Advertisement

ಗಗನಕ್ಕೇರಿದ ಬೆಲೆಗಳು ಮಾತ್ರ ಅಗ್ಗವಾಗಿಲ್ಲ!

11:45 AM May 02, 2020 | mahesh |

ಬೆಂಗಳೂರು: ಲಾಕ್‌ಡೌನ್‌ ಜಾರಿಯಾಗಿ 38 ದಿನ ಕಳೆದಿದ್ದು, ರಾಜ್ಯಾದ್ಯಂತ ಅಗತ್ಯ ವಸ್ತುಗಳ ಆಹಾರ ಧಾನ್ಯ, ಬೇಳೆಕಾಳು ಪೂರೈಕೆ ಸಹಜ ಸ್ಥಿತಿಗೆ ಮರಳಿದ್ದರೂ ಹೆಚ್ಚಾಗಿರುವ ಬೆಲೆಗಳು ಮಾತ್ರ ಅಗ್ಗವಾಗಿಲ್ಲ! ಮಾ.24ರಂದು ಲಾಕ್‌ಡೌನ್‌ ಜಾರಿಯಾಗುತ್ತಿದ್ದಂತೆ ಬಹುತೇಕ ಆರ್ಥಿಕ ಚಟುವಟಿಕೆ, ವ್ಯಾಪಾರ- ವಹಿವಾಟು ಸ್ಥಗಿತಗೊಂಡಿತು. ಕೆಲ ದಿನಗಳ ಬಳಿಕ ಅಗತ್ಯ ವಸ್ತುಗಳ ಪೂರೈಕೆ ಪ್ರಕ್ರಿಯೆ ಶುರುವಾಯಿತು. ಒಂದು ಹಂತದಲ್ಲಿ ಸಾಮಾನ್ಯ ಸಂದರ್ಭಕ್ಕಿಂತ ಶೇ.80 ಆಹಾರ ಧಾನ್ಯ ಹೆಚ್ಚುವರಿಯಾಗಿ ಎಪಿಎಂಸಿ ಮಾರುಕಟ್ಟೆಗಳಿಗೆ ಪೂರೈಕೆಯಾಗಿತ್ತು. ಆದರೂ, ದರ ಇಳಿಕೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ.

Advertisement

ಸಾಗಣೆದಾರರು ಒಂದು ಊರಿಗೆ ಸಾಗಾಟ ಮಾಡಿ ಖಾಲಿ ಬರುವ ಕಾರಣಕ್ಕೆ ಅದಕ್ಕೆ ತಗುಲುವ ಡೀಸೆಲ್‌ ವೆಚ್ಚವನ್ನೂ ಪಡೆಯುತ್ತಿದ್ದಾರೆ. ಸದ್ಯ ಅಗತ್ಯ ವಸ್ತುಗಳ ಸಾಗಣೆಗಷ್ಟೇ ಅವಕಾಶ ನೀಡಲಾಗಿದ್ದು ಏ.15ರಿಂದ ಟೋಲ್‌ ಸಂಗ್ರಹ ಶುರುವಾಗಿದೆ. ಇದು ಕೂಡ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ  ಯಲ್ಲಿ ಕಚ್ಚಾತೈಲ ಬೆಲೆ ಗಣನೀಯವಾಗಿ ಇಳಿಕೆಯಾಗಿದ್ದರೂ ಡೀಸೆಲ್‌ ದರ ಇಳಿಕೆಯಾಗದ ಕಾರಣ ಅಗತ್ಯ ವಸ್ತುಗಳ ಬೆಲೆಯಲ್ಲಿ ನಿರೀಕ್ಷಿತ ಇಳಿಕೆಯಾಗಿಲ್ಲ ಎಂಬುದು ಸಾಗಣೆದಾರರು, ವ್ಯಾಪಾರಿಗಳ ಅಭಿಪ್ರಾಯ. ಇವೆಲ್ಲಾ ಕಾರಣಕ್ಕೆ ಆಹಾರ ಧಾನ್ಯ, ಬೇಳೆಕಾಳು ಬೆಲೆಯಲ್ಲಿ ಶೇ.3 ಹೆಚ್ಚಳವಾಗಿದೆ ಎಂದು ಬೆಂಗಳೂರು ಆಹಾರ ಧಾನ್ಯ ಮತ್ತು ಬೇಳೆಕಾಳು ಸಗಟು ವ್ಯಾಪಾರಿಗಳ ಸಂಘದ ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ ತಿಳಿಸಿದರು. ಅಂತಾರಾಜ್ಯ ಅಗತ್ಯ ವಸ್ತುಗಳ ಸಾಗಣೆಯಲ್ಲಿ ಕೆಲ ಸಮಸ್ಯೆಗಳಿದ್ದು, ಸರ್ಕಾರ ಅದನ್ನು ನಿವಾರಿಸಲು ಕ್ರಮ ಕೈಗೊಂಡರೆ ಸಾಗಣೆ ಸುಲಭವಾಗಲಿದೆ.
ರಾಜ್ಯ ಸರ್ಕಾರ ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಪ್ರಮಾಣ ಇಳಿಕೆ ಮಾಡಬೇಕು. ಹಾಗೆಯೇ ಅಗತ್ಯ ವಸ್ತು ಸಾಗಣೆ ವಾಹನಗಳಿಂದ ಟೋಲ್‌ ಸಂಗ್ರಹಿಸುವುದರಿಂದ ಹೊರೆಯಾಗುತ್ತಿದೆ ಎಂದು ರಾಜ್ಯ ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ಚೆನ್ನಾರೆಡ್ಡಿ ಹೇಳಿದರು.

