Advertisement

ಪರಿಹಾರ ನೀಡುವಲ್ಲಿ ಅನ್ಯಾಯವಾಗಲ್ಲ

12:10 PM Nov 22, 2018 | |

ವಿಜಯಪುರ: ಗದಗ-ಹೊಟಗಿ ರೈಲ್ವೆ ಮಾರ್ಗದ ಕಾಮಗಾರಿಯಲ್ಲಿ ಗುರುತಿಸಲಾದ ಜಮೀನುಗಳ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂ ಮಾಲೀಕರಿಗೆ ದೊರೆಯಬೇಕಾದ ಪರಿಹಾರದಲ್ಲಿ ಯಾವುದೇ ರೀತಿಯ ಅನ್ಯಾಯವಾಗುವುದಿಲ್ಲ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ರೈತರಿಗೆ-ಭೂ ಮಾಲೀಕರಿಗೆ ಭರವಸೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಗದಗ-ಹೊಟಗಿ ರೈಲ್ವೆ ಮಾರ್ಗ ಕಾಮಗಾರಿಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪರಿಹಾರ ಮೊತ್ತ ದರ ನಿಗದಿ ಕುರಿತು ಸಂಬಂಧಿಸಿದ ಭೂಮಾಲೀಕರೊಂದಿಗೆ ನಡೆದ ಸಮಾಲೊಚನೆ ಸಭೆಯಲ್ಲಿ ಅವರು ಈ ಭರವಸೆ ನೀಡಿದರು.

ರೈಲ್ವೆ ಮಾರ್ಗಕ್ಕೆ ಬೇಕಾದ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸದರಿ ಮಾರ್ಗದಲ್ಲಿ ಬರುವ ಜಿಾಗಗಳನ್ನು ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ಮುಳವಾಡ, ಮಸೂತಿ, ತೆಲಗಿ, ಕೂಡಗಿ, ಅಲಿಯಾಬಾದ, ಹಂಚನಾಳ (ಪಿಎಚ್‌), ಇಂಗನಾಳ, ಬರಟಗಿ, ಗುಡದಿನ್ನಿ ಗ್ರಾಮಗಳಲ್ಲಿ ನಿರ್ದಿಷ್ಟವಾಗಿ ಗುರುತಿಸಿದ ಸರ್ವೇ ನಂಬರ್‌ ಆಧಾರದ ಅಗತ್ಯ ಪ್ರಮಾಣದ ಭೂ ಭೂಸ್ವಾಧೀನ ಕಾಯ್ದೆಯಂತೆ ಕಡ್ಡಾಯ ಭೂಸ್ವಾಧೀನ ನಡೆಯಲಿದೆ ಎಂದರು. 

ರೈಲು ಯೋಜನೆಗೆ ಭೂಮಿ ಕಳೆದುಕೊಳ್ಳುವ ಭೂ ಸಂತ್ರಸ್ತರಿಗೆ ಹೊಸ ಭೂಸ್ವಾಧೀನ ಕಾಯ್ದೆ ಪ್ರಕಾರ ಮಾರುಕಟ್ಟೆ ಬೆಲೆಗಿಂತ ನಿಯಮಾನುಸಾರ ಖುಷ್ಕಿ, ನೀರಾವರಿ ಭೂಮಿ ಅನ್ವಯ 4 ಪಟ್ಟು ದರ ನಿಗದಿ ಮಾಡಲಾಗಿದೆ. ಇದರಲ್ಲಿ ರೈತರಿಗೆ ಭೂ ಮಾಲೀಕರಿಗೆ ಯಾವುದೇ ರೀತಿಯಲ್ಲಿ ಅನ್ಯಾಯ ನಡೆಯದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಸಂತ್ರಸ್ತರಾಗುವ ರೈತರು ಸರಕಾರ ಭೂಸ್ವಾಧೀನ ಮಾಡಿಕೊಂಡ ನಂತರ ಆ ಭೂಮಿಯಲ್ಲಿ ವ್ಯವಸಾಯ ಸೇರಿದಂತೆ ಯಾವುದೇ ವ್ಯವಹಾರ ಮಾಡುವಂತಿಲ್ಲ. ಕಾಮಗಾರಿ ನಡೆಯುವ ಸಂದರ್ಭ ಇಲಾಖೆಗೆ ತಗಾದೆ ತೆಗೆಯದೇ ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸರಕಾರದ ಮಾರ್ಗಸೂಚಿ ಬೆಲೆ, ಮಾರುಕಟ್ಟೆಯ ವಾಸ್ತವಿಕ ಬೆಲೆ ಸೇರಿದಂತೆ ಸರ್ಕಾರದ ಇತರ ನಿಯಮಗಳನ್ವಯ ಭೂಮಿಯ ಬೆಲೆಯನ್ನು ನಿರ್ಧರಿಸಲಾಗಿದೆ. ಆದ್ದರಿಂದ ಎಲ್ಲ ಭೂಮಾಲೀಕರಿಗೂ ಭೂಮಿಯ ಸ್ವಾಧೀನ ಪ್ರಮಾಣದನ್ವಯ ಬೆಲೆ-ದರ ನಿಗದಿಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿದ್ದಲ್ಲಿ ಸಂಬಂಧಿಸಿದ ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ರೊಂದಿಗೆ ಸಮಾಲೋಚಿಸಿ ಎಂದು ಹೇಳಿದರು.

