Advertisement

ನೆರೆ ಸಂತ್ರಸ್ತರು ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ

07:30 PM Aug 14, 2019 | mahesh |

ಬೆಳ್ತಂಗಡಿ: ದೇಶದೆಲ್ಲೆಡೆ ಸ್ವಾತಂತ್ರ್ಯ ದಿನದ ಸಂಭ್ರಮ ಮನೆ ಮಾಡಿದ್ದು, ಆದರೆ ತಾಲೂಕಿನ ನೆರೆ ಸಂತ್ರಸ್ತರು ಸ್ವಾತಂತ್ರ್ಯ ದಿನವನ್ನು ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ತಾಲೂಕಿನ 4 ಶಾಲೆಗಳು ಸಂತ್ರಸ್ತರ ಪರಿಹಾರ ಕೇಂದ್ರವಾಗಿದ್ದು, ಹೀಗಾಗಿ ಈ ಶಾಲೆಗಳಲ್ಲಿ ಆ. 15ರಂದು ವಿದ್ಯಾರ್ಥಿಗಳು ಇಲ್ಲದಿ ದ್ದರೂ ಸಂತ್ರಸ್ತರ ಸಮ್ಮುಖದಲ್ಲೇ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ.

Advertisement

ತಾ|ನ ಲಾೖಲ ಗ್ರಾಮದ ಕರ್ನೋಡಿ ಶಾಲೆ, ಇಂದಬೆಟ್ಟು ಗ್ರಾಮದ ದೇವನಾರಿ ಶಾಲೆ, ಮಿತ್ತಬಾಗಿಲು ಗ್ರಾಮದ ಕಿಲ್ಲೂರು ಶಾಲೆ, ಕಡಿರುದ್ಯಾವರ ಗ್ರಾಮದ ಕುಕ್ಕಾವು – ಕೊಡಿಯಾಲ್‌ಬೈಲ್‌ ಶಾಲೆಗಳಲ್ಲಿ ಸಂತ್ರಸ್ತರ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರಸ್ತುತ ಶಾಲೆಗಳಲ್ಲಿ ಸಂತ್ರಸ್ತರ ಸಂಖ್ಯೆ ಕಡಿಮೆಯಾಗಿ ದ್ದರೂ ಶಾಲೆಗಳ ಕಾರ್ಯಾರಂಭಕ್ಕೆ ಇನ್ನೂ ಕಾಲ ಕೂಡಿಬಂದಿಲ್ಲ.

ಪ್ರಸ್ತುತ ಸಂತ್ರಸ್ತರ ಪರಿಹಾರ ಕೇಂದ್ರಗಳು ಕಾರ್ಯಾಚರಿಸುತ್ತಿರುವ ಶಾಲೆಗಳಿಗೆ ಶಿಕ್ಷಕರು ಆಗಮಿಸಿ ಸಾತಂತ್ರ್ಯ ದಿನದ ಧ್ವಜಾರೋಹಣ ಮಾಡಲಿದ್ದಾರೆ. ಹೀಗಾಗಿ ಸಂತ್ರಸ್ತರು ನೆಲೆ ಕಳೆದುಕೊಂಡಿರುವ ದುಃಖದಲ್ಲಿ ತಾವು ಉಳಿದುಕೊಂಡಿರುವ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನವನ್ನು ಸಂಭ್ರಮಿಸಬೇಕಿದೆ.

ಸೂರು ಇಲ್ಲದಿದ್ದರೆ ಸಂಭ್ರಮವೆಲ್ಲಿ?
ನೆರೆಪೀಡಿತ ಪ್ರದೇಶಗಳಲ್ಲಿ ಸೂರು ಕಳೆದುಕೊಂಡಿರುವ ಕುಟುಂಬಗಳು ಸ್ವಾತಂತ್ರ್ಯ ದಿನ ಸಹಿತ ಸದ್ಯಕ್ಕೆ ಯಾವುದನ್ನೂ ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ಬರೀ ಕಣ್ಣೀರು ಕಾಣಸಿಗ ಲಿದೆ. ಸಂತ್ರಸ್ತ ಕೇಂದ್ರಗಳು ಕಾರ್ಯಾಚರಿಸುತ್ತಿರುವ ಶಾಲೆಗಳು ಪುನರಾರಂಭಗೊಂಡರೆ ನಾವೆತ್ತ ತೆರಳಬೇಕು ಎಂಬ ದುಃಖ ಅವರಲ್ಲಿದೆ. ಹೀಗಾಗಿ ಸಂತ್ರಸ್ತರ ಅತಂತ್ರ ಬದುಕಿನಲ್ಲಿ ನೆಮ್ಮದಿಯ ನಿಟ್ಟುಸಿರನ್ನು ಮೂಡಿಸುವ ಸವಾಲು ಕೂಡ ಸರಕಾರದ ಮೇಲಿದೆ.