ಆಹಾರ ಧಾನ್ಯ, ಬೇಳೆಕಾಳುಗಳ ಸಾಗಣೆದಾರರು ದುಪ್ಪಟ್ಟು ಹಣ ಪಡೆಯುತ್ತಿಲ್ಲ. ಕೆಲವರು ಕೃತಕ ಅಭಾವ ಸೃಷ್ಟಿಸಲು ಯತ್ನಿಸುತ್ತಿರುವುದರಿಂದ ಬೆಲೆ ಏರಿಕೆಯಾಗಿರುವ ಸಾಧ್ಯತೆಯಿದೆ. ಅಗತ್ಯ ವಸ್ತುಗಳ ಸಾಗಣೆಗೆ ಟೋಲ್‌ ಸಂಗ್ರಹ ಸರಿಯಲ್ಲ. ಡೀಸೆಲ್‌ ದರ ಇಳಿಕೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. 
● ಜಿ.ಆರ್‌. ಷಣ್ಮುಖಪ್ಪ, ಲಾರಿ, ಮಾಲೀಕರು, ಏಜೆಂಟ್‌ ಸಂಘಗಳ ಒಕ್ಕೂಟದ ಅಧ್ಯಕ್ಷ

ಅಗತ್ಯ ವಸ್ತು ಪೂರೈಕೆ ಮಾತ್ರವಲ್ಲದೆ ಅಂತಾರಾಜ್ಯ ಅಗತ್ಯ ವಸ್ತುಗಳ ಸಾಗಾಟವೂ ಆರಂಭವಾಗಿದ್ದು, ಇದರಿಂದ ಸಾಗಣೆದಾರರಿಗೂ ಅನುಕೂಲವಾಗಲಿದೆ. ಆಹಾರಧಾನ್ಯ, ಬೇಳೆಕಾಳು, ಹಣ್ಣು, ತರಕಾರಿ ಪೂರೈಕೆಯು ಸಹಜ ಸ್ಥಿತಿಗೆ ಮರಳುತ್ತಿದ್ದು, ರಫ್ತು ವಹಿವಾಟು ಕೂಡ ಚೇತರಿಸಿಕೊಳ್ಳುತ್ತಿದೆ.
● ರಾಜೇಂದ್ರ ಕಟಾರಿಯಾ, ಅಗತ್ಯ ವಸ್ತುಗಳು, ಪೂರೈಕೆ ಸರಪಳಿ ನಿರ್ವಹಣೆ ನೋಡಲ್‌ ಅಧಿಕಾರಿ.

ಎಂ. ಕೀರ್ತಿಪ್ರಸಾದ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next