ ಸ್ಪರ್ಧಿಸುವಂತೆ ನಮ್ಮ ಮಗ ಹೇಳುತ್ತಿದ್ದಾನೆ. ಚಾಮರಾಜಪೇಟೆಯಿಂದ ನಿಂತುಕೊಳ್ಳುವಂತೆ ಜಮೀರ್‌ ಹೇಳುತ್ತಿದ್ದಾನೆ. ಆದರೆ, ನನ್ನ ಸ್ಪರ್ಧೆ ಬಗ್ಗೆ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ಯಾವುದೇ ಕ್ಷೇತ್ರ ಇಲ್ಲದಿದ್ದರೂ ಬಹಳಷ್ಟು ಜನರು ನನ್ನನ್ನು ಆಹ್ವಾನಿಸುತ್ತಿದ್ದಾರೆ. ಬಿಜೆಪಿಯವರಿಗೆ ಬುದ್ಧಿ ಇಲ್ಲ ಎಂದರು.

ವೈಯಕ್ತಿಕವಾಗಿ ಸಿ.ಎಂ.ಇಬ್ರಾಹಿಂ ಒಳ್ಳೆಯ ಗೆಳೆಯ. ಆದರೆ ನಮ್ಮನ್ನು ಬಿಟ್ಟು ಜೆಡಿಎಸ್‌ಗೆ ಹೋಗಿ ಅಧ್ಯಕ್ಷರಾಗಿದ್ದಾರೆ. ಅವರು ಭದ್ರಾವತಿಗೆ ಜೆಡಿಎಸ್‌ನಿಂದ ನಿಂತುಕೊಳ್ಳಲಿ. ನಾನು ಎಲ್ಲಿ ನಿಂತುಕೊಳ್ಳಬೇಕು ಅಂತ ಪಕ್ಷ ತೀರ್ಮಾನ ಮಾಡುತ್ತದೆ, ಜೆಡಿಎಸ್‌ ಅಲ್ಲ. ನಾನು ಒಬ್ಬಂಟಿ ಅಲ್ಲ. ಲಕ್ಷ್ಮೀ ಹೆಬ್ಟಾಳಕರ, ಅಂಜಲಿ ನಿಂಬಾಳಕರ, ಫಿರೋಜ್‌ ಸೇಠ್ , ಎಂ.ಬಿ.ಪಾಟೀಲ್‌ ಸೇರಿದಂತೆ ಎಲ್ಲ ಧರ್ಮದವರು, ಜಾತಿಯವರು ನನ್ನ ಜತೆ ಇದ್ದಾರೆ. ಜನಾರ್ದನ ರೆಡ್ಡಿ ಕಾಂಗ್ರೆಸ್‌ಗೆ ಬರುವ ಕುರಿತು ನನ್ನ ಜತೆ ಚರ್ಚಿಸಿಲ್ಲ ಎಂದರು.

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಂಬಂಧ ಐವರು ನ್ಯಾಯಮೂರ್ತಿಗಳು ಕೂಡಿ ಮಾಡಿದ ತೀರ್ಮಾನ ಅಲ್ಲ. ಮೂವರು ನ್ಯಾಯಮೂರ್ತಿಗಳು ಒಂದು ತರಹ, ಇಬ್ಬರು ಒಂದು ತರಹ ತೀರ್ಪು ನೀಡಿದ್ದಾರೆ. ಇದು ನನ್ನ ಅಭಿಪ್ರಾಯ, ನಾನು ಜಡ್ಜ್ಮೆಂಟ್‌ ಮೇಲೆ ಹೇಳುತ್ತಿಲ್ಲ. ಅವರು ಕಾನೂನು ಪ್ರಕಾರ ತೀರ್ಪು ನೀಡಿದ್ದಾರೆ. ನಾನು ಸಂವಿಧಾನದಲ್ಲಿ ಅರ್ಥ ಮಾಡಿಕೊಂಡ ಪ್ರಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು ಅಂತ ಆರ್ಟಿಕಲ್‌ 15 ಆಗಲಿ, ಆರ್ಟಿಕಲ್‌ 16 ಆಗಲಿ ಹೇಳುವುದಿಲ್ಲ. ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕೊಡಬೇಕು ಅಂತ ಹೇಳುತ್ತದೆ. ಆದೇಶದ ತೀರ್ಪು ಪ್ರತಿ ಬಂದ ಮೇಲೆ ಮಾತನಾಡುತ್ತೇನೆ ಎಂದರು.

