ಬೆಳಗಾವಿ: ಬಿಜೆಪಿಯಲ್ಲಿ ವಂಶಪಾರಂಪರ್ಯ ರಾಜಕಾರಣಕ್ಕೆ ಅವಕಾಶ ಇಲ್ಲ. ಮುಂದಿನ ದಿನಗಳಲ್ಲಿ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಎಚ್ಚರಿಕೆ ನೀಡಿದರು. ನಗರದಲ್ಲಿ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದ ಅವಲೋಕನ ಸಭೆ ನಡೆಸಿದ ಬಳಿಕ ಜಿಲ್ಲೆಯ ಪ್ರಮುಖ ನಾಯಕರ ಜತೆ ಸಭೆ ನಡೆಸಿದ ಅವರು, ಎಲ್ಲರೂ ವಂಶ ಪಾರಂಪರ್ಯ ರಾಜಕಾರಣ ಮಾಡುವುದಾದರೆ ಬಿಜೆಪಿ ಏಕಿರಬೇಕು ಎಂದು ಖಾರವಾಗಿ ಹೇಳಿದರು.
ಬೆಳಗಾವಿ ಲೋಕಸಭಾ ಉಪಚುನಾವಣೆ ಸಂಬಂಧ ಮಾತನಾಡದಂತೆ ಎಲ್ಲ ನಾಯಕರಿಗೆ ಎಚ್ಚರಿಕೆ ನೀಡಿದ ಅವರು ಈ ಸಂಬಂಧ ಏನಿದ್ದರೂ ರಾಷ್ಟ್ರೀಯ ಅಧ್ಯಕ್ಷರು ನಿರ್ಣಯ ತೆಗೆದುಕೊಳ್ಳುತ್ತಾರೆ. ಹಾಗಾಗಿ ಯಾರೂ ಚರ್ಚಿಸದಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಬೆಳಗಾವಿಯಲ್ಲಿ ನಡೆದ ಜನಸೇವಕ ಸಮಾವೇಶದ ಸಂದರ್ಭದಲ್ಲಿ ಅನೇಕ ಕಡೆಗಳಲ್ಲಿ ಕೆಲವರು ಸುರೇಶ ಅಂಗಡಿ ಅಭಿಮಾನಿ ಬಳಗ ಎಂದು ಫ್ಲೆಕ್ಸ್ ಹಾಕಿದ್ದರು. ಅದನ್ನು ಕರ್ನಾಟಕ ಉಸ್ತುವಾರಿ ಅರುಣ ಸಿಂಗ್ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸಾಹುಕಾರ ಪಡೆ ಎಂದು ಹಾಕಿಕೊಳ್ಳುತ್ತಿದ್ದಾರೆ. ಒಮ್ಮೆ ಬಿಜೆಪಿಗೆ ಬಂದ ನಂತರ ಎಲ್ಲರೂ ಬಿಜೆಪಿಯವರು. ಇಲ್ಲಿ ಯಾರದೇ ಗುಂಪು ಅಭಿಮಾನಿ ಬಳಗ ಇರುವಂತಿಲ್ಲ. ಇದು ಮುಂದುವರಿದರೆ ಪಕ್ಷ ಗಂಭೀರವಾಗಿ ಪರಿಗಣಿಸಲಿದೆ ಎಂದು ನಳಿನ್ ಕುಮಾರ ಕಟೀಲು ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ:ಲಸಿಕೆಯಿಂದ ಅಡ್ಡ ಪರಿಣಾಮವಿಲ್ಲ
ಬರುವ ದಿನಗಳಲ್ಲಿ ಸ್ವಾವಲಂಬಿ ಬೂತ್‌ಗಳನ್ನು ಮಾಡಬೇಕು. ಪಕ್ಷದಿಂದ ಹಣಕಾಸು ಸಹಾಯ ನಿರೀಕ್ಷೆ ಮಾಡದೆ ಸಂಘಟನೆ ಮಾಡಬೇಕು. ಗಟ್ಟಿಯಾದ ಸಂಘಟನೆಯ ಮೂಲಕ ಹಣ ಬಲ, ತೋಳ್ಬಲ ಹಾಗೂ ಕುಟುಂಬ ರಾಜಕಾರಣ ಹಿಮ್ಮೆಟ್ಟಿಸಬೇಕು ಎಂದು ಸೂಚನೆ ನೀಡಿದರು. ಪ್ರಧಾನಿ ಮೋದಿ ಅವರ ಹೆಸರು ಹೇಳಿಕೊಂಡು ಎಷ್ಟು ಚುನಾವಣೆ ಗೆಲ್ಲಲು ಸಾಧ್ಯ. ಎಲ್ಲದಕ್ಕೂ ಅವರೇ ಬರಬೇಕು ಎಂದರೆ ನಾವಿದ್ದು ಏನು ಪ್ರಯೋಜನ. ಇದನ್ನು ಅರ್ಥ ಮಾಡಿಕೊಂಡು ಪಕ್ಷ ಸಂಘಟಿಸಬೇಕು ಎಂದರು. ಸಚಿವರಾದ ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ಶಾಸಕರು ಭಾಗವಹಿಸಿದ್ದರು.