Advertisement

ಒಂದು ಮಳೆಗೇ ತತ್ತರಿಸುತ್ತೇವಲ್ಲ!

12:50 PM Sep 03, 2017 | |

ಮುಂಬೈ ಭಾರತದ ಆರ್ಥಿಕ ಮತ್ತು ವ್ಯಾಪಾರ ರಾಜಧಾನಿಯೂ ಆಗಿರುವುದರಿಂದ, ಆ ನಗರದ ಆರೋಗ್ಯದಲ್ಲಿ ತುಸು ಏರುಪೇರಾದರೂ ಅದರ ಪರಿಣಾಮ ದೇಶದ ಮೇಲೆ ಆಗುತ್ತದೆ. ಈ ಕಾರಣದಿಂದಲೇ ನಾನು ಮುಂಬೈಯನ್ನು ಕೇಂದ್ರವಾಗಿಟ್ಟುಕೊಂಡು ಈ ಲೇಖನ ಬರೆಯುತ್ತಿದ್ದೇನೆ. ಮುಂಬೈ ನಗರಿ ನೀರಲ್ಲಿ ಮುಳುಗಿದ್ದನ್ನು ಜಗತ್ತು ನೋಡುತ್ತಿದೆ.

Advertisement

ಮಂಗಳವಾರವಂತೂ ಮುಂಬೈಯಲ್ಲಿ 24 ತಾಸಲ್ಲಿ 30 ಸೆಂಟಿಮೀಟರ್‌ ಮಳೆಯಾಯಿತು. ಆದಾಗ್ಯೂ ಈ ಮಳೆ ಏಕದಂ ಇಡೀ ನಗರಿಯನ್ನು ಕಟ್ಟಿಹಾಕಲಿಲ್ಲ ಎನ್ನುವುದು ನಿಜವಾದರೂ, ಪಟರಿಗಳು ಮುಳುಗಿದ್ದರಿಂದ ಸ್ಥಳೀಯ ರೈಲುಗಳು ನಿಂತುಬಿಟ್ಟವು. ರಸ್ತೆಗಳಲ್ಲಿ ನೀರು ತುಂಬಿದ್ದರಿಂದ ಆಟೋರಿûಾ ಮತ್ತು ಓಲಾ ಉಬರ್‌ನಂಥ ಅಗ್ರಿಗೇಟರ್‌ ಕ್ಯಾಬ್‌ಗಳೂ ಅಡ್ಡಾಡಲಿಲ್ಲ. ಎಷ್ಟೋ ಭಾಗಗಳಲ್ಲಿ ಮಕ್ಕಳು ರಾತ್ರಿಯನ್ನೆಲ್ಲ ತಮ್ಮ ಶಾಲೆಗಳಲ್ಲೇ ಕಳೆದರು. ಸ್ಥಳೀಯ ಟ್ರೇನ್‌ ಸ್ಟೇಷನ್‌ಗಳಲ್ಲಿ ಸಿಕ್ಕಿಬಿದ್ದಿದ್ದ ಯಾತ್ರಿಗಳು ಉಪಯೋಗಕ್ಕಿಲ್ಲದೇ ನಿಂತಿರುವ ರೈಲ್ವೇ ಡಬ್ಬಿಗಳಲ್ಲಿ ಸಮಯ ಕಳೆಯಬೇಕಾಯಿತು. ಮಳೆಯಿಂದ ತಪ್ಪಿಸಿಕೊಳ್ಳಲು ಅವರಿಗೆ ಬೇರೆ ಯಾವ ಮಾರ್ಗವೂ ಇರಲಿಲ್ಲ. 