ವಿನಯ ಕುಲಕರ್ಣಿಗೆ ಶೀಘ್ರ ಕ್ಲೀನ್‌ಚಿಟ್‌
ವಿನಯ ಕುಲಕರ್ಣಿ ಕೊಲೆ ಆರೋಪಿ. ಅದ್ಧೂರಿ ಜನ್ಮದಿನ ಮೂಲಕ ಏನು ಸಂದೇಶ ಕೊಡ್ತಿದ್ದಾರೆ ಎಂದು ಪ್ರಶ್ನಿಸುವ ಬಿಜೆಪಿಗೆ ಅಮಿತ್‌ ಶಾ ಮೇಲೆಯೂ ಕೊಲೆ ಆರೋಪ ಇದೆ. ಅವರು ಗಡಿಪಾರು ಆಗಿದ್ದರು. ಈಗ ಗೃಹ ಸಚಿವರಾಗಿದ್ದಾರೆ ಎಂಬುದು ಗೊತ್ತಿಲ್ಲವೇ? ಅಮಿತ್‌ ಶಾಗೆ ಕ್ಲೀನ್‌ಚಿಟ್‌ ಸಿಕ್ಕಂತೆ ವಿನಯ ಕುಲಕರ್ಣಿಗೂ ಕ್ಲೀನ್‌ಚಿಟ್‌ ಸಿಗುತ್ತದೆ. ಬೇಕಾದಷ್ಟು ಜನರ ಮೇಲೆ ಮರ್ಡರ್‌ ಕೇಸ್‌ ಇದೆ, ಎಂಎಲ್‌ಎ ಆಗಿದ್ದಾರೆ, ಎಂಪಿ ಆಗಿದ್ದಾರೆ. ಅಪರಾಧ ಸಾಬೀತಾಗುವರೆಗೂ ಅವರು ಅಮಾಯಕರು. ಅಪರಾಧ ಸಾಬೀತಾಗುವವರೆಗೂ ಎಲ್ಲ ಆರೋಪಿಗಳು ಅಮಾಯಕರು ಎಂದು ಸಿದ್ದರಾಮಯ್ಯ ಹೇಳಿದರು.

Advertisement

ಬೊಮ್ಮಾಯಿ-ಬಿಎಸ್‌ವೈ ಸಂಬಂಧ ಹಳಸಿದೆ
ಸಿದ್ದರಾಮಯ್ಯ-ಡಿಕೆಶಿ ಸಂಬಂಧ ಸರಿ ಇಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸಂಬಂಧ ಚೆನ್ನಾಗಿದೆಯಾ ಅಂತಾ ಗೊತ್ತಾ. ಬೊಮ್ಮಾಯಿ, ಯಡಿಯೂರಪ್ಪ ಸಂಬಂಧ ಹಳಸಿ ಹೋಗಿದೆ. ಆದರೆ, ಡಿಕೆಶಿ ನಾನು ಚೆನ್ನಾಗಿದ್ದೇವೆ ಎಂದು ನಸುನಕ್ಕರು.

ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಘೋಷಣೆ
ಇಲ್ಲಿಯ ವಿಮಾನ ನಿಲ್ದಾಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಬರುತ್ತಿದ್ದಂತೆ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಘೋಷಣೆ ಮೊಳಗಿತು. ಸಿದ್ದರಾಮಯ್ಯ ಅಭಿಮಾನಿಗಳು, ಕಾಂಗ್ರೆಸ್‌ ಕಾರ್ಯಕರ್ತರು ಮುಂದಿನ ಸಿಎಂ ಘೋಷಣೆ ಕೂಗಿದರು. ಮಾಧ್ಯಮ ಗ್ಯಾಲರಿಗೆ ಬರುತ್ತಿದ್ದಂತೆ ಅಭಿಮಾನಿಗಳ ಘೋಷಣೆ ಮೊಳಗಿತು. ಕ್ಯಾಮೆರಾಗಳು ಕಾಣಿಸುತ್ತಿದ್ದಂತೆ ಕಾರ್ಯಕರ್ತರು ಜೋರಾಗಿ ಕೂಗಿದಾಗ, ಸುಮ್ಮನಿರಪ್ಪ ಎಂದು ಅಭಿಮಾನಿಗಳನ್ನು ಸಿದ್ದರಾಮಯ್ಯ ಗದರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next