Advertisement

ಇದೇ ಸಂದರ್ಭದಲ್ಲಿ ಕೂಡಗಿಯಲ್ಲಿ ಎನ್‌ಟಿಪಿಸಿ ಸ್ಥಾಪನೆ ವೇಳೆ ಭೂಸ್ವಾಧೀನ ಸಂದರ್ಭದಲ್ಲಿ ನೀಡಿದ ಭೂಮಿಯ ಬೆಲೆಯನ್ನೇ ರೈಲು ಮಾರ್ಗ ಭೂಸ್ವಾಧೀನ ಸಂದರ್ಭದಲ್ಲೂ ನೀಡುವಂತೆ ರೈತರು ಆಯುಕ್ತರಿಗೆ ಆಗ್ರಹಿಸಿದರು. ಸರ್ಕಾರದ ಆದೇಶದ ಪ್ರಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ನೀಡಲು ಸಾಧ್ಯವಿಲ್ಲ. ಭೂ ಮಾಲೀಕರ ಒಪ್ಪಿಗೆ ಇಲ್ಲದೆಯೂ ಸರ್ಕಾರಿ ನಿಯಮಾವಳಿಯನ್ವಯ ಕಡ್ಡಾಯವಾಗಿ ಭೂಸ್ವಾ ಧೀನ ಮಾಡಿಕೊಳ್ಳುವ ಅಧಿಕಾರ ಸರ್ಕಾರಕ್ಕಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದರು. ಆಗ ಭೂಸ್ವಾಧೀನ ಸಮೀಕ್ಷೆಯಲ್ಲಿ ಗುರುತಿಸಲಾಗಿರುವ ಗ್ರಾಮಗಳ ರೈತರು ಬಹುತೇಕರು ಭೂಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿದರು.

ವಿವಿಧ ಕಾರಣಗಳಿಂದ ಸಭೆಗೆ ಗೈರಾದ ಭೂಮಾಲೀಕರನ್ನು ತಹಶೀಲ್ದಾರ್‌ ಹಾಗೂ ಉಪ ವಿಭಾಗಾಧಿಕಾರಿ ಖುದ್ದು ಸಂಪರ್ಕಿಸಿ ಅಗತ್ಯ ಮಾಹಿತಿ ನೀಡಿ, ಒಪ್ಪಿಗೆ ಕುರಿತ ಬಾಂಡ್‌ ಪತ್ರ ಪಡೆಯಬೇಕು. ಈ ಪ್ರಕ್ರಿಯೆ ವಾರದಲ್ಲಿ ಪೂರ್ಣಗೊಳ್ಳಬೇಕು. ಇದರ ಅಂತಿಮ ವರದಿ ಸಿದ್ಧಪಡಿಸಿ ಆಯುಕ್ತರ ಕಚೇರಿಗೆ ಯಾವ ಗೊಂದಲ ಇಲ್ಲದಂತೆ ಎಚ್ಚರ ವಹಿಸಬೇಕು. ರೈಲ್ವೆ ಇಲಾಖೆ ನಕ್ಷೆ ಪ್ರಕಾರ ಬರುವ ಎಲ್ಲ ಸರ್ವೇ ನಂಬರ್‌ಗಳ ವಿವರವಾದ ಮಾಹಿತಿ ಇರಬೇಕು ಎಂದು ಹೇಳಿದರು.

ಸರ್ಕಾರ ನಿಗದಿಪಡಿಸಿದ ಭೂ ಪ್ರದೇಶ ಹೊರತುಪಡಿಸಿ ರೈತರ ಭೂಮಿಯ ಇತರ ಭಾಗದಲ್ಲಿ ಕಾಮಗಾರಿಗೆ ಸಂಬಂಧಿಸಿದ ಸರಕು ಸಂಗ್ರಹಿಸುವಂತಿಲ್ಲ. ಒಂದು ವೇಳೆ ಹಾಕುವ ಸಂದರ್ಭವಿದ್ದಲ್ಲಿ ರೈತರಿಗೆ ಅಗತ್ಯ ಪರಿಹಾರ ಎಂದು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮವಾರು ಭೂಮಿಯ ಬೆಲೆ ವ್ಯತ್ಯಾಸವಾಗುತ್ತದೆ. ಅದರ ಆಧಾರದ ಮೇಲೆ ಪರಿಹಾರ ಮೊತ್ತವೂ ನಿಗದಿಯಾಗುತ್ತದೆ. ಯಾರಿಗೂ ಪರಿಹಾರ ನೀಡುವಲ್ಲಿ ವಿಳಂಬವಾಗುವುದಿಲ್ಲ. ಆದ್ದರಿಂದ ಭೂಮಾಲೀಕರು ಸರ್ಕಾರದೊಂದಿಗೆ ಸಹಕರಿಸಿ ಮೂಲಭೂತ ಸೌಕರ್ಯ ಪಡೆದುಕೊಂಡು ಆ ಮೂಲಕ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ, ಅಪರ ಜಿಲ್ಲಾಧಿಕಾರಿ ಎಚ್‌.ಪ್ರಸನ್ನ, ಡಾ| ಔದ್ರಾಮ, ಇಂಡಿ ಉಪ ವಿಭಾಗಾಧಿಕಾರಿ ಹಿಟ್ನಾಳ, ತಹಶೀಲ್ದಾರ್‌ ರವಿಚಂದ್ರ, ಎಂ.ಎನ್‌. ಚೋರಗಸ್ತಿ ಹಾಗೂ ರೈಲ್ವೆ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next