ಇನ್ನು ರೆಸ್ಪಾನ್ಸ್‌ನ ವಿಷಯಕ್ಕೆ ಬಂದರೆ ಅದು ಎಂದಿನಂತೆಯೇ ಇತ್ತು. ಬೆಳಗ್ಗೆ ಮಳೆ ಆರಂಭವಾದಾಗ ಆ ದೃಶ್ಯವನ್ನು ನೋಡಿ “ಆಹಾ ಮಳೆ’ ಎಂದು ಮೆಚ್ಚುಗೆಗಳು ಆರಂಭವಾದವು. ಮಧ್ಯಾಹ್ನ ಆಗುವ ಹೊತ್ತಿಗೆ ಮಳೆ ಜೋರಾಗಿ ಸೋಷಿಯಲ್‌ ಮೀಡಿಯಾಗಳಲ್ಲಿ  ನೀರು ತುಂಬಿಕೊಂಡ ಪ್ರದೇಶಗಳ ಫೋಟೋಗಳು ಹರಿದಾಡಲಾರಂಭಿಸಿದವು. ಕೆಲ ಗಂಟೆಗಳ ನಂತರ ಈ ಮಹಾಮಳೆಯನ್ನು ಲೆಕ್ಕಿಸದೇ ಮನೆಗೆ ತಲುಪಿದ ಜನರ ಸಾಹಸಮಯ ಕಥೆಗಳ ಬಗ್ಗೆ ಮಾತನಾಡಲಾಯಿತು. (“ಎಂಥಾ ಮಳೆಗೂ ಅಲುಗಲಿಲ್ಲ ಮುಂಬೈ’ ಎನ್ನುವ ಧಾಟಿಯಲ್ಲಿ!) ತದನಂತರ ಕಾರುಣ್ಯಪೂರ್ಣ ಕಥೆಗಳು ಬರಲಾರಂಭಿಸಿದವು. ಮಳೆಯಲ್ಲಿ ಸಿಕ್ಕಿಬಿದ್ದ ಮುಂಬೈಕರ್‌ಗಳಿಗೆ ಯಾರೋ ಬಿಸಿ ಬಿಸಿ ಚಹಾ ನೀಡಿದ್ದು, ತಮ್ಮ ಮನೆಗಳಲ್ಲಿ ಅಪರಿಚಿತರಿಗೆ ಕೆಲವರು ಜಾಗ ಕೊಟ್ಟಿದ್ದು..ಇತ್ಯಾದಿ. ಇನ್ನು ರಾತ್ರಿಯ ವೇಳೆಯಂತೂ ನ್ಯೂಸ್‌ ಚಾನೆಲ್‌ಗ‌ಳಲ್ಲಿದ್ದವರೆಲ್ಲ ಗಂಟಲು ಹರಿದುಕೊಂಡು ಚರ್ಚೆಯಲ್ಲಿ ತೊಡಗಿದ್ದರು(ತಮ್ಮ ಕೂಗಾಟದಿಂದ ಮೋಡಗಳು ಚದುರಿಹೋಗುತ್ತದೆಂದು ಭಾವಿಸಿದ್ದರಾ?). ಆದರೆ ಚರ್ಚೆ ಮಾಡಿದವರ್ಯಾರೂ ಸಮಸ್ಯೆಗೆ ಪರಿಹಾರವನ್ನಂತೂ ಸೂಚಿಸಲಿಲ್ಲ. ಪರಿಸ್ಥಿತಿ ಹೇಗೆ ಬದಲಾಗುತ್ತದೆ ಎನ್ನುವ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. “ಹರುಕುಮುರುಕು’ ಮೂಲಭೂತ ಸೌಕರ್ಯದ ಮೇಲೆ ನಿಂತಿರುವ ಮುಂಬೈ ಮಳೆಗಾಲವೆಂದಲ್ಲ, ಬೇಸಿಗೆಯ ಬಿಸಿಲಲ್ಲೂ ದೇವರ ಕರುಣೆಯನ್ನೇ ನಂಬಿಕೊಂಡು ಬದುಕುತ್ತಿದೆ. ಹೌದು, ದೇವರ ಮೇಲೆ ಭಾರ ಹಾಕಿ ನಾವು ಮಹಾನಗರವನ್ನು ಮುನ್ನಡೆಸುತ್ತಿದ್ದೇವೆ!