ವಿದ್ಯಾರ್ಥಿಗಳು ಇಲ್ಲ !
ಪ್ರವಾಹಪೀಡಿತ ಪ್ರದೇಶಗಳಲ್ಲಿ ಶಾಲೆಗಳು ಕಾರ್ಯಾಚರಿಸಿದರೂ ವಿದ್ಯಾರ್ಥಿಗಳು ಆಗಮಿಸುವುದು ಕಷ್ಟದ ಪರಿಸ್ಥಿತಿಯಲ್ಲಿದೆ. ಅಂದರೆ ಹೆಚ್ಚಿನ ವಿದ್ಯಾರ್ಥಿಗಳ ಕುಟುಂಬ ನೆಲೆ ಕಳೆದುಕೊಂಡಿರುವ ಕಾರಣ ವಿದ್ಯಾರ್ಥಿಗಳು ಶಾಲೆಗೆ ತೆರಳುವುದು ಅಸಾಧ್ಯವಾಗಲಿದೆ. ಹೀಗಾಗಿ ಈ ಭಾಗದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀರಾ ಇಳಿಮುಖವಾಗುವ ಸಾಧ್ಯತೆ ಇದೆ. ಮತ್ತೂಂದೆಡೆ ಕೆಲವು ವಿದ್ಯಾರ್ಥಿಗಳ ಪುಸ್ತಕಗಳು ನೆರೆಗೆ ಸಿಲುಕಿ ಕಣ್ಮರೆಯಾಗಿರುವ ಸ್ಥಿತಿಯೂ ಇದೆ. ಹೀಗಾಗಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆದರೂ ವಿದ್ಯಾರ್ಥಿಗಳು ಶಾಲೆಗೆ ತೆರಳುವ ಸ್ಥಿತಿಯಲ್ಲಿಲ್ಲ.

Advertisement

ಶಿಕ್ಷಕರು ಶಾಲೆಗೆ
ತಾ|ನ 4 ಶಾಲೆಗಳಲ್ಲಿ ಸಂತ್ರಸ್ತರ ಪರಿಹಾರ ಕೇಂದ್ರ ತೆರೆಯಲಾಗಿದ್ದು, ಹೀಗಾಗಿ ಅಂತಹ ಶಾಲೆಗಳಿಗೆ ಪ್ರಸ್ತುತ ರಜೆ ಸಾರಲಾಗಿದೆ. ಮತ್ತೆ ಯಾವಾಗ ಶಾಲೆ ಆರಂಭಗೊಳ್ಳುತ್ತದೆ ಎಂಬ ಬಗ್ಗೆ ಪ್ರಸ್ತುತ ಮಾಹಿತಿಯಿಲ್ಲ. ಆದರೆ ಇಂತಹ ಶಾಲೆಗಳಿಗೆ ಶಿಕ್ಷಕರು ಹೋಗುತ್ತಿದ್ದು, ಹೀಗಾಗಿ ಮಕ್ಕಳಿಲ್ಲದಿದ್ದರೂ ಅಲ್ಲಿ ಧ್ವಜಾರೋಹಣ ನಡೆಯುತ್ತದೆ.
 - ಕೆ. ಸತೀಶ್‌, ಕ್ಷೇತ್ರ ಶಿಕ್ಷಣಾಧಿಕಾರಿ, ಬೆಳ್ತಂಗಡಿ

 ಶಾಲೆಯೇ ಮನೆಯಾಗಿದೆ
ನೆರೆಯಿಂದ ನಮ್ಮ ಮನೆ ಬಹುತೇಕ ನಾಶವಾಗಿದ್ದು, ಮನೆಯ 5 ಮಂದಿ ಕೂಡ ಪ್ರಸ್ತುತ ಕಿಲ್ಲೂರು ಶಾಲೆಯ ಸಂತ್ರಸ್ತರ ಕೇಂದ್ರದಲ್ಲಿ ದ್ದೇವೆ. ಇಬ್ಬರು ಮಕ್ಕಳಿಗೂ ಶಾಲೆ ಇಲ್ಲವಾಗಿದ್ದು, ಶಾಲೆಯೇ ಮನೆ ಯಾಗಿ ಪರಿಣಮಿಸಿದೆ. ಯಾವಾಗ ಮನೆಗೆ ಹೋಗುತ್ತೇನೆ ಎಂಬುದೇ ತಿಳಿಯದಾಗಿದೆ.
 - ಹರಿಣಿ, ಕೊಲ್ಲಿ ಭಾಗದ ಸಂತ್ರಸ್ತೆ

ಕಡಿರುದ್ಯಾವರ ಗ್ರಾಮದ ಕುಕ್ಕಾವು ಶಾಲೆಯಲ್ಲಿರುವ ಸಂತ್ರಸ್ತರ ಪರಿಹಾರ ಕೇಂದ್ರ.

 ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next