ಟ್ರಿಲಿಯಲ್‌ ಡಾಲರ್‌ ಬಂಡವಾಳವಿರುವ ಶೇರು ಮಾರುಕಟ್ಟೆ ನಮ್ಮ ನಗರಿಯಲ್ಲಿದೆ, ಕೋಟ್ಯಂತರ ಡಾಲರ್‌ ಬಂಡವಾಳವಿರುವ ಮಹಾನಗರ ಪಾಲಿಕೆಯೂ ಇದೆ. ಆದರೆ ಕೆಲವು ಗಂಟೆಗಳ ಮಳೆಯನ್ನು ತಡೆದುಕೊಳ್ಳುವ ಶಕ್ತಿಯಿಲ್ಲ!
ದೇಶವೊಂದರ ವಿತ್ತೀಯ ರಾಜಧಾನಿಯಾಗಿದ್ದೂ ಇಂಥ ದಯನೀಯ ಪರಿಸ್ಥಿತಿ ಎದುರಿಸುತ್ತಿರುವ ಮಹಾನಗರಿ ಪ್ರಪಂಚದಲ್ಲಿ ಮತ್ತೂಂದಿಲ್ಲ ಎನಿಸುತ್ತದೆ. ಇಲ್ಲಿನ ಲೋಕಲ್‌ ಟ್ರೇನ್‌ ಅಂತೂ ಸಾಮಾನ್ಯ ದಿನಗಳಲ್ಲೂ ದಯನೀಯವಾಗಿ ಕಾಣಿಸುತ್ತದೆ. ಮುಂಬೈನ ರಸ್ತೆಗಳನ್ನೂ ಈಗಲೂ ಕೆಟ್ಟದಾಗಿಯೇ ನಿರ್ಮಿಸಲಾಗುತ್ತಿದೆ. ರಸ್ತೆ ನಿರ್ಮಾಣಕ್ಕಾಗಿ ಬಳಸುವ ಸಾಮಗ್ರಿಗಳು ಎಷ್ಟು ಕಳಪೆ ಮಟ್ಟದ್ದಾಗಿರುತ್ತವೆಂದರೆ ಒಂದು ಮಳೆಗೆ ರಸ್ತೆಯೆಲ್ಲ ಕಿತ್ತುಕೊಂಡು ಹೋಗಿಬಿಡುತ್ತದೆ.

ಅಧಿಕಾರ ವರ್ಗಕ್ಕಂತೂ ಎಳ್ಳಷ್ಟೂ ಚಿಂತೆಯಿಲ್ಲ. ಮಹಾರಾಷ್ಟ್ರದ ತುಲನೆಯಲ್ಲಿ ಮುಂಬೈಯ ಮತ ಪ್ರಮಾಣ ಕಡಿಮೆಯೇ ಇದೆ. ದೇಶದ ಅನ್ಯ ಮಹಾನಗರಿಗಳಲ್ಲಿದ್ದಷ್ಟು ರಾಜಕೀಯ ಪ್ರಭಾವ ಈ ಊರಲಿಲ್ಲ. ಇಷ್ಟು ಸಾಲದಂಬಂತೆ ಜನರ ಉದಾಸೀನ ಬೇರೆ! ತಮ್ಮ ಧರ್ಮಕ್ಕೆ ಅಥವಾ ಗುರುವಿಗೆ ಅಪಚಾರವಾಯಿತೆಂದು ಲಕ್ಷಾಂತರ ಸಂಖ್ಯೆಯಲ್ಲಿ ರಸ್ತೆಗಿಳಿಯುವ ಜನರು, ನಗರವನ್ನು ಸರಿಯಾಗಿ ಅಭಿವೃದ್ಧಿ ಮಾಡಿ ಎಂದು ಎಂದೂ ಬೀದಿಗಿಳಿಯುವುದಿಲ್ಲ. ಮುಂಬೈ ಅಂತ ಅಲ್ಲ, ದೇಶದ ಯಾವುದೇ ನಗರವಿರಲಿ ಅಲ್ಲಿನ ಜನರೆಲ್ಲ ಒಂದೇ ಒಂದು ದಿನ ಹೊರ ಬಂದು “ನಮ್ಮ ಊರನ್ನು ಸರಿಪಡಿಸಿ’ ಎಂದು ಬೇಡಿಕೆಯಿಟ್ಟರೆ ಸಾಕು ಅಧಿಕಾರವರ್ಗ ಧಡಕ್ಕನೆ ಎದ್ದು ಕೂಡುತ್ತದೆ. ಆದರೆ ನಾವು ಇದನ್ನೆಲ್ಲ ಮಾಡುವುದೇ ಇಲ್ಲ. 

Advertisement

ಈ ಕಾರಣಕ್ಕಾಗಿಯೇ ನಾನು ಎರಡು ಸಲಹೆಗಳನ್ನು ಕೊಡಲು ಬಯಸುತ್ತೇನೆ. ಇದು ಕೇವಲ ಮುಂಬೈಗಷ್ಟೇ ಅಲ್ಲ, ದೇಶದ ಅನ್ಯ ನಗರಗಳ ವಿಷಯದಲ್ಲೂ ಉಪಯೋಗಕ್ಕೆ ಬರಬಹುದು. ಮೊದಲನೆಯದ್ದು ಬಹಳ ಸುಲಭ ಮಾರ್ಗ ಅದನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಅನುಷ್ಠಾನಕ್ಕೆ ತಂದುಬಿಡಬೇಕು. ಇನ್ನು ಎರಡನೆಯದ್ದು ತುಸು ಕಠಿಣ ಮಾರ್ಗ. ಆದರೆ ಈ ಮಾರ್ಗದಲ್ಲಿ ನಡೆದರೆ ಸಮಸ್ಯೆಗಳನ್ನು ನಿಜವಾದ ಅರ್ಥದಲ್ಲಿ ಪರಿಹರಿಸಲು ಸಾಧ್ಯವಾಗುತ್ತದೆ. ಈ ಸಲಹೆಗಳನ್ನು ಅನುಷ್ಠಾನಕ್ಕೆ ತರುವ ವಿಷಯ ಅಧಿಕಾರ ವರ್ಗಕ್ಕೆ ಬಿಟ್ಟಿದ್ದು, ಅಧಿಕಾರ ವರ್ಗದ ಮೇಲೆ ಒತ್ತಡ ಹೇರುವ ಕೆಲಸ ಜನರಿಗೆ ಬಿಟ್ಟದ್ದು. ಫ‌ಸ್ಟಫಾಲ್‌, ಹವಾಮಾನ ವೈಪರೀತ್ಯಗಳ ಬಗ್ಗೆ ತಕ್ಷಣ ಎಚ್ಚರಿಕೆ ನೀಡುವಂಥ ಒಂದು ಉತ್ತಮ ವ್ಯವಸ್ಥೆ ನಮಗೆ ಬೇಕು. ನಮ್ಮ ಈಗಿನ ಹವಾಮಾನ ವರದಿಗಳು ಕೇವಲ “ಜೋರು ಮಳೆಯಾಗುವ ಸಾಧ್ಯತೆಯಿದೆ’ ಎಂಬ ಮಾಹಿತಿ ನೀಡುತ್ತವಲ್ಲ, ಅದರಿಂದ ಯಾವ ಉಪಯೋಗವೂ ಇಲ್ಲ. ಈ ವರದಿ “ಕೈಗೊಳ್ಳಬೇಕಾದ ಕ್ರಮಗಳ’ ಬಗ್ಗೆ ಮಾತನಾಡುವುದಿಲ್ಲ. ಹವಾಮಾನ ಎಷ್ಟು ಹದಗೆಡುವ ಸಾಧ್ಯತೆಯಿದೆ ಮತ್ತು ಪ್ರತ್ಯೇಕ ಸ್ತರದಲ್ಲಿ ಯಾವ ರೀತಿಯ ಹೆಜ್ಜೆಯಿಡುವ ಅಗತ್ಯವಿದೆ ಎನ್ನುವುದನ್ನು ತಿಳಿಹೇಳುವ ವ್ಯವಸ್ಥೆ ಬರಬೇಕು. ಉದಾಹರಣೆ ಹೇಳುವುದಾದರೆ, ಹವಾಮಾನ ಇಲಾಖೆ, 0, 1, 2, 3, 4, 5… ಈ ರೀತಿಯ ಸಂಖ್ಯೆಗಳ ಆಧಾರದಲ್ಲಿ ಜನರಿಗೆ ಎಚ್ಚರಿಕೆ ನೀಡುವಂತಾದರೆ ಹೇಗೆ?

ಅಂದರೆ…
0:    ಸಾಮಾನ್ಯ ಸ್ಥಿತಿ 
1:    ಹವಾಮಾನ ಹದಗೆಡಬಹುದು, ಹವಾಮಾನ ಸುದ್ದಿಗಳ ಮೇಲೆ ಗಮನವಿರಲಿ
2:    ಜೋರು ಮಳೆ/ ಗಾಳಿ. ಪ್ರಾಥಮಿಕ ಶಾಲೆಗಳನ್ನು ಬಂದ್‌ ಮಾಡಬೇಕು
3:    ಬಲವಾದ ಗಾಳಿ-ಮಳೆ. ಎಲ್ಲಾ ಶಾಲೆಗಳನ್ನೂ ಮುಚ್ಚಿ. ಜನರು ಮನೆಯ ಒಳಗಿರುವುದೇ ಕ್ಷೇಮ
4:    ಬಹಳ ಕೆಟ್ಟ ಹವಾಮಾನ. ಶಾಲೆ, ಕಾಲೇಜು, ಕಚೇರಿಗಳನ್ನು ಬಂದ್‌ ಮಾಡಿ ಕೇವಲ ಅತ್ಯಾವಶ್ಯಕ ಸೇವೆಗಳನ್ನಷ್ಟೇ ಜಾರಿಯಲ್ಲಿಡಿ. ಸಾರ್ವಜನಿಕ ಸಾರಿಗೆಯನ್ನು ಸೀಮಿತಗೊಳಿಸಿ. ಜನರು ಮನೆಯಿಂದ ಹೊರಗೆ ಬರಬೇಡಿ
5:    ಇಡೀ ನಗರಿ ಬಂದ್‌ ಸ್ಥಿತಿಯಲ್ಲಿರಲಿ
ಕೇವಲ ಅಂಕಿಯನ್ನು ಹೇಳಿದರೆ ಸಾಕು ಎಲ್ಲರೂ ಕೂಡಲೇ ಎಚ್ಚೆತ್ತುಕೊಳ್ಳುವಂತೆ, ತಮ್ಮ ಗತಿವಿಧಿಗಳ ಮೇಲೆ ಗಮನ ಹರಿಸುವಂತೆ ಆಗುತ್ತದೆ. ಅಲ್ಲದೇ ನಾಟಕೀಯ ರೂಪದಲ್ಲಿ ಈಗ ಎದುರಾಗುತ್ತಿರುವ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಮಂಗಳವಾರದ ಮಳೆ 4ರ ಅಂಕಿಯಲ್ಲಿ ಆದದ್ದು. 2005ರಲ್ಲಾದ ಮಳೆಯು ನಂಬರ್‌ 5ರ ಸ್ಥಿತಿಯಲ್ಲಿತ್ತು. 

ನಿಸ್ಸಂಶಯವಾಗಿಯೂ, ಸ್ಪಷ್ಟವಾಗಿ ಹವಾಮಾನ ಏರುಪೇರುಗಳನ್ನು ಗುರುತಿಸುವುದು ಕಷ್ಟವಾದರೂ, ಈಗಿನ ತಂತ್ರಜ್ಞಾನದಲ್ಲಿ ಬಹಳ ಸುಧಾರಣೆಯಂತೂ ಆಗಿದೆ. ಆದಾಗ್ಯೂ ತಂತ್ರಜ್ಞಾನದ ಎಡವಟ್ಟಿನಿಂದ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಯೂ ಇದೆ. ಆದರೆ ಆಗೀಗ ಜನರು ಮನೆಯಿಂದಲೇ ಕಾರ್ಯ ನಿರ್ವಹಿಸಬಹುದಲ್ಲ? ಇದರಿಂದ ಉತ್ಪಾದಕತೆಯ ಲುಕ್ಸಾನೇನೂ ಹೆಚ್ಚಿನ ಪ್ರಮಾಣದಲ್ಲಿ ಆಗದು. ಈ ರೀತಿ ಹವಾಮಾನ ಎಚ್ಚರಿಕೆಯನ್ನು ಕೊಡುವ ವ್ಯವಸ್ಥೆ ಹಾಂಗ್‌ಕಾಂಗ್‌ನಲ್ಲಿ ಸಕ್ಷಮವಾಗಿದೆ. ಹಾಂಗ್‌ಕಾಂಗ್‌ನಲ್ಲಿ ಬಹಳ ಮಳೆಯಾಗುತ್ತದೆ. ಆದರೂ ಅಲ್ಲಿ ಎಂಥ ಮಳೆಯಲ್ಲೂ ಹೆಚ್ಚು ಸಮಸ್ಯೆಯಾಗುವುದೇ ಇಲ್ಲ ಮತ್ತು ಇಡೀ ನಗರದ ಜನಜೀವನ ನಿಂತುಹೋಗುವುದಿಲ್ಲ. 
ನಮ್ಮ ದೇಶದ ನಗರಗಳು ಬಹಳ ಕಷ್ಟ ಅನುಭವಿಸುತ್ತಿವೆ. ಈ ಕಷ್ಟವನ್ನು ನಾವು ಸಹಿಸಿಕೊಂಡಿದ್ದು ಸಾಕು. ಹವಾಮಾನ ಎಚ್ಚರಿಕೆಯನ್ನು ಕೊಡುವ ಸಕ್ಷಮ ವ್ಯವಸ್ಥೆಗಳು, ಒಳ್ಳೆಯ ರಸ್ತೆಗಳು ಮತ್ತು ಡ್ರೈನೇಜ್‌ ಸಿಸ್ಟಮ್‌ಗಳು ಅನುಷ್ಠಾನಕ್ಕೆ ಬರಲಿ.

– ಚೇತನ್‌ ಭಗತ್‌, ಲೇಖಕ

Advertisement

Udayavani is now on Telegram. Click here to join our channel and stay updated with the latest news.

Next